ಅ. 17ರಂದು ಚಂಡಿಕಾ ಯಾಗ: ಡಾ.ದಿನೇಶ್ ಶೆಟ್ಟಿ ರೆಂಜಾಳ ರಚಿತ “ಶರಧಿ” ಗ್ರಂಥ ಲೋಕಾರ್ಪಣೆ

ಕಾರ್ಕಳ: ನಕ್ರೆ ಬಲಿಪಗುತ್ತು ಶ್ಯಾಮ್ ಎನ್. ಶೆಟ್ಟಿ ಹಾಗೂ ಕುಟುಂಬಸ್ಥರ ಪರವಾಗಿ ಅಕ್ಟೋಬರ್ 17ರಂದು ಶನಿವಾರ ಕಾರ್ಕಳದ ನಕ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 25ನೇ ವರ್ಷದ ಚಂಡಿಕಾಯಾಗ ನಡೆಯಲಿದೆ.
ಶ್ಯಾಮ್ ಎನ್. ಶೆಟ್ಟಿ ಅವರು ಉದ್ಯಮ, ಸಮಾಜಸೇವೆ, ಸಂಘಟನಾ ಕಾರ್ಯ, ಜನಸ್ನೇಹಿ ಕಾರ್ಯಗಳು ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಗುರುತಿಸಿಕೊಂಡಿದ್ದಾರೆ. ಮುಂಬಯಿಯಲ್ಲಿ ಬದುಕು ಕಟ್ಟಿಕೊಂಡು ಮಹಾರಾಷ್ಟ್ರದ ಪ್ರತಿಷ್ಠಿತ ಉದ್ಯಮಿಯಾಗಿ ಬೆಳೆದಿರುವ ಅವರು, ಉದ್ಯಮದ ಜೊತೆಗೆ ಸಮಾಜಸೇವೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಮಂದಸ್ಮಿತ, ಮೃದುಭಾಷಿ, ಸರಳ ಸಜ್ಜನ ಶ್ಯಾಮ್ ಎನ್ ಶೆಟ್ಟಿಯವರ 75ನೇ ಸಂಭ್ರಮದ ಅಂಗವಾಗಿ ಶ್ಯಾಮ್ ಎನ್ ಶೆಟ್ಟಿ ಅಭಿಮಾನಿ ಬಳಗ ಮುಂಬೈ ಟೀಂ ಐಲೇಸಾ ಇವರ ಸಹಯೋಗದಲ್ಲಿ ಮಧ್ಯಾಹ್ನ 3:00 ಗಂಟೆಗೆ ಡಾ.ದಿನೇಶ್ ಶೆಟ್ಟಿ ರೆಂಜಾಳ ರಚಿತ ‘ಶರಧಿ’ ಗ್ರಂಥ ಲೋಕಾರ್ಪಣೆ ನಡೆಯಲಿದೆ.
ಟೀಂ ಐಲೇಸಾ ಮುಂಬೈ ಮತ್ತು ಬೆಂಗಳೂರಿನ ಪ್ರಸಿದ್ಧ ಕಲಾವಿದರಿಂದ ‘ಸಂಗೀತ ನೃತ್ಯ ವೈಭವ’ ನಡೆಯಲಿದೆ. ಅಲ್ಲದೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಾಜಸೇವಕರು, ಉದ್ಯಮಿಗಳು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದು, ಈ ಸಮಾರಂಭಕ್ಕೆ ಸರ್ವರಿಗೂ ಸ್ವಾಗತ ಕೋರಲಾಗಿದೆ






















