24.8 C
Udupi
Monday, October 5, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 661

ಭರತೇಶ್ ಶೆಟ್ಟಿ, ಎಕ್ಕಾರು

ನಾರದರು ಅಶ್ವಮೇಧ ಯಾಗಕ್ಕೆ ಬಂದು ಸೇರಿದ ಕೆಲವು ರಾಜಕುಮಾರರನ್ನು ಕರೆದು ತನ್ನದ್ದಾದ ಒಂದು ತಂಡವನ್ನು ಕಟ್ಟಿಕೊಂಡರು. “ನಾರಾಯಣ”… “ನಾರಾಯಣ”… ಎನ್ನುತ್ತಾ ಮುಗುಳ್ನಗುತ್ತಾ ಅವರೆಲ್ಲರನ್ನು ಕರೆದೊಯ್ದರು. ಹಿಂಬಾಲಿಸಿ ಹೋದ ರಾಜಕುಮಾರರಿಗೆ ಮಹರ್ಷಿ ನಾರದರು ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ಅರಿವು ಇಲ್ಲದಿದ್ದರೂ, ಅವರು ಹೋದಲ್ಲಿಗೆ ಹೋಗುತ್ತಿದ್ದಾರೆ. ಎಲ್ಲರಿಗೂ ಆಶ್ಚರ್ಯ! ಅರೆ! ಇವರ್ಯಾಕೆ ಹೆಣ್ಮಕ್ಕಳು ಇರುವ ಅಂತಃಪುರಗಳತ್ತ, ಈ ಬ್ರಹ್ಮಾಚಾರಿ ಯಾಕಪ್ಪ ಹೋಗುವುದು? ಅದೂ ರಾಜಕುಮಾರರಾದ ನಮ್ಮನ್ನು ಕರೆದುಕೊಂಡು! ರಾಣಿ ಮಹಾರಾಣಿಯರು, ಯುವರಾಣಿಯರು ವಾಸ್ತವ್ಯ ಇರುವ ಜಾಗದಲ್ಲಿ ನಮಗಾದರೂ ಏನು ಕೆಲಸ? ” ಯಾಕೆ?” ಎಂದು ಪ್ರಶ್ನಿಸುವ ಹಾಗೂ ಇಲ್ಲ. ಎಲ್ಲರೂ ಮುಖ ಮುಖ ನೋಡುತ್ತಾ? ಹುಬ್ಬೇರಿಸುತ್ತಾ ಪರಸ್ಪರ ಪ್ರಶ್ನೆ ಮಾಡುತ್ತಾ… ಗೊತ್ತಿಲ್ಲ ಎಂಬಂತೆ ತುಟಿ ವಕ್ರಗೊಳಿಸಿ, ಭುಜ ಏರಿಸಿ ಉತ್ತರ ನೀಡುತ್ತಾ ಸಾಗಿದರು. ನಾರದರು ನೇರವಾಗಿ ಶ್ರೀಕೃಷ್ಣನ ಪಟ್ಟದರಸಿಯರಲ್ಲಿ ಓರ್ವಳಾದ ಸತ್ಯಭಾಮೆಯ ಅಂತಃಪುರದತ್ತ ನಡೆದರು. ಬಾಗಿಲಲ್ಲಿ ನಿಂತು “ನಾರಾಯಣ”…. “ನಾರಾಯಣ”… ಎಂದಾಗ ಹರಿ ನಾಮ ಸ್ಮರಣೆ ಕೇಳಿ ಸತ್ಯಭಾಮಾ ದೇವಿ ಹೊರಬಂದು ನೋಡಿದರೆ ನಾರದರು. ಪೂಜನೀಯರಾದ ಮಹರ್ಷಿಗಳಿಗೆ ವಂದಿಸಿ ಉಚಿತ ಆಸನಗಳನ್ನಿತ್ತು ನಮಿಸಿದಳು. ” ಪೂಜ್ಯರೇ! ನೀವು ಹೇಳಿ ಕಳುಹಿಸಿದ್ದರೆ ನಾನೇ ನೀವಿದ್ದಲ್ಲಿಗೆ ಬರುತ್ತಿದ್ದೆ. ಇಲ್ಲಿಯವರೆಗೆ ಹುಡುಕಿಕೊಂಡು ಬರುವ ಕಷ್ಟ ಪಡಬೇಕಾಗಿರಲಿಲ್ಲ. ನನ್ನಿಂದ ಏನಾದರು ಕಾರ್ಯವಾಗಬೇಕಿದ್ದರೆ ಅಪ್ಪಣೆ ಕೊಡಿ. ಸೇವೆಗೆ ಸಿದ್ದಳಿದ್ದೇನೆ ಋಷಿವರ” ಎಂದು ಕೈ ಮುಗಿದು ಕೇಳಿಕೊಂಡಳು. ಆಗ ನಾರದರು “ದೇವೀ! ನಾನು ಯಾವುದೇ ಕೆಲಸಕ್ಕಾಗಿ ಬಂದವನಲ್ಲ. ಒಂದು ವಿಚಾರವನ್ನು ತಿಳಿಸುವುದಕ್ಕಾಗಿ ಬಂದಿದ್ದೇನೆ. ಶ್ರೀಕೃಷ್ಣ ಪರಮಾತ್ಮನ ಮೆಚ್ಚಿನ ರಾಣಿಯಲ್ಲವೆ ನೀವು. ನಿಮಗೂ ಶ್ರೀಕೃಷ್ಣನೆಂದರೆ ಅದೆಷ್ಟು ಪ್ರೀತಿ, ಅನುರಾಗ. ಒಂದರೆ ಕ್ಷಣ ಕೃಷ್ಣದೇವ ಕಾಣಿಸದಿದ್ದರೆ ನೀರಿನಿಂದ ಹೊರಬಿದ್ದ ಮೀನಿನಂತೆ ವಿಲವಿಲ ಒದ್ದಾಡುವವರಲ್ಲವೆ? ಆದರೆ ಇಂದು ನನಗೊಂದು ವಿಶೇಷ ಕಾಣ ಸಿಕ್ಕಿತು. ಯಾಗದೀಕ್ಷಿತನಾಗಿ ಯಾಜಮಾನ್ಯ ಸ್ಥಾನದಲ್ಲಿರುವ ಧರ್ಮರಾಜನಿಗೆ ದಂಪತಿಗಳು ಸ್ವರ್ಣಕಲಶದಲ್ಲಿ ಗಂಗಾಜಲ ತಂದು ಅಭಿಷೇಕವಾಗಲಿಕ್ಕಿದೆ. ನಿಮ್ಮ ಗಂಡ ಶ್ರೀಕೃಷ್ಣ ರುಕ್ಮಿಣಿ ಸಹಿತನಾಗಿ ಯಾಗಶಾಲೆಯಲ್ಲಿ ಉಪಸ್ಥಿತರಾಗಿದ್ದರು. ವೇದವ್ಯಾಸರು ಹನ್ನೆರಡು ಜತೆ ದಂಪತಿಗಳು ಧರ್ಮರಾಯನಿಗೆ ಪವಿತ್ರ ಗಂಗಾಜಲ ತಂದು ಅಭಿಷೇಕ ಮಾಡಬೇಕು. ಅದಕ್ಕಾಗಿ ಚಿನ್ನದ ಕಲಶದಲ್ಲಿ ಪವಿತ್ರ ಗಂಗಾನದಿಯಿಂದ ನೀರು ತರಲು ಹೇಳಿದಾಗ ಉಳಿದ ದಂಪತಿಗಳಿಗಿಂತ ಮೊದಲು ರುಕ್ಮಿಣಿ ದೇವಿಯ ಜೊತೆಯಾಗಿ ಶ್ರೀಕೃಷ್ಣ ಪರಮಾತ್ಮ ಗಂಗಾತೀರಕ್ಕೆ ಹೋಗಿದ್ದಾರೆ. ಅದನ್ನು ನೋಡಿ ನನ್ನ ಮನದಲ್ಲಿ ಒಂದು ಪ್ರಶ್ನೆ ಉದ್ಭವಿಸಿತು. ಏನೆಂದರೆ ಶ್ರೀಕೃಷ್ಣದೇವನನ್ನು ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುವ ಸತ್ಯಭಾಮಾ ದೇವಿಗಿಂತ ರುಕ್ಮಿಣೀದೇವಿ ಯಾವ ವಿಧಾನದಲ್ಲಿ ಅಧಿಕ ಆಗಿರಬಹುದು? ಸತ್ಯಭಾಮೆಯನ್ನುಳಿದು ರುಕ್ಮಿಣಿ ದೇವಿಯನ್ನು ಯಾಕಾಗಿ ಆರಿಸಿರಬಹುದು? ಹಾಗೆಂದು ಭಗವಂತ ಶ್ರೀಕೃಷ್ಣ ಯಾವುದೇ ಕಾರಣಕ್ಕೂ ತಪ್ಪು ಕೆಲಸ ಮಾಡುವವರಲ್ಲ. ಆದರೆ ಇಂದು ಅವರಿಂದ ಅರಿಯದೆ ಅಪರಾಧವಾಯಿತೆ? ಅಥವಾ ನಿಜವಾಗಿಯೂ ರುಕ್ಮಿಣೀ ದೇವಿ ಶ್ರೇಷ್ಠಳೇ? ಹೀಗೆ ಪ್ರಶ್ನೆಗಳ ಸುರಿಮಳೆ ನನ್ನ ಮನದಲ್ಲಿ ಸುರಿದಂತಾಯಿತು. ಎಷ್ಟು ಯೋಚಿಸಿದರೂ ಸದುತ್ತರ ಸಿಗದ ಕಾರಣ ಏನು ಮಾಡುವುದು ಎಂದು ಯೋಚಿಸಿ, ನೇರವಾಗಿ ನಿಮ್ಮ ಬಳಿಗೆ ಬಂದು ವಿಷಯ ಹೇಳಿ ಬಿಡೋಣ ಎಂದೆಣಿಸಿತು.” ಎಂದನು.

ನಾರದರ ಜೊತೆಗೆ ಬಂದಿದ್ದ ರಾಜಕುಮಾರರಿಗೆಲ್ಲ ಇರಿಸು ಮುರಿಸಾಗುತ್ತಿದೆ. ಏನಪ್ಪಾ ಈ ನಾರದ ಮಹರ್ಷಿಗಳು! ಕಲಹ ಪ್ರಿಯರೆಂದು ಹೆಸರು ಪಡೆದವರು! ಇಲ್ಲೂ ಬಂದು ಚಿಕ್ಕ ವಿಷಯವನ್ನು ರೆಕ್ಕೆ ಪುಕ್ಕ ಜೋಡಿಸಿ ಕಿಚ್ಚನ್ನು ಬೆಂಕಿಯ ಜ್ವಾಲೆಯಾಗಿಸಿದರೋ! ಇನ್ನೇನು ರಂಪಾಟ ಕಾದಿದೆಯೋ? ಇವರಿಗೇನು ಮಾಡಲು ಬೇರೆ ಕೆಲಸ ಇಲ್ಲದೆ ಹೋಯಿತೋ? ಅದೂ ಶ್ರೀಕೃಷ್ಣನ ಸಂಸಾರಕ್ಕೆ ಹುಳಿ ಹಿಂಡಲು ಬಂದ ಇವರ ಗತಿ ಏನಾಗಲಿದೆಯೊ? ಚಾಡಿ ಹೇಳಿ ಯಾರ್ಯಾರ ಜುಟ್ಟು ಹಿಡಿಸದಿದ್ದರೆ ತಿಂದದ್ದು ಕರಗುವುದಿಲ್ಲವೊ ಇವರಿಗೆ? ಎಂದೆಲ್ಲಾ ಯೋಚಿಸಿ ಅವರವರೊಳಗೆ ಚರ್ಚಿಸತೊಡಗಿದರು. ಆಗ ಅವರಲ್ಲೊಬ್ಬ ರಾಜಕುಮಾರ “ಅಯ್ಯಾ ಮಿತ್ರರೇ! ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಭಾವಿಸೋಣ. ನೀವು ಹೇಳಿದ ಹಾಗೆ ನಾರದರು ಕಲಹ ಪ್ರಿಯರು ಹೌದು. ಅದಕ್ಕೆ ನನ್ನ ಸಹಮತವೂ ಇದೆ. ಆದರೆ “ಕಲಹ ಪ್ರಿಯ” ಎಂಬ ಪದದ ಅರ್ಥ ಬಹಳಷ್ಟು ವಿಸ್ತಾರವಾಗಿದೆ. ಕ ಎಂದರೆ “ಕಮಲಾಸನ”, ಲ ಎಂದರೆ ” ಲಕ್ಷ್ಮೀರಮಣ”, ಹ ಎಂದರೆ ಹರಮಹಾದೇವ. ಈ ಮೂವರು ಅಂದರೆ ಕಮಲಾಸನನಾದ ಬ್ರಹ್ಮದೇವನಿಗೂ, ಲಕ್ಷ್ಮೀರಮಣನಾದ ಶ್ರೀಮನ್ನಾರಾಯಣನಿಗೂ, ಹರಮಹಾದೇವನಾದ ಪರಮೇಶ್ವರ ದೇವರಿಗೂ ಪ್ರಿಯನಾದವರು ಎಂದು ನಾವು ತಿಳಿಯಬೇಕು. ಮೂರು ಮೂರ್ತಿಗಳ ಪ್ರೀತಿ ಪಾತ್ರರಾದ ನಾರದರು ಏನು ಮಾಡಿದರೂ ಅದರ ಪರಿಣಾಮ ಒಳಿತೇ ಆಗಿದೆ ಹೊರತು ಕೆಡುಕಾದ ಒಂದು ಪ್ರಸಂಗವೂ ಇಲ್ಲ. ಹಾಗಾಗಿ ಈ ಸಮಯದಲ್ಲೂ ನಾವು ಕುತೂಹಲಿಗರಾಗಿ ಏನು ಆಗಲಿದೆ ಎಂದು ಕಾದು ನೋಡೋಣ. ಯಾರೂ ಅವಸರದಲ್ಲಿ ಕೆಟ್ಟ ಯೋಚನೆ ಮಾಡದಿರಿ. ಎಲ್ಲವೂ ಭಗವಂತನ ಸಂಕಲ್ಪದಂತೆ ನಡೆಯುತ್ತದೆ. ಹಾಗಾಗಿ ಇದೂ ಅವನಿಚ್ಚೆಯಿಂದ ಆಗುತ್ತಿದೆ ಎಂದು ತಿಳಿದು ಸುಮ್ಮನಿರೋಣ” ಎಂದು ಸಂತೈಸಿದನು. ಆದರೂ ಎಲ್ಲರ ಮನದೊಳಗೆ ಒಂದು ಭಯ ಕಾಡ ತೊಡಗಿತ್ತು. ಯಾಕೆಂದರೆ ಸತ್ಯಭಾಮಾ ದೇವಿ ಸ್ವಭಾವತಃ ಸ್ವಲ್ಪ ಶೀಘ್ರ ಕೋಪದವರು. ಅದನ್ನರಿತು ಎಲ್ಲರೂ ಮೌನ ತಳೆದು ನಿಂತು ಬಿಟ್ಟಿದ್ದಾರೆ.

ಮುಂದುವರಿಯುವುದು…..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page