24.8 C
Udupi
Monday, October 12, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 668

ಭರತೇಶ ಶೆಟ್ಟಿ,ಎಕ್ಕಾರು

ನನ್ನ ಮನದಾಸೆಯಂತೆ ಆ ಬಡ ಬ್ರಾಹ್ಮಣನ ಮನೆಯೊಳಗೆ ಪ್ರವೇಶಿಸಿದೆ. ಒಳ ಪ್ರವೇಶಿಸಿ ನೋಡಿದರೆ ಆ ಧರ್ಮಮೂರ್ತಿ ಉಂಡ ಸ್ಥಳದಲ್ಲಿ ಸ್ವಲ್ಪವೇ ಸ್ವಲ್ಪ ಆಹಾರ ಕೆಳಗೆ ಬಿದ್ದಿತ್ತು. ಹಾಗೆ ಬಿದ್ದಿದ್ದ ಆಹಾರದ ಹಿಟ್ಟಿನ ಕಣಗಳನ್ನೆಲ್ಲ ನೆಕ್ಕಿಕೊಂಡೆ. ನಂತರವೂ ಏನೋ ಒಂದು ರೀತಿಯ ಆಸೆಗಳು ಮನದಲ್ಲಿ ಗರಿಗೆದರಿದವು. ಆ ಸ್ಥಳದಲ್ಲಿ ಮಲಗಿ ಹೊರಳಾಡಿದೆ. ನಂತರ ಹೊರಬಂದು ನೋಡಿದರೆ ನನ್ನ ಶರೀರದ ಬಲಭಾಗ ಸ್ವರ್ಣದ ವರ್ಣಕ್ಕೆ ತಿರುಗಿತ್ತು. ಚಿನ್ನದ ಬಣ್ಣವಾಗಿರುವ ನನ್ನ ಶರೀರದ ಬಲಭಾಗದ ಕುರಿತಾಗಿ ಯಾಕೆ ಹೀಗಾಯಿತು ಎಂದು ಯೋಚಿಸಿದಾಗ ಬ್ರಾಹ್ಮಣನ ಮನೆಯಲ್ಲಿ ಉಂಡ ಸ್ಥಳದ ಎಂಜಲಿನಲ್ಲಿ ಹೊರಳಾಡಿದ ಕಾರಣ ಎಂದು ನನಗರ್ಥವಾಯಿತು. ಆ ಬಡ ಬ್ರಾಹ್ಮಣ ಮಾಡಿದ ದಾನದ ಶ್ರೇಷ್ಠತೆಯ ಕುರಿತಾಗಿ ಆ ದೇವತೆ ಹೇಳಿದ ಮಾತುಗಳನ್ನು ಸ್ಮರಿಸಿಕೊಂಡೆ. ಇಲ್ಲಿ ನಡೆದುದು ಮಹತ್ತರವಾದ ಧರ್ಮ ಯಜ್ಞ. ನೀವು ನೀಡಿದ ದಾನ ಸರ್ವಕಾಲಿಕ ಶ್ರೇಷ್ಠವಾದುದು. ಈ ಆಧಾರವನ್ನು ಇಟ್ಟುಕೊಂಡು ಆ ಶ್ರೇಷ್ಠ ದಾನದ ಉಚ್ಚಿಷ್ಠದಿಂದ ನನ್ನ ದೇಹದ ಭಾಗ ಬಂಗಾರವಾಗಿದೆ ಎಂಬುವುದು ಸ್ಪಷ್ಟವಾಯಿತು. ಅಂದಿನಿಂದ ಬಿಡದೆ ಒಂದು ಪ್ರಯತ್ನ ಮಾಡಲಾರಂಭಿಸಿದೆ. ಅದೇನೆಂದರೆ ಎಲ್ಲೆಲ್ಲಾ ಮಹತ್ತರವಾದ ಯಜ್ಞ ಮತ್ತು ದಾನಗಳು ನಡೆಯುತ್ತವೋ ಅಲ್ಲಿಗೆಲ್ಲ ಹೋಗಿ ಉಚ್ಚಿಷ್ಟದ (ಎಂಜಲಿನ) ಮೇಲೆಲ್ಲ ಹೊರಳಾಡತೊಡಗಿದ್ದೇನೆ. ಹಾಗೆ ಮಾಡುವ ಉದ್ದೇಶವೇನೆಂದರೆ, ಆ ಬಡ ಬ್ರಾಹ್ಮಣ ಮಾಡಿದ ದಾನಕ್ಕೆ ಸರಿ ಸಮಾನವಾದ ದಾನವೆಲ್ಲಾದರೂ ನಡೆದರೆ ನನ್ನ ಶರೀರದ ಉಳಿದರ್ಧ ಭಾಗವೂ ಸುವರ್ಣಮಯ ವರ್ಣಕ್ಕೆ ತಿರುಗುತ್ತದೆ. ಆ ಕಾರಣದಿಂದ ಧರ್ಮರಾಯನಿಂದ ನೆರವೇರಿಸಲ್ಪಡಲಿದ್ದ ಈ ಯಾಗದ ಕುರಿತಾಗಿ ವಿಶೇಷ ಕಾತರವನ್ನು ಹೊಂದಿದ್ದೆ. ಕ್ಷಣ ಕ್ಷಣವೂ ಯಾಗ ಸಮಾಪ್ತಿ ಮತ್ತು ದಾನ ಧರ್ಮಗಳ ಸಂಪನ್ನತೆಗಾಗಿ ಕಾದು ಕಾದು ತಪಸ್ಸಿನಂತೆ ಏಕಾಗ್ರತೆಯಿಂದ ನೋಡುತ್ತಾ ಕುಳಿತಿದ್ದೆ. ಎಂತಹ ಅದ್ಬುತ ಯಾಗ, ಭಕ್ತಿಯ ಪಾರಮ್ಯವನ್ನು ಕಂಡೆ. ದಾನ ಧರ್ಮಾದಿಗಳೂ ಅಮಿತವಾಗಿ ಸಾಗಿತು. ಇಲ್ಲಿ ಬಂದ ಯಾರೋಬ್ಬರೂ ನಿರಾಶೆಯಿಂದ ಹೋದದ್ದಿಲ್ಲ. ಹಾಡಿ ಹೊಗಳುವವರೇ ಎಲ್ಲರೂ. ಹೀಗೆ ಸಾಗಿದ ಯಜ್ಞ ಯಾವಾಗ ಪೂರ್ಣಗೊಂಡಿತೋ, ನಾನು ಕಾಯುತ್ತಿದ್ದ ಆ ಕ್ಷಣ ಬಂದಿತು… ಬಹಳಷ್ಟು ಆಸೆಯಿಂದ ಓಡೋಡುತ್ತಾ ಬಂದು ದಾನಛತ್ರದಲ್ಲಿ ಬಿದ್ದಿದ್ದ ಎಂಜಲುಗಳ ಮೇಲೆ ಹೊರಳಾಡಿದೆ, ಉರುಳು ಉರುಳಾಗಿ ಪೂರ್ತಿ ಶರೀರಕ್ಕೆ ಮೆತ್ತಿಕೊಂಡೆ. ಆದರೂ ಏನೂ ಬದಲಾಗಲಿಲ್ಲ. ಮತ್ತಷ್ಟೂ ಪ್ರಯತ್ನದಿಂದ ಅದೇ ರೀತಿ ಮಾಡಿದರೂ ಪರಿಣಾಮದಲ್ಲಿ ಯಾವುದೇ ವ್ಯತ್ಯಯವಾಗದೆ ಹೋದಾಗ ನಾನು ನಿರಾಸೆಯಿಂದ ಜೋರಾಗಿ ಕೂಗಿದೆ. ನನ್ನ ಆಸೆ ಕೊನೆಗೂ ಕೈಗೂಡಲಿಲ್ಲ. ನನ್ನ ಶರೀರದ ಉಳಿದರ್ಧ ಭಾಗ ಬಂಗಾರದ ಬಣ್ಣಕ್ಕೆ ಬದಲಾಗಲಿಲ್ಲ. ಹಾಗಾಗಿ ಅನುಭವದ ಆಧಾರದಿಂದ ಸುಸ್ಪಷ್ಟವಾಗಿ ಆ ಬಡ ಬ್ರಾಹ್ಮಣ ಮಾಡಿದ್ದ ದಾನಕ್ಕೆ ಈ ಯಜ್ಞವಾಗಲಿ, ದಾನವಾಗಲಿ ಸಮಾನವಾಗಲಿಲ್ಲ ಎಂದರ್ಥವಾಯಿತು. ಬಡ ಬ್ರಾಹ್ಮಣನಿತ್ತ ದಾನ ಸರ್ವಶ್ರೇಷ್ಠವಾಗಿತ್ತು ಎಂದು ನಿಸ್ಸಂದೇಹವಾಗಿ ಅರಿತು ನುಡಿದೆ” ಎಂದು ಮುಂಗುಸಿ ಹೇಳಿತು. ಕೇಳುತ್ತಿದ್ದ ಎಲ್ಲರಿಗೂ ಪರಮಾಶ್ಚರ್ಯವೂ, ಮುಂಗುಸಿಯ ಕಥೆ ಕೇಳಿ ಮೈಮರೆತು ಹೋಗುವಷ್ಟು ಯೋಚನೆಯೂ ಮನಸ್ಸಿಗಾವರಿಸಿತು. ಎಲ್ಲರೂ ಯೋಚನೆಯಿಂದ ಹೊರಬಂದು ನೋಡಿದರೆ ಮುಂಗುಸಿ ಎತ್ತಲೋ ಹೋಗಿಯಾಗಿತ್ತು. ಅಲ್ಲಿರಲಿಲ್ಲ.

ಆದರೆ ಧರ್ಮರಾಯ ಮಾತ್ರ ತೀರಾ ವಿಭಿನ್ನ ರೀತಿಯಲ್ಲಿ ಯೋಚಿಸುತ್ತಾ ವ್ಯಥೆಗೊಳಗಾಗಿದ್ದಾನೆ. ಅಂದರೆ ತಾನು ಶೂನ್ಯ ಭಾವದಲ್ಲಿ ನಿಂತು ಯಾವ ತೆರನಾದ ಸ್ವಾರ್ಥವನ್ನೂ ಹೊಂದಿರದೆ ಯಜ್ಞ ಕಾರ್ಯದಲ್ಲಿ ಭಾಗಿಯಾಗಿದ್ದೆ. ಸಮರ್ಪಣಾ ಭಾವದಿಂದ ಎಲ್ಲಾ ಕಾರ್ಯಗಳ ಬಗ್ಗೆ ಯೋಚಿಸಿದ್ದೆ, ಹಾಗೆಯೆ ತೊಡಗಿಕೊಂಡಿದ್ದೆ. ಆದರೂ ನಮ್ಮಿಂದ ವಿರಚಿಸಲ್ಪಟ್ಟ ಯಾಗ ಪರಿಪೂರ್ಣತೆಯನ್ನು ಸಾಧಿಸಿಲ್ಲ ಎಂಬ ನಿದರ್ಶನ ಕಣ್ಮುಂದೆ ಪ್ರಮಾಣ ಸಾಕ್ಷಿ ರೂಪದಲ್ಲಿ ಕಾಣ ಸಿಕ್ಕಿದ ಮೇಲೆ ಏನೋ ಲೋಪವಾಗಿರುವುದು ನಿಜ. ಹೀಗೆಲ್ಲಾ ಯೋಚಿಸುತ್ತಾ ಖಿನ್ನನಾಗಿ ಕುಸಿದು ಹೋದನು. ಅಯ್ಯೋ ಈ ವ್ಯತ್ಯಾಸವನ್ನು ಯಾವ ವಿಧಾನದಲ್ಲಿ ಸರಿದೂಗಿಸಬಹುದು? ಮಹಾತ್ಮರು, ಪುಣ್ಯಾತ್ಮರು ಹೆಚ್ಚೇಕೆ ಪ್ರತ್ಯಕ್ಷ ದೇವರು ನಮ್ಮ ಜೊತೆಗಿದ್ದರೂ ಯಜ್ಞ ಪರಿಪೂರ್ಣವಾಗದೆ ಹೋಯಿತೇ? ಎಂದು ಮತ್ತೆ ಮತ್ತೆ ಯೋಚಿಸುತ್ತಾ ಕುಗ್ಗಿ ಹೋದನು.

ಧರ್ಮರಾಯನ ಮನಸ್ಥಿತಿಯನ್ನು ಸರಿಯಾಗಿ ಅಕ್ಷರಶಃ ಅರ್ಥ ಮಾಡಿಕೊಂಡ ವಾಸುದೇವ ಕೃಷ್ಣ ಬಳಿ ಬಂದು “ಧರ್ಮರಾಯಾ ನೀನು ಯಾಕಾಗಿ ಇಷ್ಟೊಂದು ಕೊರಗುತ್ತಿರುವೆ? ಈ ತೆರನಾಗಿ ದುಃಖಿಸುವಂತಹುದು ಏನಾಗಿದೆ? ನನಗಂತೂ ಅರ್ಥವಾಗುತ್ತಿಲ್ಲ. ಆ ಮುಂಗುಸಿ ಹೇಳಿರುವುದರಲ್ಲಿ ದುಃಖ ಬಾಧಿಸುವಂತಹ, ಅಹಿತಕರ ವಿಚಾರಗಳು ಇರಲಿಲ್ಲ. ಆದರೂ ನಿನ್ಯಾಕೆ ವ್ಯಾಕುಲ ಚಿತ್ತನಾಗಿರುವೆ. ಧರ್ಮಕ್ಕೆ ಸಾಕ್ಷಾತ್ ಪ್ರತಿರೂಪದಂತಿರುವ ನಿನಗೆ ಧರ್ಮ ಸೂಕ್ಷ್ಮವನ್ನು ವಿವರಿಸಿ ಹೇಳುವ ಅಗತ್ಯವಿದೆಯೆ? ಮುಂಗುಸಿಯ ಮಾತುಗಳನ್ನು ಸರಿಯಾಗಿ ಸ್ಮರಿಸಿಕೋ ಒಮ್ಮೆ… ನಿನ್ನ ಯಾಗ ಸರಿಯಾಗಲಿಲ್ಲ, ಅಥವಾ ಇಂತಹ ಲೋಪದೋಷಗಳಾಗಿದೆ ಎಂದು ಏನಾದರು ನಿಖರವಾಗಿ ಹೇಳಿದೆಯೆ? ಅಥವಾ ನಿನ್ನನ್ನಾಗಲೀ ಅಥವಾ ನಿನ್ನ ಮುಖೇನ ಕೃತ ಕರ್ಮವನ್ನಾಗಲಿ ಹಳಿದು ನಿಂದಿಸಿದೆಯೆ? ಇಲ್ಲವಲ್ಲಾ? ಅದು ಅದರ ಮನಸ್ಸಿಗನುಗುಣವಾಗಿ ಅದರದ್ದಾದ ಮಾನದಂಡವನ್ನು ಆಧಾರವಾಗಿ ಬಡ ಬ್ರಾಹ್ಮಣನ ಮನೆಯಲ್ಲಾದ ದಾನವೇ ಶ್ರೇಷ್ಠ ಎಂದಿದೆ. ಅದಕ್ಕೆ ಇದು ಸಮಾನವಾಗಿಲ್ಲ ಎಂದಿದೆ. ಆಯಿತು ಅದೇ ಸತ್ಯ ಎಂದಿರಲಿ. ಹಾಗಾದರೆ ನಿನ್ನ ಜೊತೆಗೆ ಇಷ್ಟು ಮಹಿಮಾನ್ವಿತರಾದ ಋಷಿವರೇಣ್ಯರು ಅವರ ತಪಸ್ಶಕ್ತಿಯನ್ನು ಧಾರೆಯೆರೆದು ಗೈದ ಯಾಗ, ವಿಧಿ ವಿಧಾನಗಳು ಏನೂ ಅಲ್ಲ ಎಂದಾಯಿತೆ? ನಿನ್ನದ್ದಾದ ಯೋಚನೆಗಳು, ಧರ್ಮ ಬುದ್ಧಿ, ವಿವೇಕ, ಕರ್ಮಗಳು, ವ್ರತ ಇವೆಲ್ಲವುಗಳ ಮೇಲೂ ಸಂಶಯ ಮೂಡಿತೆ? ಧರ್ಮರಾಯಾ! ನಿನಗೊಂದು ಲೋಕದ ಜನರ ಮನಸ್ಥಿತಿಯ ಸತ್ಯ ವಿಚಾರ ಹೇಳುತ್ತೇನೆ ಕೇಳು, ಕೇಳಿ ಸರಿಯಾಗಿ ಅರ್ಥ ಮಾಡಿಕೋ…. ಇಲ್ಲಿ ನೆರೆದ ಸಹಸ್ರಾರು ಮಂದಿ ನಿನ್ನಿಂದ ನಡೆಸಲ್ಪಟ್ಟ ಯಾಗ, ದಾನ, ಧರ್ಮ ಹಿಂದೆಂದೂ ಕೇಳರಿಯದ ರೀತಿಯಲ್ಲಿ ಅದ್ಬುತವಾಗಿತ್ತು ಎಂದು ಹಾಡಿ ಹೊಗಳಿ ಕೊಂಡಾಡಿದರು. ಅದಾಗುವಾಗ ಒಂದು ಮುಂಗುಸಿ ಬಂದು ಇದಕ್ಕಿಂತ ಉತ್ಕೃಷ್ಟವಾದ ಯಜ್ಞ ಮತ್ತು ದಾನ ಬೇರೆ ಕಡೆ ಆಗಿದೆ ಎಂದು ಹೇಳಿತು. ಇದು ಧರ್ಮ ಸೂಕ್ಷ್ಮ – ಯಾರೋ ಹೊಗಳಿದಾಗ ಹಿಗ್ಗುವುದು ಸ್ವಾಭಾವಿಕ ಗುಣ. ಅದೇ ತೆಗಳಿದಾಗ ಕುಗ್ಗಿ ಕುಸಿದು ಮನಸ್ಸು ವಿಚಲಿತವಾಗಿ ಯಾರು ತಪ್ಪು ಮಾಡಿದವರು, ಯಾರಿಂದ ದೋಷವಾಗಿದೆ ಎಂಬ ಆರೋಪ ಬುದ್ದಿ ಜಾಗೃತವಾಗುವುದು. ಇದನ್ನು ಸರಿ ಮಾಡುವುದು ಹೇಗೆ ಎಂಬ ಪರ್ಯಾಯ ಚಿಂತನೆಯೂ ತರ್ಕಕ್ಕೆ ವಿಷಯವಾಗುತ್ತದೆ. ನನ್ನದ್ದೊಂದು ಪ್ರಶ್ನೆಯಿದೆ… ತುಲನೆ ಮಾಡಿ ಅದಕ್ಕಿಂತ ಇದು ಶ್ರೇಷ್ಠ, ಅಥವಾ ಇದಕ್ಕಿಂತ ಅದೇ ಶ್ರೇಷ್ಠ ಎಂಬ ಹೋಲಿಕೆ ಮಾಡುವುದು ಎಷ್ಟು ಸಮಂಜಸ? ನೀನು ಯಾಗ ಮಾಡಲು ಮುಂದಾದದ್ದು ಅತಿ ಶ್ರೇಷ್ಠ ಆಗಬೇಕೆಂಬ ಸ್ಪರ್ಧೆಗೋ ಅಥವಾ ನಿನ್ನ ಮನಕ್ಕಾವರಿಸಿದ ದುಗುಡ – ಬಂಧು ಹತ್ಯಾ ದೋಷದ ನಿವಾರಣೆಗಾಗಿಯೋ? ಒಂದು ವೇಳೆ, ನಿನ್ನ ಸಂಕಲ್ಪದಂತೆ ಬಂಧು ಹತ್ಯಾ ದೋಷ ನಿವಾರಣೆ ಆಗಿಲ್ಲ ಎಂಬ ನಿದರ್ಶನ ದೊರೆತರೆ… ಆಗ ವ್ಯಥೆ ಪಡುವುದಕ್ಕೆ ಅರ್ಥವಿದೆ. ಅದನ್ನು ಬಿಟ್ಟು ನಿನಗಿಂತ ಉತ್ತಮವಾದ ಯಜ್ಞವೋ, ದಾನವೋ ಇನ್ನೊಬ್ಬರಿಂದ ಆಗಿದೆ ಎಂದ ಮಾತ್ರಕ್ಕೆ ಕೊರಗಿದರೆ ಅದೆಷ್ಟು ಸರಿ? ಅಥವಾ ಅದೇ ಮಾನದಂಡದಲ್ಲಿ ನಿನ್ನ ಯಜ್ಞದ ಶ್ರೇಷ್ಠತೆಯನ್ನು ಅಳೆಯುವುದು ಸಾಧ್ಯವೇ? ಬಡ ಬ್ರಾಹ್ಮಣನ ಮನಸ್ಥಿತಿ ಮತ್ತು ದಾನ ಸರ್ವತಾ ಶ್ರೇಷ್ಠವಾದುದು. ಆತನಿಗೆ ಪ್ರಾಪ್ತವಾದ ಗತಿಯೂ ಸೂಕ್ತವಾದುದು. ಹಾಗೆಂದು ನೀನು ರಾಜ್ಯವಾಳುವ ದೊರೆ, ನಿನ್ನಿಂದ ಆಗಬೇಕಾಗಿರುವುದು ಪ್ರಜಾ ಪರಿಪಾಲನೆ. ಹಾಗಿರುವಾಗ ನೀನು ವಿವೇಕಿಯಾಗು. ಜಾಜಿ ಹೂವಿನ ಪರಿಮಳ ಬಹಳಷ್ಟು ಸೊಗಸಾಗಿತ್ತು ಎಂದರೆ ಅದು ಸತ್ಯವೇ ಹೌದು. ಹಾಗೆಂದು ಅದರರ್ಥ ಮಲ್ಲಿಗೆ ಹೂವಿನ ಪರಿಮಳ ಚೆನ್ನಾಗಿಲ್ಲ ಎಂದಾಗುತ್ತದೆಯೇ? ಯಾರೋ ಪ್ರಶಂಸೆ ಮಾಡಿದರೆಂದು ಹಿಗ್ಗಬೇಡ. ಅಥವಾ ಇನ್ನಾರೋ ತೆಗಳಿದರೆ, ಅಥವಾ ಬೇರೆ ಮಾತನಾಡಿದರೆ ಕುಗ್ಗಬೇಡ. ಹೊಗಳಿಕೆಗೆ ಉಬ್ಬುವುದು, ತೆಗಳಿಕೆಗೆ ಶಿಥಿಲನಾಗುವುದು ಸ್ಥಿತಪ್ರಜ್ಞನಾದ ನಿನಗೆ ಶೋಭೆಯಲ್ಲ. ಈ ಎಚ್ಚರಿಕೆಯನ್ನು ನಿನ್ನಲ್ಲಿ ಜಾಗೃತಗೊಳಿಸಲು ಆ ಮುಂಗುಸಿ ಇಲ್ಲಿ ಕಾಣಿಸಿಕೊಂಡಿದೆ ಎಂದು ಭಾವಿಸಿಕೊಳ್ಳಬೇಕು. ನೀನು ಮಾಡುವ ಕರ್ಮವನ್ನು ಶೃದ್ಧೆಯಿಂದ ಮಾಡುವುದು ಜೀವನ ಧರ್ಮ. ಧರ್ಮಯುತವಾಗಿ ಶೃದ್ಧಾ ಭಕ್ತಿಯಿಂದ ನೀನು ಯಜ್ಞ ಮಾಡಿಸಿದ್ದು ಹೌದು ಎಂಬ ವಿಶ್ವಾಸ ನಿನಗಿದ್ದರೆ ಬಾಹ್ಯ ಪ್ರಪಂಚದ ಹೊಗಳಿಕೆ ತೆಗಳಿಕೆಗಳ ಪ್ರಮಾಣ ಪತ್ರ ನಗಣ್ಯವಾಗುತ್ತದೆ. ಈಗ ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳಬೇಡ. ನಿನ್ನ ಕೃತ ಕರ್ಮ ಸಾರ್ಥಕವಾಗಿದೆ, ಸಂಕಲ್ಪಿತ ಉದ್ದೇಶ ಈಡೇರಿದೆ, ಮಹಾತ್ಮರು ಜೊತೆಗಿದ್ದು ಎಲ್ಲವೂ ಸಾಂಗವಾಗಿ ನೆರವೇರಿದೆ. ಎಂಬಲ್ಲಿಗೆ ಯಾವ ಸಂದೇಹ ಗೊಂದಲಗಳನ್ನೂ ಮನದಲ್ಲಿ ಉಳಿಸಬೇಡ” ಎಂದು ವಿಸ್ತೃತವಾಗಿ ವಿವರಿಸಿ ಸಂತೈಸಿದನು. ಧರ್ಮರಾಯನಿಗೂ ಮನಸ್ಸು ನಿರಾಳವಾಯಿತು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page