26 C
Udupi
Thursday, October 8, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 664

ಭರತೇಶ್ ಶೆಟ್ಟಿ, ಎಕ್ಕಾರು

ನೂತನ ವಸ್ತ್ರಾಭರಣಗಳನ್ನು ತೊಟ್ಟು ಬಂದ ಧರ್ಮರಾಯ ಮತ್ತು ದ್ರೌಪದಿ ಸ್ವರ್ಗದ ದೇವರಾಜ ದೇವರಾಣಿಯಂತೆ ಶೋಭಿಸುತ್ತಿದ್ದಾರೆ. ಶ್ರೀಕೃಷ್ಣ, ಬಕದಾಲ್ಭ್ಯ, ವ್ಯಾಸ, ನಾರದ ಮತ್ತು ಧೌಮ್ಯರ ಸಮಕ್ಷದಲ್ಲಿ ಕ್ರಮದಂತೆ ದಾನ ಧರ್ಮ, ದಕ್ಷಿಣೆಗಳು ಯಥೇಚ್ಚವಾಗಿ ನೀಡಲ್ಪಟ್ಟವು. ಹೀಗೆ ಧರ್ಮರಾಯನ ಅಶ್ವಮೇಧ ಯಾಗದ ಹವಿಸ್ಸನ್ನುಂಡು ದೇವತೆಗಳು ಸಂಪ್ರೀತರಾಗಿದ್ದಾರೆ. ಮತ್ತೊಂದೆಡೆ ದಾನ ಧರ್ಮ, ದಕ್ಷಿಣೆ ಪಡೆದವರೂ ಸಂತುಷ್ಟರಾಗುತ್ತಿದ್ದಾರೆ. ಸಂತೃಪ್ತರಾದ ಋಷಿ ಮುನಿಗಳು, ಬ್ರಾಹ್ಮಣೋತ್ತಮರು ಪಾಂಡವರನ್ನು ಸಂತೋಷದಿಂದ ಹರಸಿ ಆಶೀರ್ವದಿಸುತ್ತಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ಬಕದಾಲ್ಭ್ಯ, ವ್ಯಾಸ ಹಾಗು ಧೌಮ್ಯರ ನಿರ್ದೇಶನದಲ್ಲಿ ಅವರು ನೀಡಿದ ಆಜ್ಯಶೇಷ, ಹವಿಶ್ಯೇಷಗಳನ್ನು ಧರ್ಮರಾಜನು ಶ್ರೀಕೃಷ್ಣ ಪರಮಾತ್ಮನ ಪಾದಾರವಿಂದದೆಡೆಯಲ್ಲಿಟ್ಟು ದ್ರೌಪದೀ ಸಹಿತನಾಗಿ ನಮಸ್ಕರಿಸಿದನು. ಪಾಂಡವ ಸೋದರರು ಶ್ರೀಕೃಷ್ಣ ಪರಮಾತ್ಮನಿಗೆ ವಂದಿಸಿದರು. ಯಾಗ ಸಂಪನ್ನತೆಯ ಅನುಗ್ರಹ ಪಡೆದು ಧನ್ಯತಾಭಾವದಿಂದ ಎದ್ದು ನಿಂತರು.

ಅಶ್ವಮೇಧ ಯಾಗ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಆ ಬಳಿಕ ಧರ್ಮರಾಯನು ಮಹಾಸಭೆಯನ್ನು ಕರೆದು ಸಭಾಸದರಾಗಿರುವ ಋತ್ವಿಜರು, ಋಷಿಮುನಿಗಳು, ಬ್ರಾಹ್ಮಣರು, ಮಿತ್ರರಾಜರು, ನಾನಾದೇಶಗಳಿಂದ ಆಮಂತ್ರಿತರಾದ ರಾಜ ಪರಿವಾರದವರೆಲ್ಲರಿಗೆ, ಪ್ರಜೆಗಳಿಗೆಲ್ಲ ಧನ್ಯತೆಯಿಂದ ಕೈಮುಗಿದನು. “ನಿಮ್ಮೆಲ್ಲರ ಸಹಕಾರದಿಂದ ಅಶ್ವಮೇಧ ಯಾಗ ಇಷ್ಟೊಂದು ವೈಭವೋಪೇತವಾಗಿ ಸಾರ್ಥಕ್ಯವನ್ನು ಕಂಡಿದೆ. ನನಗೀಗ ನಿಮ್ಮೆಲ್ಲರಿಂದ ಪಡೆದ ಸೇವೆಯ ಋಣಭಾರ ಅತಿಯಾಗಿ ಹೆಗಲೇರಿದೆ. ಜೊತೆಗೆ ಸತ್ಕಾರ್ಯದಲ್ಲಿ ಭಾಗವಹಿಸಿದ ಪುಣ್ಯ ನಿಮಗೂ ಒದಗಿದೆ. ಮನದ ಪ್ರಾಮಾಣಿಕ ಸತ್ಯವಚನವೊಂದನ್ನು ಈ ಸಭೆಯಲ್ಲಿ ಹೇಳ ಬಯಸುತ್ತೇನೆ. ಅಶ್ವಮೇಧ ಯಾಗ ಆರಂಭವಾದುದು ಶ್ರೀಕೃಷ್ಣ ಪರಮಾತ್ಮನ ಸೂಚನೆಯಂತೆ. ಅಲ್ಲಿಂದ ಈ ತನಕ ಪ್ರತಿಯೊಂದು ಹಂತದಲ್ಲಿ ಏನೇ ಸಂಕಷ್ಟ ಒದಗಿದರೂ ಲೀಲಾಜಾಲವಾಗಿ ನಿಭಾಯಿಸುತ್ತಾ ಯಾಗ ಸಂಪನ್ನವಾಗಲು ಕಾರಣೀಕರ್ತ ವಾಸುದೇವ ಕೃಷ್ಣ. ಹಾಗಾಗಿ ಕೃತಕರ್ಮ ವಿಶೇಷಗಳೇನು ಇದ್ದರೂ ಸರ್ವಸ್ವವನ್ನೂ ತಮ್ಮೆಲ್ಲರ ಎದುರಲ್ಲಿ ಭಗವಾನ್ ಕೃಷ್ಣನ ಚರಣಾರವಿಂದಗಳಿಗೆ ಸಮರ್ಪಿಸುತ್ತೇನೆ” ಎಂದು ಹೇಳಿ ದ್ರೌಪದಿ ಸಹಿತನಾಗಿ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿದನು.

ಇದೆಲ್ಲ ಆದ ಬಳಿಕ ಮಹಾರಾಜನಾದ ಧರ್ಮರಾಯನು ದ್ರೌಪದಿಯೊಂದಿಗೆ ಬಂಗಾರದ ಆಸನದಲ್ಲಿ ವಿರಾಜಮಾನನಾದನು. ನೆರೆದವರೆಲ್ಲರೂ ಧರ್ಮರಾಜನ ಗುಣಗಾನ ಮಾಡತೊಡಗಿದರು. ಸತ್ಯಾತ್ಮನೂ, ಧರ್ಮಾತ್ಮನೂ, ಸಜ್ಜನನೂ ಆದ ಯುಧಿಷ್ಠಿರನಿಗೆ ಭಗವತ್ಕೃಪೆ ಒಲಿದು ಬಂದಿದೆ. ಆತನಿಗಿಂತ ಶ್ರೇಷ್ಠ, ರಾಜರು ಆರ್ಯಾವರ್ತದಲ್ಲಿ ಯಾರೂ ಇಲ್ಲ. ಪುಣ್ಯವಂತನೂ, ಕೃತಾರ್ಥಚರಿತನೂ ಆದ ಧರ್ಮರಾಯನಿಗೆ ಶುಭವಾಗಲಿ, ಸನ್ಮಂಗಲವಾಗಲಿ ಎಂದು ಹರಸಿ ಹಾರೈಸಿದರು. ಊಟೋಪಚಾರ, ಮೃಷ್ಟಾನ್ನ, ಉಪಹಾರಗಳು, ವಿಧ ವಿಧ ಭಕ್ಷ್ಯ, ಭೋಜ್ಯ, ಪೇಯ, ಲೇಹ್ಯಗಳೊಂದಿಗೆ ಸಮಾರಾಧನೆಯಂತೆ ವಿಜ್ರಂಭಣೆಯಿಂದ ನಿರಂತರವಾಗಿ ನಡೆಯುತ್ತಿದೆ.

ಹೀಗೆ ಅಶ್ವಮೇಧಯಾಗ ಬಹಳಷ್ಟು ವಿಧಿವತ್ತಾಗಿ, ಮಹಾತ್ಮರಾದ ಋಷಿ ವರೇಣ್ಯರಿಂದ, ಬ್ರಾಹ್ಮಣೋತ್ತಮರು, ಋತ್ವಿಜರೆಲ್ಲ ಸೇರಿ ಹಸ್ತಿನೆಯ ಚರಿತ್ರೆಯಲ್ಲಿ ದಾಖಲೆ ಎಂಬಷ್ಟರ ಮಟ್ಟಿಗೆ ವೈಶಿಷ್ಟ್ಯಪೂರ್ಣವಾಗಿ ಸಂಪನ್ನಗೊಂಡಿದೆ. ಜನಸಾಮಾನ್ಯರು, ಪ್ರಜಾಪರಿವಾರದವರೆಲ್ಲ ಅಡಿಗಡಿಗೆ ಧರ್ಮರಾಜನನ್ನು ಕುರಿತು ಬಹುವಾಗಿ ಕೊಂಡಾಡತೊಡಗಿದರು. ಪರಾಕ್ರಮದಲ್ಲಿ, ಸಂಗ್ರಹದಲ್ಲಿ, ಕರ್ಮಭಾಗದಲ್ಲಿ, ದಾನದಕ್ಷಿಣೆಗಳಲ್ಲಿ, ವಿಜ್ರಂಭಣೆಯಲ್ಲಿ ವಿಶೇಷವಾಗಿ ಅನ್ನದಾನದಲ್ಲಿ ಧರ್ಮರಾಯನ ಯಾಗ ಅದ್ವಿತೀಯವಾದುದು. ಯಾವ ವಿಭಾಗದಲ್ಲಿಯೂ ಕೊರತೆ ಆಗಲಿಲ್ಲ. ಒಂದಕ್ಕಿಂತ ಇನ್ನೊಂದು ಅದ್ಬುತವಾಗಿ ನಿರೀಕ್ಷೆಯನ್ನು ಮೀರಿಸುವಷ್ಟು ಸೊಗಸಾಗಿ ನಿರ್ವಹಿಸಲ್ಪಟ್ಟಿದೆ. ಹಾಗೆ, ಹೀಗೆ, ಅಷ್ಟು, ಇಷ್ಟು…. ಎಂದೆಲ್ಲಾ ಜನರು ಮುಕ್ತಕಂಠದಿಂದ ಮನಸಾರೆ ಹೊಗಳುತ್ತಾ ಧರ್ಮರಾಯನ ಯಾಗಕ್ಕಿಂತ ಶ್ರೇಷ್ಠ ಯಾಗ ನಡೆದಿರಲಿಕ್ಕಿಲ್ಲ.. ಎಂದು ಹೊಗಳುತ್ತಾ ಹೇಳತೊಡಗಿದರು.

ಆಗ ಅಲ್ಲೇ ಸಮೀಪದ ಒಂದು ಬಿಲದಿಂದ ಮುಂಗುಸಿಯೊಂದು ಹೊರಬಂತು. ಸಾಮಾನ್ಯ ಮುಂಗುಸಿಯಂತೆ ಆಕಾರ ಹೊಂದಿದ್ದರೂ ಅದರಲ್ಲಿ ವಿಶೇಷವಿತ್ತು. ಆ ಮುಂಗುಸಿಯ ದೇಹದ ಬಲಭಾಗ ಬಂಗಾರದ ಬಣ್ಣದಿಂದ ಹೊಳೆಯುತ್ತಿತ್ತು. ಹೊರಬಂದ ಮುಂಗುಸಿ ಅನ್ನದಾನ ನಡೆದ ಛತ್ರದಲ್ಲೆಡೆ ಹೊರಳಾಡಿತು. ನೆರೆದ ಜನರೆಲ್ಲ ಇದೇನು ವಿಶೇಷ? ಮುಂಗುಸಿ ಏಕೆ ಈ ರೀತಿ ವರ್ತಿಸುತ್ತಿದೆ? ಎಂದು ವಿಸ್ಮಿತರಾಗಿದ್ದಾರೆ. ಅವರೆಲ್ಲರೂ ನೋಡುತ್ತಿರುವಂತೆಯೆ ಮುಂಗುಸಿ ಜೋರಾಗಿ ಒಮ್ಮೆಲೆ ಕೂಗುವ ಧ್ವನಿಯೆಬ್ಬಿಸಿತು. ಆ ಸ್ವರ ಅದ್ಬುತವೂ, ತೀಕ್ಷ್ಣವೂ ಆಗಿತ್ತು. ವಿಚಿತ್ರ ಶಬ್ದವನ್ನು ಕೇಳಿ ಎಲ್ಲರೂ ಕುತೂಹಲಿಗರಾಗಿ ಮುಂಗುಸಿಯಿದ್ದಲ್ಲಿಗೆ ಓಡಿಬಂದರು. ಶ್ರೀಕೃಷ್ಣ ಪರಮಾತ್ಮನೂ ಅತ್ತ ಬಂದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page