
ಪರಿಪೂರ್ಣತೆಯೆನ್ನುವುದು ಯಾವುದರಲ್ಲೂ ಇಲ್ಲ. ನಾವು ಸದಾ ಕಲಿಯುತ್ತಲೇ ಇರಬೇಕು – ಗಾಯಕಿ ನಿನಾದ ನಾಯಕ್ ಶ್ರೀ ಭುವನೇಂದ್ರ ಕಾಲೇಜಿನ ಹಳೆ ವಿದ್ಯಾರ್ಥಿನಿ, ಪ್ರೇಮದ ಊರಲಿ ಸಿನಿಮಾದ ಟೈಟಲ್ ಸಾಂಗ್ ನ ಹಿನ್ನೆಲೆ ಗಾಯಕಿ ನಿನಾದ ನಾಯಕ್ ಇವರು ಭುವನೇಂದ್ರ ಕಾಲೇಜು, ಕಾರ್ಕಳದಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಘ ಹಾಗೂ ಲಿಲಿತ ಕಲಾ ಸಂಘದ ಉದ್ಘಾಟನೆಯನ್ನು ನೆರವೇರಿಸಿದರು.
ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತ, ಐದು ವರ್ಷಗಳ ಕಾಲ ಭುವನೇಂದ್ರ ಕಾಲೇಜಿನಲ್ಲಿ ನನ್ನ ವಿದ್ಯಾಭ್ಯಾಸವನ್ನು ಪಡೆದಿದ್ದೇನೆ. ಈ ಕಾಲೇಜು ನನಗೆ ಅನೇಕ ಅವಕಾಶಗಳನ್ನು ಕಲ್ಪಿಸಿದೆ. ನಾನಿರುವ ಈ ವೇದಿಕೆ ನನ್ನ ಕಾಲೇಜಿನ ದಿನಗಳನ್ನು ನೆನಪಿಗೆ ತರುತ್ತಿದೆ. ನನ್ನ ಹಾಡುಗಳಿಗೆ ಅವಕಾಶ ದೊರೆತ ಕ್ಷಣಗಳೆಲ್ಲ ಇಂದಿಗೆ ನನಗೆ ಹೆಮ್ಮೆಯೆನಿಸುತಿದೆ. ಇವತ್ತಿಗೂ ಯಾವುದೇ ಕಾರ್ಯಕ್ರಮಗಳಿಗೆ ಹೋದರೂ ಇಲ್ಲಿಯ ಪ್ರಾಚಾರ್ಯರು, ಪ್ರಾಧ್ಯಾಪಕ ವೃಂದದವರು ನನಗೆ ಅಭಿನಂದನೆ ಹೇಳಲು ಮರೆಯುವುದಿಲ್ಲ. ಇದು ನನ್ನ ಬದುಕಿಗೆ ಸಿಕ್ಕಿದ ದೊಡ್ಡ ಸಂಭ್ರಮ. ಲಲಿತಕಲಾ ಸಂಘ ನಮ್ಮ ಪ್ರತಿಭೆಗೊಂದು ನಿಜವಾದ ವೇದಿಕೆ. ಇಲ್ಲಿ ಕಲಿಯಬೇಕು. ಯಾವುದರಲ್ಲೂ ಪರಿಪೂರ್ಣತೆ ಅನ್ನುವುದು ಇರುವುದಿಲ್ಲ. ನಾವೇ ಅದನ್ನ ರೂಪಿಸಿಕೊಳ್ಳುವತ್ತ ಸಾಗಬೇಕು. ಎಲ್ಲ ವಿದ್ಯಾರ್ಥಿಗಳೂ ನಿಮ್ಮ ಪ್ರತಿಭೆಗಳನ್ನು ಗುರುತಿಸಿಕೊಳ್ಳಲು ಈ ವೇದಿಕೆಯನ್ನು ಬಳಸಿಕೊಳ್ಳಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿಎ ಶಿವಾನಂದ ಪೈ ಯವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತ, ವಿದ್ಯಾರ್ಥಿ ಪ್ರತಿನಿಧಿಗಳಾಗಿ ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಜವಾಬ್ದಾರಿ ಇದೆ. ಕೇವಲ ಅಂಕಗಳಲ್ಲಿ ಮಾತ್ರ ಮುಂದಿರುವುದಲ್ಲದೆ, ಗುಣ ನಡತೆಯಲ್ಲೂ ಮುಂದಿರಬೇಕು. ಇಡೀ ಕಾಲೇಜಿನ ಘನತೆಯನ್ನು ಎತ್ತಿ ಹಿಡಿಯುವ ಮೂಲಕ ನಿಮ್ಮ ನಂತರದ ವಿದ್ಯಾರ್ಥಿಗಳಿಗೆ ನೀವು ಮಾದರಿಯಾಗಬೇಕಿದೆ. ಈ ವೇದಿಕೆಯಿಂದ ತೆರಳಿದ ಎಲ್ಲರೂ ಹೊಸ ಭರವಸೆಗಳನ್ನು ಇಟ್ಟುಕೊಂಡು, ಇನ್ನೊಬ್ಬರಿಗೆ ವಿಶ್ವಾಸ ತುಂಬುವ ಮೂಲಕ ಪ್ರೇರಣೆಯಾಗಬೇಕು. ನಾಯಕತ್ವ ಅನ್ನುವುದು ನಮ್ಮನ್ನು ನಾವು ಅರಿತುಕೊಳ್ಳಲು ಮತ್ತು ಒಂದಿಷ್ಟು ಜವಾಬ್ದಾರಿಗಳನ್ನು ಹೊಂದಲು ಇರುವುದು. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿದ ಪ್ರತಿಭೆಗಳನ್ನು ಹೊರ ತರುವ ಕೆಲಸವನ್ನು ವಿದ್ಯಾರ್ಥಿ ಸಂಘವು ಮಾಡಬೇಕು. ಅದರ ಜೊತೆಗೆ ವಿದ್ಯಾಭ್ಯಾಸದ ಕುರಿತಾಗಿ ಹೆಚ್ಚು ಪ್ರಯತ್ನಶೀಲರಾಗಬೇಕು. ಪಠ್ಯ ಮತ್ತು ಪಠ್ಯೇತರದ ಜೊತೆ ಜೊತೆಯಾಗಿ ಸಾಗಿ, ಕ್ರಿಯಾಶೀಲರಾಗಿ ಇಲ್ಲಿಂದ ತೆರಳಬೇಕು ಎಂದು ಹೇಳಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಡಾ. ವಿಜಯ ಕುಮಾರಿ ಇವರು ಪ್ರತಿಜ್ಞಾ ವಿಧಿಯನ್ನು ನೆರವೇರಿಸಿದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕರಾದ ಲಕ್ಷ್ಮೀನಾರಾಯಣ ಕೆ. ಎಸ್., ಲಿಲಿತ ಕಲಾ ಸಂಘದ ಸಂಯೋಜಕರಾದ ನಂದಕಿಶೋರ್ ಕೆ. ಹಾಗೂ ಆಯ್ಕೆಯಾದ ಎಲ್ಲ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಡಾ.ಮಂಜುನಾಥ ಎ.ಕೋಟ್ಯಾನ್ ಸ್ವಾಗತಿಸಿ, ಅಂತಿಮ ಬಿ. ಎ. ವಿದ್ಯಾರ್ಥಿ ಅರಿನ್ ಮಿರಾಂಡ ಕಾರ್ಯಕ್ರಮ ನಿರೂಪಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ರಮೇಶ್ ಎಸ್.ಸಿ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಉದ್ಘಾಟನೆಯ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.






















