ಭಾಗ 671
ಭರತೇಶ್ ಶೆಟ್ಟಿ ಎಕ್ಕಾರು

ಪಾಂಡವರು ಹೆಜ್ಜೆ ಹೆಜ್ಜೆಯಲ್ಲೂ ಯಶಸ್ಸನ್ನು ಸಾಧಿಸುತ್ತಾ ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಉತ್ತುಂಗಕ್ಕೇರುತ್ತಾ ಜನಮಾನಸವನ್ನು ಗೆಲ್ಲುತ್ತಿದ್ದಾರೆ. ಪಾಂಡವರ ಬದುಕು ಎಲ್ಲಿ ಹೇಗೆ ಹೇಗೆ ತಿರುವು ಪಡೆದರೂ ಉತ್ತಮ ಫಲಾನುಭವಿಗಳಾಗಿ ಪರಿವರ್ತಿತರಾಗಿ ಬರುವಲ್ಲಿ ಅವರ ಸತ್ಯ ಧರ್ಮ ನ್ಯಾಯ ಪಾಲನೆ ಮಾರ್ಗದರ್ಶಕವಾಗುತ್ತಾ ಸಾಗಿದೆ. ವನವಾಸ ದ್ಯೂತದ ಸೋಲಿನ ಶಿಕ್ಷಾ ರೂಪದಲ್ಲಿ ಪ್ರಾಪ್ತವಾದರೂ ಅದು ಅವರಿಗೆ ಸದವಕಾಶವಾಗಿ ಹೋಗಿತ್ತು. ಅರ್ಜುನನಿಗೆ ಗಂಧರ್ವ ಅಂಗಾರಪರ್ಣನಿಂದ ಚಾಕ್ಷುಷ ವಿದ್ಯೆ, ಧರ್ಮೋಪದೇಶ, ಪರಶಿವನಿಂದ ಪಾಶುಪತಾಸ್ತ್ರ, ಗಿರಿಜೆಯ ಅಂಜಲಿಕಾಸ್ತ್ರ, ಗಣಪತಿಯ ಪರಶು ಆಯುಧ, ಷಣ್ಮುಗನ ಶಕ್ತಿ, ಶಿವಗಣ, ಪ್ರಮಥರ ಶಕ್ತ್ಯಾಯುಧಗಳು ವರರೂಪದಲ್ಲಿ ಅನುಗ್ರಹಿತವಾಗಿದ್ದವು. ಸಶರೀರಿಯಾಗಿ ದೇವಲೋಕಕ್ಕೆ ಸುರಪನ ದಿವ್ಯ ರಥದಲ್ಲಿ ಪಯಣಿಸಿ ನಿವಾತ ಕವಚ, ಕಾಲಕೇಯರೆದುರು ದಿಗ್ವಿಜಯಗೈದು ಕಿರೀಟಿಯಾದದ್ದು, ಊರ್ವಶಿಯ ಶಾಪದಿಂದ ನಪುಂಸಕನಾದರೂ ಅಜ್ಞಾತವಾಸ ಕಾಲಕ್ಕೆ ಅದು ವರವಾಗಿ ಪರಿಣಮಿಸಿದ್ದು. ಅಷ್ಟ ದಿಕ್ಪಾಲಕರ ಶಕ್ತಿ ಆಯುಧಗಳ ಕೊಡುಗೆ ಹೀಗೆ ಒಂದೇ ಎರಡೇ ಎಲ್ಲವೂ ಲಾಭಗಳೇ ಆಗಿ ಪರಿಣಮಿಸಿದ್ದವು. ಇನ್ನು ಧರ್ಮಜನಿಗೂ ಮಾರ್ಕಾಂಡೇಯರು, ಕಣ್ವರು, ಭಾರ್ಗವರು, ನಾರದರು, ದೂರ್ವಾಸರು ಹೀಗೆ ಋಷಿ ಸಾಗರದ ಸಂದರ್ಶನ, ಧರ್ಮೋಪದೇಶ – ಮಹರ್ಷಿ ಧೌಮ್ಯರ ಸಂಯೋಗ, ನಹುಷನೊಡನೆ ಜಿಜ್ಞಾಸೆ, ಸೂರ್ಯ ನಾರಾಯಣನ ಕೃಪೆಯಿಂದ ಅಕ್ಷಯ ಪಾತ್ರೆಯ ಪ್ರಾಪ್ತಿ, ಯಕ್ಷ ಪ್ರಶ್ನೆಯಾಗಿ ಕಾಡಿದರೂ ಯಮಧರ್ಮನಿಂದ ಅಜ್ಞಾತವಾಸ ಕಾಲದಲ್ಲಿ ಯಾರಿಗೂ ಜ್ಞಾತರಾಗದೆ ಉಳಿಯುವಂತಹ ವಿಶೇಷ ವರದಾನ ಹೀಗೆ ಎಲ್ಲವೂ ಶುಭಪ್ರದವಾದುದು. ಇನ್ನು ಭೀಮಸೇನನಿಂದ ಜಟಾಸುರ, ಕೀಚಕ ವಧೆಯಾದಿ ದುರುಳರ ದಮನ, ಗಂಧಮಾದನ ಪರ್ವತದಲ್ಲಿ ಅಣ್ಣ ಆಂಜನೇಯನ ಭೇಟಿ, ಭಾರತ ಯುದ್ಧದಲ್ಲಿ ಅರ್ಜುನನ ರಥದ ಪತಾಕೆಯಲ್ಲಿ ಸ್ಥಿತನಾಗುವ ವಾಗ್ದಾನಗಳು ಪ್ರಾಪ್ತವಾದುದು ಈ ಸಮಯದಲ್ಲಿ ಎನ್ನುವುದು ವಿಶೇಷ. ನಕುಲ ಸಹದೇವಾದಿಗಳೂ ಅಣ್ಣ ಧರ್ಮಜನ ಎರಡು ಕಣ್ಣುಗಳಂತೆ ಸೇವೆಗೈದು ಜ್ಞಾನಿಗಳೂ ಧರ್ಮಾತ್ಮರೂ ಆಗಿ ಪ್ರಬುದ್ಧರಾದ ಸುಸಮಯವದು. ರಾಜಸೂಯ ಯಾಗ, ಮಹಾಭಾರತ ಯುದ್ಧ, ಅಶ್ವಮೇಧ ಯಾಗ ಪೂರೈಸಿ ಸರ್ವತ್ರ ಸಾಧನೆ ಮಾಡಿದ ಪಾಂಡವರನ್ನು ಲೋಕ ಲೋಕಗಳು ಕೊಂಡಾಡುತ್ತಿವೆ. ಸದ್ಧರ್ಮದಿಂದ ಈಗ ಧರ್ಮರಾಯ ರಾಜ್ಯಭಾರ ಮಾಡುತ್ತಿರುವ ಸಮಯ ಗುರು ಹಿರಿಯರ ಸಂಪ್ರೀತಿ, ಯಾಗ ಯಜ್ಞಾದಿ ಧರ್ಮಕಾರ್ಯಗಳಿಂದ ದೇವತಾನುಗ್ರಹ, ಅಭಿವೃದ್ಧಿ ಚಿಂತನೆಗಳ ಅನುಷ್ಠಾನದಿಂದ ಪ್ರಜಾನುರಾಗ ಪ್ರಾಪ್ತವಾಗಿ ಸರ್ವಾಂಗೀಣ ದಕ್ಷ ಆಡಳಿತ ಸಾಂಗವಾಗಿ ಸಾಗುತ್ತಿದೆ.
ಧರ್ಮರಾಯನೆಷ್ಟು ಸಂವೇದನಾಶೀಲ ಚಕ್ರವರ್ತಿ ಎಂದರೆ ಮಹಾಭಾರತ ಯುದ್ಧದಲ್ಲಿ ತಮ್ಮಿಂದ ಹತರಾದ ಕೌರವರ ಮಾತಾ ಪಿತರಾದ ಗಾಂಧಾರಿ ಹಾಗು ಧೃತರಾಷ್ಟ್ರರಿಗೆ ಪುತ್ರಶೋಕ ಬಾಧಿಸಬಾರದು ಎಂಬ ಕಾರಣಕ್ಕಾಗಿ ಏನು ಮಾಡುವುದಿದ್ದರೂ ಅವರನ್ನು ಮುಂದಿರಿಸಿ, ಅವರೊಡನೆ ಸಮಾಲೋಚನೆಗೈದು, ಅನುಮತಿ ಪಡೆದು ನಂತರ ತೊಡಗಿಕೊಳ್ಳುತ್ತಿದ್ದನು. ಅವರ ಆಶೋತ್ತರಗಳಿಗೆ ಮೊದಲ ಪ್ರಾಧಾನ್ಯತೆಯಿತ್ತು ಅತಿ ಪ್ರೀತಿ ಗೌರವಗಳಿಂದ ಆದರಿಸುತ್ತಿದ್ದನು. ಧೃತರಾಷ್ಟ್ರನಿಗೂ ಕೆಲವೊಮ್ಮೆ ಧರ್ಮರಾಯನ ಸಜ್ಜನಿಕೆ ಕಂಡು ಅಹಂಕಾರಿಯಾಗಿ ದರ್ಪ ತೋರುತ್ತಿದ್ದ ದುರ್ಯೋಧನನಂತಹ ನೂರು ಪುತ್ರರ ಬದಲು ಯುಧಿಷ್ಠಿರನಂತಹ ಒಂದು ಧರ್ಮ ಬಿರುವಾದ ಮಗನಿರುತ್ತಿದ್ದರೆ ಸಾಕಿತ್ತು ಎಂಬ ಕೊರಗು ಮತ್ತೆ ಆಸೆ ಆವರಿಸಿದ್ದೂ ಇದೆ. ಮಹಾಭಾರತ ಯುದ್ಧ ಮುಗಿದ ಬಳಿಕ ಧೃತರಾಷ್ಟ್ರ ಶ್ರೀಕೃಷ್ಣ ಪರಮಾತ್ಮನಲ್ಲಿ “ಹೇ ವಾಸುದೇವಾ! ನನ್ನ ಚಿತೆಗೆ ಕೊಳ್ಳಿ ಇಡಬೇಕಾಗಿದ್ದ ಎಲ್ಲಾ ಪುತ್ರರೂ ಸಾಯುವುದನ್ನು ಸಹಿಸಿ ನಾನು ಯಾಕಾದರೂ ಬದುಕುಳಿಯುವಂತಾಗಿದೆ? ಜನ್ಮ ಜಾತ ಕುರುಡನಾದ ನನಗೆ ಇನ್ನು ಗತಿಯೇನು? ಒಂದೊಮ್ಮೆಗೆ ಮರಣ ಒದಗಿದರೂ ಸದ್ಗತಿಗೆ ದಾರಿಯೇನು?” ಎಂದು ಕೊರಗಿ ಕೇಳಿದ್ದನು. ಆಗ ಮಂದಸ್ಮಿತನಾದ ಮಾಧವ “ಹೇ ಮಹಾರಾಜನೇ! ಈಗ ಯುದ್ಧದಲ್ಲಿ ಮಡಿದವರು ನಿನ್ನ ಮಕ್ಕಳು ಹೌದಾದರೂ, ಅವರು ಎಂದಾದರೂ ನಿನಗೆ ಅಪ್ಪ ಎಂಬ ಪೂರ್ಣ ಗೌರವ ನೀಡಿದ್ದು ಇದೆಯೇ? ಅಥವಾ ತಮ್ಮ ಸ್ವಾರ್ಥ ಸಾಧನೆಗೆ ನಿನ್ನದ್ದಾಗಿದ್ದ ಅಧಿಕಾರ ಮತ್ತು ಪುತ್ರ ವ್ಯಾಮೋಹವನ್ನಷ್ಟೆ ಬಯಸಿದ್ದರೇ? ಒಮ್ಮೆ ಯೋಚಿಸಿ ನೋಡು, ಎಂದಾದರೂ ನಿನಗೆ ಹಿತವೆಣಿಸುವ ರೀತಿ ಪ್ರಾಮಾಣಿಕವಾಗಿ ನಿನ್ನ ಅಭಿಮತವನ್ನು ಮನ್ನಿಸಿ ವ್ಯವಹರಿಸಿದ್ದಾರೆಯೇ? ಆದರೂ ಮಡಿದವರು ನಿನ್ನ ಮಕ್ಕಳು ಹೌದು. ಪುತ್ರ ವಿಯೋಗಕ್ಕಿಂತ ವಿಪರೀತ ಬಾಧೆ ನೀಡಬಲ್ಲ ದುಃಖ ಮತ್ತೊಂದಿರದು. ನಿನಗೊಂದು ಸತ್ಯವನ್ನು ಹೇಳುತ್ತೇನೆ ಕೇಳು… ಈಗ ಉಳಿದಿರುವವರು ನಿನ್ನ ಸೋದರ ಪಾಂಡುವಿನ ಮಕ್ಕಳು. ನಿನಗೂ ಮಕ್ಕಳೇ ಅಲ್ಲವೇ? ಅವರಿಗೆ ತಂದೆಯಿಲ್ಲ. ಪಿತೃಸ್ಥಾನದ ಪೂರ್ಣ ಗೌರವ, ಪ್ರೀತಿ, ಮಾನ್ಯತೆ ಎಲ್ಲವನ್ನೂ ನಿನಗರ್ಪಿಸಿ, ನಿನ್ನ ಒಂದು ಮಾತನ್ನೂ ಮೀರದೆ ನಿಜವಾದ ಮಮತೆಯಿಂದ ಅವರು ನಡೆಸಿಕೊಳ್ಳುತ್ತಾರೆ ಎಂಬ ಸತ್ಯದ ಮೇಲೆ ಯಾವ ರೀತಿಯ ಶಂಕೆಯನ್ನೂ ಪಡಬೇಕಾಗಿಲ್ಲ. ಅಂತಹ ನೆಮ್ಮದಿಯ ಜೀವನ ನಿನ್ನದ್ದಾಗಲಿದೆ. ಧರ್ಮರಾಯ ಚಕ್ರವರ್ತಿ ಆಗಿದ್ದರೂ, ನಿನ್ನ ಆಜ್ಞಾನುವರ್ತಿಯಾಗಿ ವ್ಯವಹರಿಸಿ ಸ್ವಯಂ ನೀನೇ ಮಹಾರಾಜ ಎಂಬಷ್ಟು ಸ್ವಾತಂತ್ರ್ಯ ನಿನಗೆ ಅನುಭವವಾಗಲಿದೆ. ಇನ್ನು ನಿನ್ನ ಸದ್ಗತಿಯ ಬಗ್ಗೆ ಚಿಂತಿಸುತ್ತಿರುವೆಯಲ್ಲಾ! ಇವರು ನಿಷ್ಠೆಯಿಂದ ನಿನ್ನ ಮಕ್ಕಳಿಗಿಂತಲೂ ಕ್ರಮಬದ್ಧವಾಗಿ ಸದ್ಗತಿ ಕಾರ್ಯಗಳನ್ನು ಮಾಡಿಸುತ್ತಾರೆ ಎಂಬ ವಿಶ್ವಾಸವನ್ನು ನೀನು ಇರಿಸಬಹುದು. ಇದೆಲ್ಲವನ್ನು ಸಂಭ್ರಮಿಸಬೇಕಾದರೆ ಮೊದಲು ನೀನು ಈಗ ಆಗಿ ಹೋಗಿರುವ ಎಲ್ಲಾ ಕಹಿ ಘಟನೆಗಳನ್ನು ಮರೆಯಬೇಕು, ಆಗ ಮಾತ್ರ ನಿನಗೆ ನೆಮ್ಮದಿ ಪ್ರಾಪ್ತವಾದೀತು” ಎಂದು ವಿವರಿಸಿ ಹೇಳಿದ್ದನು. ಈಗ ಅವೆಲ್ಲವೂ ನಿಜವಾಗಿಯೂ ಸತ್ಯ ಎಂದು ಅನುಭವವಾಗುತ್ತಿದೆ. ಆದರೂ ಹೆತ್ತವರಿಗೆ ತಮ್ಮ ಮಕ್ಕಳನ್ನು ಮರೆಯಲಾದೀತೇ? ಅವರ ಭೀಷಣ ಮೃತ್ಯು ಕಥನಗಳು ಘೋರ ಸ್ವಪ್ನದಂತೆ ನಿತ್ಯವೂ ಕಾಡುತ್ತಲಿತ್ತು.
ಇತ್ತ ಯಾರು ಕೌರವರನ್ನು ಮರೆತರೂ ಭೀಮಸೇನನಿಗೇಕೊ ಮರೆತು ಹೋಗುತ್ತಲಿರಲಿಲ್ಲ. ಎಳವೆಯಲ್ಲಿ ಅವರು ನೀಡಿದ ಹಿಂಸೆ, ಕೋಪಗೊಂಡು ತಾನು ಬಾರಿಸುತ್ತಿದ್ದ ಹೊಡೆತಗಳು, ಮರವೇರಿ ಹಣ್ಣು ತಿನ್ನುತ್ತಾ ಮೂದಲಿಸುತ್ತಿದ್ದ ಕೌರವರನ್ನು ಅವರು ಏರಿದ ಮರವನ್ನು ಅಲುಗಿ ಉದುರಿಸಿ ಕೈಕಾಲು ಮುರಿಯುವಂತೆ ಮಾಡಿದ್ದ ಕ್ಷಣಗಳು, ಗಂಗೆಯ ನೀರಿನಲ್ಲಿ ಜಲಕ್ರೀಡೆಗೆ ಕರೆದು ಬಾಲ ಭೀಮನನ್ನು ಮುಳುಗಿಸಲು ಹೊರಟ ಕೌರವ ಸೋದರರನ್ನು ಮುಳುಗಿಸಿ ಅದ್ದಿ ನೀರು ಕುಡಿಸಿದ್ದ ದಿನಗಳು… ಹಗೆ ತೀರಿಸಲು ಶಕುನಿ ಮಾಮನ ಜೊತೆ ಸೇರಿ ಗಾಂಧಾರದ ಕಡು ವಿಷಮಿಶ್ರಿತ ಲಡ್ಡುಗೆ ತಿನ್ನಿಸಿ ವಿಷ ಸರ್ಪಗಳ ಆಗರವಾಗಿದ್ದ ಸರೋವರ ಪ್ರಮಾಣಕೋಟಿಗೆ ಎಸೆದ ಕ್ರೂರ ಕೃತ್ಯ. ಆದರೂ ವೃಕೋದರನಾಗಿ ಏನು ತಿಂದರೂ ಜೀರ್ಣಿಸಬಲ್ಲವನಾಗಿ ಅನುಗ್ರಹ ಪಡೆದು ಬಂದ ವಿಶೇಷ ಪ್ರಾಪ್ತಿ, ಅರಗಿನ ಮನೆಯ ಸಂಚು, ಕಪಟ ದ್ಯೂತದ ವಂಚನೆಯಲ್ಲಿ ಪತಿವ್ರತೆ ದ್ರೌಪದಿಯ ಮಾನಭಂಗ ಯತ್ನ, ಪ್ರತಿಯಾಗಿ ನೂರು ಮಂದಿ ಕೌರವರನ್ನು ಕೊಂದು ಕೆಡಹುವ ಶಪಥ. ಅದರಲ್ಲೂ ದ್ರೌಪದಿಯನ್ನು ಕರೆದು ದುರ್ಯೋಧನ ತಟ್ಟಿದ ತೊಡೆ ಮುರಿಯುವ, ಸೀರೆಯ ಸೆರಗಿಗೆ ಕೈಹಾಕಿದ, ದ್ರೌಪದಿಯ ಮುಡಿ ಹಿಡಿದೆಳೆದ ದುಶ್ಯಾಸನ ಕರುಳು ಬಗೆದು ರಕ್ತ ಕುಡಿಯುವ ಭೀಮನ ಘೋರ ಮಹಾಭಾರತ ಯುದ್ಧದಲ್ಲಿ ಒಬ್ಬೊಬ್ಬರನ್ನು ಬಡಿದು ಸೀಳಿ ಹೊಸಕಿ ಹಾಕಿದ ಭೀಬತ್ಸಕರ ನೆನಪುಗಳು ಹೀಗೆ ಎಲ್ಲವೂ ಭೀಮನಿಗೆ ನೆನಪಾಗುತ್ತಲಿತ್ತು. ಮರೆಯೋಣವೆಂದರೂ ಮರೆಯಲಾಗದೆ ಪ್ರತಿಫಲಿಸುತ್ತಲೆ ಇತ್ತು. ಪರಿಣಾಮ ಸದಾ ಅದೇ ಗುಂಗಿನಲ್ಲಿರುತ್ತಿದ್ದ ಭೀಮಸೇನ ಅವರೆಲ್ಲರನ್ನೂ ಕೊಂದ ಬಗೆಯ ಕಥೆಗಳನ್ನು ಹೇಳುತ್ತಾ ಗರ್ವ ಪಡುತ್ತಿದ್ದನು. ಧರ್ಮರಾಯನಿಗೆ ಇದು ಗೊತ್ತಾದಾಗ ಅಣ್ಣ ಬೇಸರಿಸಿದರೆ, ಅಥವಾ ಏನಾದರು ಹೇಳಿದರೆ ಎಂದು ಭಯಗೊಂಡು ಸುಮ್ಮನಿರುತ್ತಿದ್ದನು. ಆದರೂ ಅವಕಾಶ ಸಿಕ್ಕಾಗಲೂ, ಏಕಾಂತದಲ್ಲಿ ತನ್ನಷ್ಟಕ್ಕೆ ತಾನು ಇರುವಾಗಲೂ ಇದೇ ಕುರಿತಾಗಿ ನೆನಪು ಮಾಡಿಕೊಂಡು ತನ್ನ ಸಾಹಸದ ಬಗ್ಗೆ ಹೆಮ್ಮೆ ಪಡುತ್ತಾ ತನ್ನ ಭುಜಗಳನ್ನು ತಟ್ಟಿಕೊಳ್ಳುವುದು, ಮೀಸೆ ತಿರುವುದು, ಎದೆ ಉಬ್ಬಿಸಿ ಅಧಟನ್ನು ತೋರಿಕೊಳ್ಳುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದನು. ಇಂತಹ ಸಮಯದಲ್ಲಿ ಯಾರಿದ್ದಾರೆ, ಯಾರಿಲ್ಲ ಎಂಬ ಪರಿವೆಯೂ ಭೀಮನಿರುತ್ತಿರಲಿಲ್ಲ. ಯಾಕೆಂದರೆ ಅಷ್ಟು ಗಹನವಾಗಿ ಆ ವಿಷಯದಲ್ಲಿ ತನ್ಮಯನಾಗಿರುತ್ತಿದ್ದನು. ಪರಿಣಾಮವಾಗಿ ಹಲವು ಬಾರಿ ಭೀಮನ ಹುಂಕಾರ, ಘರ್ಜನೆ, ಭುಜಸ್ಫಾಲನ ಧೃತರಾಷ್ಟ್ರನಿಗೂ ಕೇಳಿಸುತ್ತಿದ್ದು ಬಹಳವಾಗಿ ನೊಂದುಕೊಳ್ಳುವಂತಾಗಿತ್ತು. ಹತಭಾಗ್ಯರಾದ ಮುದಿ ಮಾತಾಪಿತರು ಭೀಮಸೇನನ ಈ ನಡತೆಯಿಂದ ಕಣ್ಣೀರು ಸುರಿಸುತ್ತಿದ್ದರು. ಹೀಗೆಯೇ ಹೇಗೋ ಹದಿನೈದು ಸಂವತ್ಸರಗಳು ಕಳೆದು ಹೋದವು. ಒಂದು ದಿನ…
ಮುಂದುವರಿಯುವುದು…






















