ಭಾಗ – 686
ಭರತೇಶ್ ಶೆಟ್ಟಿ, ಎಕ್ಕಾರು

ಹೀಗೆ ವಾನಪ್ರಸ್ಥ ಸ್ವೀಕರಿಸಿದ್ದ ಧೃತರಾಷ್ಟ್ರ, ಗಾಂಧಾರಿ, ಕುಂತಿ, ವಿದುರ ಮತ್ತು ಸಂಜಯ ತಮ್ಮ ಬದುಕಿನ ಆದ್ಯಂತ್ಯ ಗಮ್ಯವನ್ನು ಅರಿತು ಗುರಿ ಏನು, ಹೇಗೆ? ಎಂಬ ಸ್ಪಷ್ಟತೆ ಕಂಡು ಕೊಂಡಿದ್ದಾರೆ. ಈಗ ಏನಿದ್ದರು ಸಾಧನೆಯ ಏಕೈಕ ಲಕ್ಷ್ಯ ಮಾತ್ರ ಅವರದ್ದಾಗಿ ಉಳಿದಿದೆ.
ಆದರೆ ಇತ್ತ ಪಾಂಡವರ ಸ್ಥಿತಿ ಹೇಳ ತೀರದು. ನಗರ ಜೀವನ, ಅರಮನೆ, ಸಕಲ ಸೌಭಾಗ್ಯಗಳಿದ್ದರೂ ಅವರಿಗೆ ಯಾವುದೂ ಹಿತ ನೀಡುತ್ತಿಲ್ಲ. ಮಾತೆ ಕುಂತಿಯ ನೆನಪು, ಕಣ್ಣು ಕಾಣದ ಧೃತರಾಷ್ಟ್ರ, ನೋಡಲಾಗದ ಕೃತಕ ಅಂಧತ್ವವನ್ನು ಒಪ್ಪಿರುವ ಗಾಂಧಾರಿ, ವೃದ್ಧರಾದ ವಿದುರ ಸಂಜಯರ ಕುರಿತಾದ ವ್ಯಥೆ, ಆತಂಕ ಸುಡಲಾರಂಭಿಸಿದೆ. ಅದರ ಜೊತೆಗೆ ತುಂಬಿ ತುಳುಕಾಡುತ್ತಿದ್ದು ಈಗ ಬಣಗುಡುತ್ತಿರುವ ಹಸ್ತಿನೆಯ ಅರಮನೆ, ಬರಿದಾಗಿರುವ ತನ್ನ ಸೋದರರಾದ ಕೌರವರು ವಾಸಿಸುತ್ತಿದ್ದ ಅಂತಃಪುರಗಳು, ನಿರ್ಜನವಾದ ಭೀಷ್ಮಾಚಾರ್ಯರ ಮನೆ, ರಾಜಕುಮಾರರು ಓಡಾಡುತ್ತಾ ಸದಾ ಲವಲವಿಕೆ ತುಂಬುತ್ತಿದ್ದ ರಾಜಾಂಗಣ, ಮಗ ಅಭಿಮನ್ಯುವಿನ ಸ್ಮರಣೆ, ಅರಿಯದೆ ಅರಿಯೆಂದು (ವೈರಿಯೆಂದು) ಭ್ರಮಿಸಿ ಕೈಯಾರೆ ಕೊಂದು ಕೆಡಹಿದ ಅಣ್ಣ ಕರ್ಣನ ನೆನಪು ಹೀಗೆ ಎಲ್ಲವೂ ಸೇರಿ ಧರ್ಮರಾಯನಿಗೆ ಹಸ್ತಿನೆಯ ಸಿಂಹಾಸನ ಮುಳ್ಳಿನ ಮೊನೆಗಳ ಮೇಲೆ ಕುಳಿತಂತೆ ಚುಚ್ಚತೊಡಗಿದೆ. ಹಾಗೆಂದು ಕಾಡು ಸೇರಿ ಆಶ್ರಮವಾಸಿಗಳಾಗಿರುವ ಕುರುಕುಲ ವೃದ್ಧರು ಇದ್ಯಾವುದರ ಪರಿವೆಯೂ ಇರದೆ, ನೆಮ್ಮದಿಯಿಂದ ತಮ್ಮ ಮನಸ್ಸನ್ನು ಏಕಾಗ್ರ ಪದವಿಯ ವಿಚಾರದಲ್ಲಿ ಸ್ಥಿತಗೊಳಿಸಿ ಸಾಧನೆ ಮಾಡತೊಡಗಿದ್ದಾರೆ. ಕೆಲವೊಮ್ಮೆ ಹೀಗಾಗುವುದಿದೆ ನೆಮ್ಮದಿ ಅಥವಾ ಮನಶಾಂತಿ ಎಂಬ ಭಾವವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಆಗದ ಸ್ಥಿತಿ ನಿರ್ಮಾಣವಾಗುತ್ತದೆ. ಎಲ್ಲಾ ಸೌಕರ್ಯಗಳು, ಆಸ್ತಿ, ಪಾಸ್ತಿ, ಆಳು, ಕಾಳು, ವಸ್ತು, ವಾಹನ ಹೀಗೆ ಏನೇನು ಇವೆಯೊ ಈ ಎಲ್ಲಾ ಅಮೂಲ್ಯವಾದವುಗಳು ಇದ್ದರೂ ಮನಸ್ಸು ಅರೆಕ್ಷಣವೂ ನೆಮ್ಮದಿ ಹೊಂದಿರುವುದಿಲ್ಲ. ಹಾಗೆಂದು ಇನ್ನು ಕೆಲವೊಮ್ಮೆ ಮೂಲಭೂತ ಸೌಕರ್ಯವೇ ಇಲ್ಲದಿದ್ದರೂ ನೆಮ್ಮದಿಯಿಂದ ಬದುಕುವ ದೃಷ್ಟಾಂತಗಳು ಇದೆ. ಹಾಗಾದರೆ ನೆಮ್ಮದಿ ಅಥವಾ ಮನಶಾಂತಿಯ ವ್ಯಾಖ್ಯಾನ ಏನಿರಬಹುದು? ನಮ್ಮ ಇಚ್ಚೆ ಅಥವಾ ಆಸೆ ನೆಮ್ಮದಿಯ ಪಂಚಾಂಗ. ನಾವು ಏನನ್ನು ಬಯಸುತ್ತಿದ್ದೆವೆಯೊ ಅದು ನಮ್ಮ ಬಳಿ ಇದ್ದರೆ ಅದೇ ನೆಮ್ಮದಿ. ಹಾಗೆಂದು ಸಂಪತ್ತು ಇದ್ದ ಮಾತ್ರಕ್ಕೆ ನೆಮ್ಮದಿ ಸಿಗದು. ಯಾಕೆಂದರೆ ಐಶ್ವರ್ಯ ತುಂಬಿ ತುಳುಕಾಡುವ ಹೊತ್ತಿಗೆ ಮನಸ್ಸು ಅದನ್ನು ಬಯಸುವುದಿಲ್ಲ. ಬದಲಾಗಿ ಪ್ರೀತಿ ಮಮತೆಯನ್ನು ಅಪೇಕ್ಷಿಸುತ್ತದೆ. ಆ ಕಾಲಕ್ಕೆ ನಮ್ಮ ಪ್ರೀತಿ ಪಾತ್ರರು ಬಳಿ ಇಲ್ಲದೆ ಹೋದರೆ ಸಿರಿ ಸಂಪತ್ತು ಎಷ್ಟಿದ್ದರೂ ಗೌಣವಾಗುತ್ತದೆ. ಮನಸ್ಸಿನ ಸಹಜ ಸ್ವಭಾವವೆ ಹಾಗೆ ಇಲ್ಲದ್ದರ ಬಗ್ಗೆ ಹೆಚ್ಚು ಯೋಚನೆ ಮಾಡುವುದು. ಸಂಪತ್ತು ಇಲ್ಲದಿದ್ದರೆ ಅದರ ಬಗ್ಗೆ ಯೋಚನೆ. ಯೌವನದಲ್ಲಿ ಆರೋಗ್ಯ ಸದೃಢವಾಗಿರುವಾಗ ಅದರ ಬಗ್ಗೆ ಕಿಂಚಿತ್ ಜಾಗ್ರತೆಯೂ ಇರದೆ, ವೃದ್ಧಾಪ್ಯದಲ್ಲಿ ರೋಗ ಬಾಧಿಸಿದರೆ ಆಗ ಆರೋಗ್ಯದ ಬಗ್ಗೆ ಅತಿ ಕಾಳಜಿ, ಚಿಂತೆ ಆವರಿಸುತ್ತದೆ. ಪ್ರೀತರು ಜೊತೆಗಿರುವಾಗ ಎಷ್ಟು ಕಾಳಜಿ ಇತ್ತೋ! ಯಾರಿಗೂ ತಿಳಿಯದು ಆದರೆ ಅವರು ದೂರವಾದ ಕಾಲಕ್ಕೆ ಅತಿಯಾದ ವ್ಯಥೆ ಕಾಡತೊಡಗುತ್ತದೆ. ಈ ಚಿಂತೆಗೂ ಚಿತೆಗೂ ಅಕ್ಷರ ವ್ಯತ್ಯಾಸ ಕೇವಲ ಮಧ್ಯದಲ್ಲಿರುವ ಶೂನ್ಯ ಮಾತ್ರ. ಸಾಮ್ಯತೆಯಲ್ಲಿ ಎರಡೂ ಸುಡುವ ಗುಣವನ್ನು ಹೊಂದಿದೆ. ಒಂದು ಜೀವಂತವಾಗಿ ಸುಟ್ಟರೆ ಮತ್ತೊಂದು ಹೆಣವನ್ನು ಸುಡುತ್ತದೆ. ಹಾಗಾದರೆ ನೆಮ್ಮದಿ ಅಂದರೆ ಏನು? ಮನಶಾಂತಿ ಹೇಗೆ ಸಾಧ್ಯ? ಆ ಪದದಲ್ಲಿಯೆ ಅರ್ಥ ಅಂತರ್ಗತವಾಗಿದೆ. ಮನಸ್ಸಿನ ಶಾಂತಿಯೇ ನೆಮ್ಮದಿ. ಮನಸ್ಸು ಅಶಾಂತವಾಗದ ಹಾಗೆ ನೋಡಿಕೊಂಡರೆ ಅದೇ ನೆಮ್ಮದಿ. ಮನಸ್ಸನ್ನು ಶಾಂತಗೊಳಿಸುವುದು ಅಥವಾ ಹಾಗೆ ಇರಿಸುವುದು ಹೇಗೆ? ಅದಕ್ಕೆ ಉತ್ತರವೇ ಜ್ಞಾನ ಮತ್ತು ಪ್ರಜ್ಞೆ. ಸತ್ಯ ಏನು? ಯಾಕೆ ಹೀಗಾಯಿತು? ಅಂತ್ಯ ಏನು? ಎಂಬ ವಿಚಾರದಲ್ಲಿ ಸ್ಪಷ್ಟತೆ ನಮಗಿದ್ದು ಆಸೆಯ ವ್ಯಾಪ್ತಿ ಅಪರಿಮಿತವಾಗದೆ ಸಾಧ್ಯಾಸಾಧ್ಯತೆಗಳ ಮಿತಿಯೊಳಗೆ ನಿಂತಾಗ ತನ್ನಿಂದ ತಾನೆ ಮನಶಾಂತಿ ತಕ್ಕ ಮಟ್ಟಿಗೆ ನೆಲೆಗೊಳ್ಳುತ್ತದೆ. ಹಾಗೆಂದು ಅನಿಯಂತ್ರಿತ ವಿಚಾರಗಳು, ಪ್ರಾರಬ್ಧ ಕರ್ಮ ಫಲಗಳಿಂದ ಬಾಧಿಸಲ್ಪಡುವ ಸಮಸ್ಯೆಗಳಿಗೆ ಪರಿಹಾರ ಕಷ್ಟ. ಹಾಗೂ ಪರಿಹಾರ ಇದ್ದರೆ ಅದು ಸಹನೆ ಮಾತ್ರ. ಸಹಿಸಿಕೊಳ್ಳುವ ಶಕ್ತಿ ಎಷ್ಟು ಬಲಯುತವಾಗುತ್ತದೋ ಅಷ್ಟು ನೆಮ್ಮದಿ ಸ್ಥಿರವಾಗುತ್ತದೆ. ಸಹಿಷ್ಣುತೆ, ಸಂವೇದನೆ ನಿಜಾರ್ಥದಲ್ಲಿ ಮುಕ್ತಿದಾಯಕ ಗುಣಗಳು. ಅವು ಅಶಾಂತಿಯಿಂದಲೂ ಮುಕ್ತಗೊಳಿಸಬಲ್ಲುದು
ಧರ್ಮರಾಯ ಮಹಾಜ್ಞಾನಿ, ಧರ್ಮದ ಪ್ರತಿರೂಪ, ಸಹನಾಮೂರ್ತಿ ಆದರೂ ಆತನಿಗೆ ತನ್ನ ಮಾತೆಗೆ ಕಷ್ಟ ಒದಗುತ್ತಿದೆ, ನಾವು ಮಕ್ಕಳು ಇದ್ದೂ ಅಸಹಾಯಕರಾಗಿ ಏನೂ ಮಾಡಲಾಗದೆ ಕೈಚೆಲ್ಲಿ ಕುಳಿತುಕೊಳ್ಳುವಂತಾಯಿತಲ್ಲಾ! ಎಂಬ ಕೊರಗು ಕೊರೆಯತೊಡಗಿದೆ. ರಾಜ ಕಾರ್ಯ, ಸಭೆ ಸಮಾರಂಭ ಯಾವುದೂ ಬೇಡ ಎಂಬಷ್ಟರ ಮಟ್ಟಿನ ಜಿಗುಪ್ಸೆ ಮೂಡಿಸಿದೆ. ಆದರೂ ಕ್ಷಾತ್ರ ಧರ್ಮ ತೊರೆಯುವಂತಹುದಲ್ಲವಲ್ಲ. ಮಗು ಪರೀಕ್ಷಿತ ಅರಮನೆಯಲ್ಲಿದ್ದಾನೆ. ಮುಂದೆ ಚಂದ್ರವಂಶವನ್ನು ಬೆಳಗುವ ಕುಡಿ, ತಮಗೂ ಸದ್ಗತಿ ಮಾಡಿಸುವ ವಂಶಾಂಕುರವಿದು ಎಂದು ಆ ಮಗುವಿನ ಮುಖ ನೋಡುತ್ತಾ ಹೇಗೋ ದಿನಗಳೆಯುತ್ತಿದ್ದಾರೆ. ಪಾಂಡವ ಸೋದರರೂ ತಾಯಿ ಇಲ್ಲದೆ ತಬ್ಬಲಿಯಾದ ಮಗುವಿನಂತೆ ಆಗಿದ್ದಾರೆ. ಯಾರಲ್ಲೂ ಅಂತಹ ಉಲ್ಲಾಸವಿಲ್ಲ.
ಸಾಮ್ರಾಜ್ಯದ ಪ್ರಜಾ ಪರಿವಾರವೂ ರಾಜಮನೆತನದ ಹಿರಿಯರ ವಿಯೋಗದಿಂದ ದುಃಖಿತರಾಗಿದ್ದಾರೆ. ವರ್ತಮಾನ ಕಾಲದಲ್ಲಿ ಎಲ್ಲವೂ ಇದ್ದು ನಿಸ್ತೇಜರಾಗಿರುವ ಅರಸು ಮನೆಯನ್ನು ಕಂಡು ಜನ ಆಡಿಕೊಳ್ಳುತ್ತಿದ್ದಾರೆ. ಅಲ್ಲಲ್ಲಿ ಗುಂಪು ಸೇರಿ ಪ್ರಜೆಗಳು ತಮ್ಮ ತಮ್ಮೊಳಗೆ ” ಕುರುಕುಲದ ಹಿರಿಯರು ಕಾಡಿನಲ್ಲಿ ಹೇಗಿದ್ದಾರೋ ಏನೋ! ಇಲ್ಲಿ ಇರುವವರೂ ಹೀಗಾಗಿ ಹೋಗಿದ್ದಾರೆ. ನಮ್ಮ ರಾಷ್ಟ್ರದಲ್ಲಿ ಯಾವುದರ ಕೊರತೆಯೂ ಇಲ್ಲ. ಸಕಲ ಸೌಭಾಗ್ಯಗಳೂ ಸೌಕರ್ಯಗಳೂ ಸಮೃದ್ಧವಾಗಿದೆ. ಗೋ ಸಂಪತ್ತು, ಮಳೆ, ಬೆಳೆ ಎಲ್ಲವೂ ನಳನಳಿಸುತ್ತಿದೆ. ಆದರೆ ಹಸ್ತಿನೆಯ ಅರಮನೆ ಮಾತ್ರ ಮಂಕಾಗಿದೆ. ಈ ಪಾಂಡವರಿಗೆ ಸುಮ್ಮನೆ ಕುಳಿತು ಅಭ್ಯಾಸವಿಲ್ಲ. ಒಂದೋ ಹೋರಾಟ, ಯುದ್ದ, ಯಾಗ, ಯಜ್ಞ, ಅಥವಾ ಏನಾದರೂ ಅಲೆದಾಟ ಹೀಗೆ ಯಾವುದಾದರು ಒತ್ತಡವಿದ್ದರೆ ಸಕ್ರಿಯರಾಗಿರುತ್ತಾರೆ. ಅದ್ಯಾವುದೂ ಈಗ ಇಲ್ಲದೆ ಹೋಗಿ ಔದಾಸೀನ್ಯ ಆವರಿಸಿ ಕೇವಲ ಚಿಂತೆ ಮಾಡುವುದೇ ಅವರಿಗೆ ಕೆಲಸವಾಗಿದೆ.” ಹೀಗೆ ತಲೆಗೊಂದು ಯೋಚನೆ ಮಾಡುತ್ತಾ ತರ್ಕಿಸ ತೊಡಗಿದ್ದಾರೆ.
ದಿನಗಳು ಸಾಗುತ್ತಿದ್ದಂತೆ ಪಾಂಡವರು ಚಿಂತಾಕ್ರಾಂತರಾಗುತ್ತಾ ಬಸವಳಿದು ಹೋದರು. ಈ ವೇದನೆ ಅಸಹನೀಯವಾಗಿ ಬೆಳೆಯಿತು. ಪರಿಣಾಮ ಅಣ್ಣ ತಮ್ಮಂದಿರೆಲ್ಲ ಕೂಡಿಕೊಂಡು ಒಮ್ಮೆ ತಪೋವನಕ್ಕೆ ಹೋಗಿ ನೋಡಿ ಬರೋಣವೆಂದು ಆಲೋಚನೆ ಮಾಡತೊಡಗಿದರು.
ಮುಂದುವರಿಯುವುದು…





















































































