ಭಾಗ – 763
ಭರತೇಶ ಶೆಟ್ಟಿ, ಎಕ್ಕಾರು

“ಅಣ್ಣಾ! ಧರ್ಮ ಆಚರಿಸಲಿಕ್ಕಾಗಿಯೆ ಇರುವುದು. ವಾರ್ಧಕರಾದಾಗ ( ರಾಜನು ವಯೋ ವೃದ್ಧನಾದಾಗ, ಮಕ್ಕಳು ಜವಾಬ್ದಾರಿ ವಹಿಸುವಷ್ಟು ವರ್ಧನೆ ಹೊಂದಿದಾಗ) ರಾಜಕೀಯದ ಹೊಣೆಗಾರಿಕೆಯನ್ನು ದಕ್ಷ ಮಗನಿಗೆ ವಹಿಸಿ ವಾನಪ್ರಸ್ಥ ಸ್ವೀಕರಿಸುವುದು ವಿಹಿತ ಆಚಾರ. ನಿನ್ನ ಚಿಂತನೆಯಲ್ಲಿ ಯಾವ ದೋಷಗಳೂ ಇಲ್ಲ. ಯಾಕೆಂದರೆ ಧರ್ಮರಾಯ ಚತುರಂಗ ಬಲಾನ್ವಿತ ಸಮರ್ಥನಾಗಿದ್ದು ಆಳ್ವಿಕೆ ಮಾಡುತ್ತಿದ್ದಾನೆ. ಹೀಗಿರುವಾಗ ನಿನ್ನ ನಿವೃತ್ತಿಯ ಯೋಚನೆ ಅಮಾನ್ಯವಾದುದಲ್ಲ. ರಾಜೋಚಿತವಾದ ಅನುಸರಣೀಯ ಧರ್ಮವೂ, ಕರ್ಮವೂ ಆಗಿರುವ ವಾನಪ್ರಸ್ಥದ ಬಗ್ಗೆ ಯೋಚಿಸುವುದಕ್ಕೆ ಪ್ರಸ್ತುತವಾದ ಕಾಲಘಟ್ಟ ಬಂದೊದಗಿದೆ. ನಾನು ಈ ಕುರಿತಾಗಿ ಏಕಾಂತದಲ್ಲಿ ಯೋಚಿಸಿದ್ದೆನು. ಆದರೆ ನಿನಗದು ಕಷ್ಟವಾಗಬಹುದೇನೊ ಎಂಬ ಕಾರಣದಿಂದ ನಿನ್ನಲ್ಲಿ ಪ್ರಸ್ತಾಪಿಸಲು ಮುಂದಾಗಿರಲಿಲ್ಲ. ನೀನು ಈ ತೀರ್ಮಾನವನ್ನು ಪರಿಗ್ರಹಿಸುವಲ್ಲಿ ಸರಿಯಾಗಿ ವಿವೇಚಿಸಿರುವೆಯಾದರೆ ಸರಿಯಾದ ನಿರ್ಣಯ ಹೌದು ಎನ್ನುವುದು ನನ್ನ ಅಭಿಮತ” ಎಂದನು. ವಿದುರನ ಮಾತು ಕೇಳಿದ ಸಂಜಯ ” ಆರ್ಷೇಯ ಧರ್ಮದಂತೆ ಮಹಾರಾಜರು ಕೈಗೊಳ್ಳಲು ಬಯಸಿರುವ ನಿರ್ಧಾರ ಉಚಿತವಾದುದು. ಆದರೂ ಆತುರ ಬೇಡ. ಇನ್ನೂ ಕೆಲ ಕಾಲ ಕಳೆದು ಬಳಿಕ ವಾನಪ್ರಸ್ಥ ಸ್ವೀಕರಿಸುವ ಯೋಚನೆ ಮಾಡಿದರೆ ಅಪಚಾರವಾಗದು. ಯಾವುದಕ್ಕೂ ಸ್ವಲ್ಪ ದಿನ ಸೂಕ್ಷ್ಮವಾಗಿ ಯೋಚಿಸಿ ಅಂತಿಮಗೊಳಿಸುವುದು ಉತ್ತಮ” ಎಂದು ಅಭಿಪ್ರಾಯ ತಿಳಿಸಿದನು.
ಧೃತರಾಷ್ಟ್ರನು ಸಾಧ್ಯಾಸಾಧ್ಯತೆಗಳ ಕುರಿತಾಗಿ ಬಹು ಆಳವಾಗಿ ಯೋಚಿಸಿ, ಕೆಲವಾರು ದಿನಗಳ ಕಾಲ ಮಂಥನ ಮಾಡುತ್ತಾ ದಿನಗಳೆದನು. ಮತ್ತೊಂದು ದಿನ ಧರ್ಮರಾಯನನ್ನು ಕರೆಸಿದನು. ತನ್ನ ಬಳಿಯಲ್ಲಿ ಕುಳ್ಳಿರಿಸಿಕೊಂಡು ಕುಶಲೋಪಚರಿ ವಿಚಾರಿಸಿ, ಬಳಿಕ “ವತ್ಸಾ! ನಿನ್ನ ಅಕ್ಕರೆಯ ಪೋಷಣೆಯಲ್ಲಿ ನಾನೂ ಗಾಂಧಾರಿಯೂ ಸುಖವಾಗಿ ಇದ್ದೇವೆ. ನಿನ್ನದ್ದಾದ ಉತ್ತಮ ಗುಣಗಳಿಂದಾಗಿ ನಮಗೂ ಗೌರವ ಮಾನ್ಯತೆ ನೀಡಿ ಬೇಕಾದಷ್ಟು ದಾನ ಧರ್ಮಗಳನ್ನೂ ನಮ್ಮಿಂದ ಮಾಡಿಸಿರುವೆ. ಪುಣ್ಯ ಕಾರ್ಯಗಳಲ್ಲಿ ಭಾಗಿಗಳನ್ನಾಗಿಸಿರುವೆ. ನಿನ್ನ ಈ ತೆರನಾದ ನಿಷ್ಕಲ್ಮಷ ಪ್ರೀತಿಯನ್ನು ಅನುಭವಿಸುವಾಗ ನಮಗೆ ಅಪರಾಧಿ ಭಾವನೆ ಕಾಡುತ್ತಿದೆ. ಯಾಕೆಂದರೆ ನಿಮ್ಮ ಪತ್ನಿ ದ್ರೌಪದಿ ನಮ್ಮ ಕುಲವಧು. ತುಂಬಿದ ಸಭೆಯಲ್ಲಿ ಅವಳ ಮಾನಹರಣದ ಯತ್ನ ನನ್ನ ಮಕ್ಕಳಿಂದಾಯಿತು. ತುಚ್ಛವಾದ ಮಾತುಗಳು, ದೈಹಿಕ – ಮಾನಸಿಕ ಹಿಂಸೆಯೂ ನಡೆಯಿತು. ಪ್ರತ್ಯಕ್ಷ ನಾನು ಉಪಸ್ಥಿತನಿದ್ದೂ ಆಗುತ್ತಿದ್ದ ಅಕ್ಷಮ್ಯ ಪಾತಕವನ್ನು ತಡೆಯಲಿಲ್ಲ. ನಾನು ಎಷ್ಟರ ಮಟ್ಟಿನ ಅಧರ್ಮ ಕಾರ್ಯ ಎಸಗಿದ್ದೇನೆ ಎಂದು ಈ ಜಗತ್ತಿಗೆ ತಿಳಿದಿದೆ. ಆದರೆ ನೀನು ನಮಗೆ ಶಿಕ್ಷೆ ಕೊಡದೆ, ಲಾಲನೆ ಪಾಲನೆ ಮಾಡುತ್ತಿರುವೆಯಾದರೂ ಕಾಲಚಕ್ರ ತಿರುಗುವಾಗ ಯಾರನ್ನೂ ಬಿಡದೆ ಪ್ರತಿಯೊಂದು ಪಾಪಕೃತ್ಯಕ್ಕೂ ತಕ್ಕ ಶಿಕ್ಷೆ ನೀಡುತ್ತದೆ. ಅನ್ಯಾಯ ಮಾಡಿದ ನನ್ನ ಮಕ್ಕಳು ನಾನು ಜೀವಂತ ಇರುವಾಗಲೆ ಭೀಕರವಾದ ಅಂತ್ಯ ಕಂಡರು. ಪುತ್ರಶೋಕದ ತಾಪ ಸಹಿಸಲಾಗದೆ ಇಂದಿಗೂ ನಾನು ಬಳಲಿ ಬೆಂದು ಹೋಗುತ್ತಾ ಇದ್ದೇನೆ. ಆದರೂ ನನಗೊಂದು ಕಿಂಚಿತ್ ಸಮಾಧಾನ ಏನೆಂದರೆ ಅಧರ್ಮಿಗಳಾದರೂ ನನ್ನ ಮಕ್ಕಳು ಪವಿತ್ರವಾದ ಪುಣ್ಯ ಭೂಮಿ ಕುರುಕ್ಷೇತ್ರ ಸಮರದಲ್ಲಿ ಶಸ್ತ್ರ ಹತರಾದ ಕಾರಣ ಕ್ಷತ್ರಿಯರಿಗೆ ಲಭಿಸುವ ಸದ್ಗತಿ ಅವರಿಗೂ ಲಭಿಸಿರಬಹುದೆಂಬ ನೆಮ್ಮದಿಯಿಂದ ಇದ್ದೇನೆ. ಮಾತ್ರವಲ್ಲ ಬಂಧುಗಳ ಬಗೆಯಲ್ಲಿ ಯಾವುದೆ ವೈರ ಭಾವ ತೋರದೆ ನೀನು ಮರಣೋತ್ತರ ಕ್ರಿಯೆಗಳನ್ನು, ಮೃತರಿಗಾಗಿ ಏನೇನು ಮಾಡಬೇಕೊ ಅವೆಲ್ಲವನ್ನೂ ವಿಧಿವತ್ತಾಗಿ ಶ್ರದ್ಧೆಯಿಂದ ನೆರವೇರಿಸಿರುವೆ. ಬಂಧುಹತ್ಯೆಯ ದೋಷ ಬರಬಾರದು ಎಂದು ಅಶ್ವಮೇಧ ಯಾಗವನ್ನೂ ವಿರಚಿಸಿ ಪಾವನನಾಗಿರುವೆ. ಮಗೂ ನಿನ್ನದ್ದಾದ ಧರ್ಮಬುದ್ಧಿ, ಸಹಿಷ್ಣುತೆ, ಪ್ರೀತ್ಯಾದರಗಳನ್ನು ಅನುಭವಿಸುವಾಗ ಅಂತ್ಯಕಾಲದವರೆಗೂ ನಿನ್ನ ಜೊತೆಯಲ್ಲಿ ಬದುಕಬೇಕೆಂಬ ಆಸೆ ಹಲವು ಬಾರಿ ನನಗಾಗಿದೆ. ಆದರೆ ನಮ್ಮ ಹಿರಿಯರು ನಮಗೆ ಆದರ್ಶ ಪ್ರಾಯರು. ಅವರು ಅನುಸರಿಸಿದ ಸದ್ಗುಣಗಳು, ಸದ್ಧರ್ಮಗಳು ನಮಗೂ ಅನುಸರಣೀಯ. ಅಂತೆಯೆ ನಮ್ಮ ಪೂರ್ವಜರೂ, ಅದೆಷ್ಟೊ ಅಗ್ರಮಾನ್ಯ ವೀರ ಕ್ಷತ್ರಿಯರು ನಡೆದು ತೋರಿದ ಧರ್ಮ ಮಾರ್ಗದ ಪರಂಪರೆ ಇದೆ. ಆ ಪದ್ಧತಿಯಂತೆ ವೃದ್ಯಾಪ್ಯ ಆವರಿಸಿದ ರಾಜ ರಾಜ್ಯಾಧಿಕಾರವನ್ನು ಸಮರ್ಥ ಯುವರಾಜನಿಗೆ ಹಸ್ತಾಂತರಿಸಿ ವಾನಪ್ರಸ್ಥವನ್ನು ಕೈಕೊಳ್ಳಬೇಕು. ಅದು ಧರ್ಮವೂ ಹೌದು. ನೀನು ಧರ್ಮ ಮಾರ್ಗದಲ್ಲಿ ಬದುಕಿ ಬಾಳುತ್ತಿರುವವನು, ನಿನಗೆ ಧರ್ಮ ಬೋಧನೆ ಮಾಡುವುದು ಅನಗತ್ಯ. ನನ್ನ ತಮ್ಮ ಪಾಂಡು ಚಕ್ರವರ್ತಿಯ ಮಗ ನೀನಾದರೂ ನನಗೆ ಭೇದವಿಲ್ಲ. ನನಗೂ ನೀನು ಮಗನೇ ಆಗಿರುವೆ. ಇದೊ ನನ್ನ ಮನಸ್ಪೂರ್ವಕ ಆಶೀರ್ವಾದ ನಿನ್ನ ಮೇಲಿದೆ. ಸದ್ಧರ್ಮದಿಂದ ರಾಜ್ಯವಾಳುತ್ತಾ ಅಜರಾಮರವಾದ ಕೀರ್ತಿಯನ್ನು ಸಂಪಾದಿಸುವವನಾಗು. ಧರ್ಮಕಾರ್ಯಗಳನ್ನು ಮಾಡುತ್ತಾ ದೈವಾನುಗ್ರಹಕ್ಕೆ ಪಾತ್ರನಾಗುತ್ತಿರು. ನೀನೆಂದಿಗೂ ತಪ್ಪಿ ನಡೆಯಲಾರೆ ಎಂಬ ಪೂರ್ಣ ವಿಶ್ವಾಸವಿದೆ. ಹಾಗಾಗಿ ನೆಮ್ಮದಿಯಿಂದ ನಾನು ಧರ್ಮಪಾಲಕನಾಗಿ ನಮ್ಮದ್ದಾದ ಆರ್ಷೇಯ ಪದ್ಧತಿಯಂತೆ ತಪೋವನ ಸೇರುವುದು ಯುಕ್ತವಾದುದು. ಸಂತೋಷದಿಂದ ನೀನು ಅನುಮತಿ ನೀಡಿ ನಮ್ಮನ್ನು ಬೀಳ್ಗೊಡಬೇಕು” ಎಂದು ನಿವೇದಿಸಿಕೊಂಡನು.
ಆಗ ಧರ್ಮರಾಯನಿಗೆ ತನ್ನ ದೊಡ್ಡಪ್ಪನ ಮಾತು ಕೇಳಿ ಆಘಾತವೇ ಆಯಿತು. “ದೊಡ್ಡಪ್ಪಾ ನೀವು ನನ್ನನ್ನು ತೊರೆದು ಎಲ್ಲಿಗೂ ಹೋಗ ಕೂಡದು. ನೀವು ಹೋದರೆ ನನಗದು ಶ್ರೇಯಸ್ಕರವಲ್ಲ. ನಮ್ಮ ಸೇವೆಯನ್ನು ಸ್ವೀಕರಿಸುತ್ತಾ ನೀವು ಅರಮನೆಯಲ್ಲಿ ಉಳಿಯುವ ಮನ ಮಾಡಬೇಕು. ನಿಮ್ಮ ಹೆತ್ತ ಮಕ್ಕಳ ನೆನಪು ಬಾಧಿಸದಂತೆ ನೋಡಿಕೊಳ್ಳಲು ಗೌರವದಿಂದ ಸ್ವಯಂ ನಾನು ನಿಮ್ಮ ಸೇವಕನಾಗಿರುತ್ತೇನೆ. ಹಾಗೂ ನೀವು ಒಪ್ಪದೆ ಹೋಗುವುದಾದರೆ, ನಾನೂ ನಿಮ್ಮ ಜೊತೆಯಲ್ಲಿ ವಾನಪ್ರಸ್ಥ ಸ್ವೀಕರಿಸಿ ಹೊರಡುತ್ತೇನೆ.” ಎಂದು ಬೇಡಿಕೊಂಡನು.
ಧರ್ಮರಾಯನ ಈ ಮಾತು ಕೇಳಿದಾಕ್ಷಣ ಧೃತರಾಷ್ಟ್ರನಿಗೆ ಏನಾಯಿತೋ! ಕಣ್ಣುಗಳು ಮಸುಕಾದವು. ತಲೆ ತಿರುಗಿದಂತಾಯಿತು. ಶರೀರ ಬಲಹೀನವಾದಂತಾಯಿತು. ಅಲ್ಲಿಯೆ ವಾಲುತ್ತಾ ಕುಸಿದು ಬಿದ್ದನು.
ಮುಂದುವರಿಯುವುದು…






















