
ಕೊಚ್ಚಿ (ಕೇರಳ):ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ವಿಚಾರವಾದಿ ಪ್ರೊ. ಎಂ.ಎಂ. ಕಲಬುರ್ಗಿ ಹತ್ಯೆಗಳ ಹಿಂದೆ ಸಂಘ ಪರಿವಾರದ ಕೈವಾಡವಿದೆ ಎಂದು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಮುಂದಿನ ಆರು ತಿಂಗಳೊಳಗೆ ಪ್ರಕರಣದ ಆರೋಪಿಗಳನ್ನು ಜೈಲಿಗೆ ಕಳುಹಿಸುವುದಾಗಿ ಅವರು ಹೇಳಿಕೆ ನೀಡಿದ್ದಾರೆ.
ಕೊಚ್ಚಿಯ ಮರೀನ್ ಡ್ರೈವ್ನಲ್ಲಿ ನಡೆದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ಅಂಗಸಂಸ್ಥೆ ಮುಸ್ಲಿಂ ಯೂತ್ ಲೀಗ್ ರಾಜ್ಯ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಗೌರಿ ಲಂಕೇಶ್, ಕಲಬುರ್ಗಿ ಹಾಗೂ ನರೇಂದ್ರ ದಾಭೋಲ್ಕರ್ ಹತ್ಯೆಗಳ ಹಿಂದೆ ಸಂಘ ಪರಿವಾರದವರಿದ್ದಾರೆ ಎಂದು ಆರೋಪಿಸಿದರು. ಗಾಂಧೀಜಿಯನ್ನು ಹತ್ಯೆ ಮಾಡಿದವರೇ ಇವರನ್ನೂ ಕೊಂದಿದ್ದಾರೆ ಎಂದು ಟೀಕಿಸಿದರು.
ಈ ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ರಾಜ್ಯ ಸರ್ಕಾರ ಗಂಭೀರವಾಗಿ ಗಮನಹರಿಸುತ್ತಿದೆ. ಮುಂದಿನ ಆರು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿ ಆರೋಪಿಗಳನ್ನು ಜೈಲಿಗೆ ಕಳುಹಿಸುವುದಾಗಿ ಖರ್ಗೆ ಭರವಸೆ ನೀಡಿದರು.
ಇದೇ ವೇಳೆ ಸಾವರ್ಕರ್ ಮತ್ತು ಸಂಘ ಪರಿವಾರದ ಸಿದ್ಧಾಂತಗಳು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಟೀಕಿಸಿದ ಅವರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಆರ್ಎಸ್ಎಸ್ನ 10 ನಾಯಕರ ಹೆಸರು ಹೇಳುವಂತೆ ಸವಾಲು ಹಾಕಿದರು. ಕ್ವಿಟ್ ಇಂಡಿಯಾ ಚಳವಳಿ ಹಾಗೂ ಸಂವಿಧಾನದ ವಿಚಾರದಲ್ಲೂ ಆರ್ಎಸ್ಎಸ್ನ ಇತಿಹಾಸವನ್ನು ವ್ಯಂಗ್ಯವಾಡಿದ್ದಾರೆ.





















































































