24.9 C
Udupi
Wednesday, September 9, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ -635

ಭರತೇಶ ಶೆಟ್ಟಿ,ಎಕ್ಕಾರು

ಬಕದಾಲ್ಭ್ಯರು ಗಂಗೆಯಲ್ಲಿ ಏಳುತ್ತಿದ್ದ ತರಂಗಿಣಿಗಳನ್ನು ನೋಡುತ್ತಾ ಏನೊ ಯೋಚಿಸತೊಡಗಿದ್ದಾರೆ. ಕೆಲವೊಂದು ಕಿರಿದಾದ ತರಂಗಿಣಿಗಳು ಎದ್ದು ಅಲ್ಲಿಯೆ ವೃತ್ತಾಕಾರವಾಗಿ ಬೆಳೆದು ಗಂಗಾಜಲದಲ್ಲಿ ಕಣ್ಮರೆಯಾಗುತ್ತಿದ್ದವು. ಸ್ವಲ್ಪ ಹಿರಿದಾದ ಅಲೆಗಳು ವಿಸ್ತರಿಸಿ ಹಬ್ಬುತ್ತಾ ದಡದವರೆಗೂ ವ್ಯಾಪಿಸುತ್ತಿದ್ದವು. ಪ್ರತಿ ಜನ್ಮಗಳೂ ಇಷ್ಟೆ ಕೆಲವು ಬಹು ಬೇಗನೆ ಮುಗಿಸಿ ಹಿಂದುಗಿದರೆ, ಇನ್ನು ಕೆಲವು ತುಸು ಸುದೀರ್ಘ ಬಾಳ್ವೆಯನ್ನು ಕಂಡರೂ ಕೊನೆಗೆ ಪಂಚಭೂತಗಳಲ್ಲಿ ಲೀನವಾಗಲೆ ಬೇಕು. ಹಾಗಿರುವಾಗ ಇದೇ ಸತ್ಯ, ಇಲ್ಲಿ ಯಾವುದೂ ಶಾಶ್ವತವಲ್ಲ ಎಂದು‌ ನಾನೂ ಅರಿತಿದ್ದೇನೆ. ನನ್ನ ಬದುಕಿನಲ್ಲೂ ಬಹಳಷ್ಟು ವಿಷಯ, ವಿಶೇಷಗಳು ನಡೆದು ಹೋದುದು ನಿಜ ಹೌದಾದರೂ ಇದೆಲ್ಲಾ ಇನ್ನು ಎಷ್ಟು ಸಮಯ ಮುಂದುವರಿದೀತು? ಒಂದು ಕಡೆ ಆರಂಭ ಆಗಿದೆ ಎಂದ ಮೇಲೆ ಅಂತ್ಯ ಇರಲೇ ಬೇಕಲ್ಲ. ಪರಮಾತ್ಮ ಮಾತ್ರ ಆದಿ ಅಂತ್ಯ ರಹಿತನು. ಹೀಗೆ ಬಹಳಷ್ಟು ಆಳವಾಗಿ ಯೋಚಿಸುತ್ತಾ ಕುಳಿತಿರುವಾಗ ಅಲ್ಲಿಗೆ ಶ್ರೀಕೃಷ್ಣ ಬಂದನು. ಬಕದಾಲ್ಭ್ಯರೂ ಶ್ರೀಕೃಷ್ಣನೂ ಅದೇನು ಮಾತುಕತೆಗೆ ತೊಡಗಿದರೊ ರಾತ್ರಿ ಬೆಳಗಾದರೂ ಇವರೊಳಗಿನ ವಿಚಾರ ವಿಮರ್ಷೆ, ವಿನಿಮಯ ಮುಗಿದಂತಿರಲಿಲ್ಲ. ಪೂರ್ವಾಂಬುಧಿಯಲ್ಲಿ ಅರಣೋದಯವಾಗುವಾಗ ಇವರಿಗೆ ಹೊತ್ತು ಬಹಳಷ್ಟು ಕಳೆದಿದೆ, ನಾವು ಮಾತನಾಡುತ್ತಾ ಮಗ್ನರಾಗಿದ್ದು ಕ್ಷಣಾರ್ಧದಂತೆ ಜಾರಿ ಹೋದುದು ತಿಳಿದಿರಲಿಲ್ಲ. ಕಷ್ಟದ ದಿನದ ಪ್ರತಿ ಕ್ಷಣಗಳೂ ಅನುಭವಕ್ಕೆ ಬಂದು ಬಹು ದೀರ್ಘ ಸಮಯ ಎಂದು ಭಾಸವಾದರೆ, ಸಂತೋಷದ ಮತ್ತು ಮನಕ್ಕೆ ಹಿತ ನೀಡುವ ಸಮಯ ಅರಿವಿಗೆ ಬಾರದೆ ಅವಸರದಲ್ಲಿ ಜಾರಿ ಹೋಗಿರುತ್ತದೆ. ಆದರೆ ಈ ಎರಡೂ ಸಂದರ್ಭ ಕಾಲದ ಚಲನೆ ಸಮಾನ ರೀತಿ ಇದ್ದರೂ ಭಾವನೆಯ ವ್ಯತ್ಯಾಸದಿಂದ ದೀರ್ಘವಾದಂತೆ ಅಥವಾ ಹೃಸ್ವವಾದಂತೆ ಅನುಭವ ನೀಡಿರುತ್ತದೆ. ಎಷ್ಟೊ ಕಲ್ಪಾಂತ್ಯ ಕಾಲ ಬದುಕುಳಿದಿರುವ ಬಕದಾಲ್ಭ್ಯರಿಗೆ ಕಾಲದ ಗಣನೆ ಅರಿಯದ ಸಂಗತಿಯಲ್ಲ. ಆದರೆ ಇಂದಿನ ರಾತ್ರಿ ಕೃಷ್ಣನ ಜೊತೆ ಕಳೆದಾಗ ಕಣ್ಣವೆಯಿಕ್ಕುವ ಕಿರು ಸಮಯದಂತೆ ಕಳೆದು ಹೋದ ಹಾಗೆ ಭಾಸವಾಗಿ ಅಚ್ಚರಿಯಾಯಿತು.

ಈ ಸಮಯ ಬ್ರಾಹ್ಮೀ ಮುಹೂರ್ತ. ಅರಮನೆಯಲ್ಲಿದ್ದ ರಾಣಿಯರು, ಪುರ ಸ್ತ್ರೀಯರು ಸಿದ್ಧರಾಗಿ ಯಾಗಶಾಲೆಯತ್ತ ಹೊರಟರು. ಪರಿ ಪರಿಯ ಉತ್ತಮ ವಸ್ತ್ರ, ಸುಗಂಧ ದ್ರವ್ಯ, ಸರ್ವಾಂಗಗಳಿಗೆ ಒಪ್ಪುವ ಆಭರಣ, ಸುಮ ಪುಷ್ಪಗಳನ್ನು ಧರಿಸಿ ಸಂಭ್ರಮದಿಂದ ಹೊರಟಿದ್ದಾರೆ. ಕುಂತಿ, ಯಶೋದೆ, ದೇವಕಿ, ಸುಭದ್ರೆ, ರುಕ್ಮಿಣಿ, ಸತ್ಯಭಾಮೆ, ಜಾಂಬವತಿ ಸಹಿತ ಕೃಷ್ಣನ ಅಷ್ಟ ಮಹಿಷಿಯರೆಲ್ಲರೂ ಮಹೋಲ್ಲಾಸದಿಂದ ಹೊರಟಿದ್ದಾರೆ.
ಯಾಗಶಾಲೆ ತಲುಪುವ ರಾಜ ಬೀದಿ, ನಂತರದ ರಸ್ತೆಗಳೆಲ್ಲವೂ ಸಂಭ್ರಮ ಸಡಗರದಿಂದ ತುಂಬಿ ತುಳುಕುತ್ತಿದೆ. ಸಮಸ್ತ ಪ್ರಜಾ ಪರಿವಾರ ಶೃಂಗಾರದಿಂದ, ಒಪ್ಪುವ ವಸ್ತ್ರ ಭೂಷಣಗಳಿಂದ ಕಂಗೊಳಿಸುತ್ತಾ ಓಡಾಡುತ್ತಿದ್ದಾರೆ. ಮೇಳ ಗೀತೆಗಳು, ವಿವಿಧ ವಿದ್ಯಾ ವಿನೋದಾವಳಿಗಳು ಪ್ರದರ್ಶನಗೊಳ್ಳುತ್ತಿವೆ. ನಟ ನಟಿಯರು, ನರ್ತಕಿಯರು, ಹಾಡುಗಾರರು, ವಾದಕರು ಹೀಗೆ ಎಲ್ಲರೂ ಅತ್ಯುತ್ಸಾಹದಿಂದ ತಮ್ಮ ತಮ್ಮ ಕೌಶಲ್ಯವನ್ನು ಒಬ್ಬರಿಗಿಂತ ಒಬ್ಬರು ತಾ ಮಿಗಿಲು ತಾ ಮೇಲು ಎಂಬಂತೆ ಸ್ಪರ್ಧೆಗಿಳಿದು ಮೆರೆಸುತ್ತಿದ್ದಾರೆ. ಹಸ್ತಿನೆಯ ಕಲ್ಲು ಮರಗಳೂ ಬಣ್ಣ ಬಣ್ಣಗಳಿಂದ ಅಲಂಕೃತವಾಗಿವೆ. ತರು ಲತೆಗಳು ಮಂದ ಮಾರುತನ ಜೊತೆ ಓಲಾಡುತ್ತಾ ಕುಣಿಯುವಂತೆ ಭಾಸವಾಗುತ್ತಿದೆ. ಖಗ ಮಿಗಗಳು ಇಂಪಾಗಿ ಇಂಚರ ಗಾಯನ ನಿರತವಾಗಿ ಸಂತಸದಲ್ಲಿ ಭಾಗಿಯಾದಂತೆ ಗೋಚರಿಸುತ್ತಿವೆ.

ಹೀಗಿರಲು ಇತ್ತ ನಿತ್ಯಾನುಷ್ಠಾನಗಳನ್ನು ಗಂಗಾ ತೀರದಲ್ಲಿ ಪೂರೈಸಿ ಶ್ರೀಕೃಷ್ಣ ಮತ್ತು ಮಹರ್ಷಿ ಬಕದಾಲ್ಭ್ಯರು ಸಿದ್ಧರಾಗುತ್ತಿದ್ದಂತೆ ಮಂಗಳವಾದ್ಯಗಳ ನಿನಾದ, ಸುಗಂಧ ದ್ರವ್ಯಗಳ ಸುವಾಸನೆ ಅವರೀರ್ವರ ಗಮನ ಸೆಳೆಯಿತು. ಅತ್ತ ನೋಡಿದರೆ ಅರ್ಜುನ, ವಿದುರ, ಧೃತರಾಷ್ಟ್ರ ಸಹಿತರಾಗಿ ಉತ್ಸವದೋಪಾದಿಯಲ್ಲಿ ಸಕಲ ವ್ಯವಸ್ಥೆಗಳೊಂದಿಗೆ ಬಕದಾಲ್ಭ್ಯರಿದ್ದ ಗಂಗಾ ತೀರದ ಪರ್ಣ ಕುಟೀರದತ್ತ ಬಂದಿದ್ದಾರೆ. ಬಕದಾಲ್ಭ್ಯರನ್ನು ಯಾಗಶಾಲೆಯತ್ತ ಕರೆತರಲು ಅವರೆಲ್ಲ ಆಗಮಿಸಿದ್ದಾರೆ. ಶ್ರೀಕೃಷ್ಣಾರ್ಜುನ ಸಹಿತರಾಗಿ ಬಕದಾಲ್ಭ್ಯರು ಯಾಗಶಾಲೆಯತ್ತ ಹೊರಟರು. ಬೀದಿಯುದ್ದಕ್ಕೂ ಪನ್ನೀರ ಸಿಂಚನ, ಧೂಪದ ಧೂಮ, ಪುಷ್ಪವೃಷ್ಟಿ, ಕುಂಕುಮದ ಪರಿಮಳ, ಕರ್ಪೂರದ ಸೊಡರುಗಳ ತಂಪಿನೊಂದಿಗೆ ಬಕದಾಲ್ಭ್ಯರ ಆಗಮನವಾಗುತ್ತಿದೆ.

ಇತ್ತ ಧರ್ಮರಾಯನು ನಕುಲ ಸಹದೇವರಿಗೆ ಮಹರ್ಷಿಗಳನ್ನು, ಋಷಿ ಮುನಿಗಳನ್ನು, ಮಿತ್ರ ರಾಜರುಗಳನ್ನು ಯಾಗದಲ್ಲಿ ಬಂದು ಸೇರಿ ಕೊಳ್ಳುವ ವ್ಯವಸ್ಥೆಗಾಗಿ ನೇಮಿಸಿದ್ದನು. ಎಲ್ಲಾ ಕಡೆ ಧರ್ಮಜನ ಮುಖವಾಣಿಯಾಗಿ ಪ್ರಬುದ್ಧ ದೂತರನ್ನು ಕಳುಹಿಸಿ ನಿಮಂತ್ರಿಸಲಾಗಿದೆ.

ಬಕದಾಲ್ಭ್ಯರು ಯಾಗಶಾಲೆಯತ್ತ ಬಂದು ಸೇರುವ ಸಮಯ ಭಗವಾನ್ ವೇದವ್ಯಾಸರು ಮತ್ತು ಧೌಮ್ಯರೂ ಯಾಗಶಾಲೆಯಲ್ಲಿದ್ದಾರೆ. ಮೂವರು ಮಹಿಮಾನ್ವಿತರನ್ನು ಉಚಿತಾಸನಗಳಲ್ಲಿ ಕುಳ್ಳಿರಿಸಿ ಉಪಚರಿಸಿ ಪೂಜಿಸಿದರು. ವಿಶೇಷವಾಗಿ ಈ ಮೂವರನ್ನೂ ಆರಾಧಿಸಿ, ಬಹುವಿಧಗಳಿಂದ ಸತ್ಕರಿಸಿದರು. ಆ ಬಳಿಕ ಶ್ರೀಕೃಷ್ಣನು ಯಾಗ ದೀಕ್ಷಿತನಾಗಿ ಕುಳಿತಿದ್ದ ಧರ್ಮರಾಯನನ್ನು ಉದ್ದೇಶಿಸಿ “ಹೇ ಧರ್ಮರಾಜಾ! ನಿನ್ನ ಸುಯೋಗವೆಂದು ಹೇಳಬೇಕು. ಯಾಕೆಂದರೆ, ಅತಿ ಹಿರಿಯರೂ, ಮಹಾಯೋಗಿಯೂ ಅಪ್ರತಿಮ ವ್ಯಕ್ತಿತ್ವದವರೂ ಆದ ಬಕದಾಲ್ಭ್ಯರು, ಪರಮ ಋಷಿಗಳಾಗಿರುವ ಭಗವಾನ್ ವೇದವ್ಯಾಸರು, ನಮ್ಮ ಪುರೋಹಿತರಾದ ಮಹಾತ್ಮರು ಮಹರ್ಷಿ ಧೌಮ್ಯರು, ಜೊತೆಗೆ ಪರಮ ತಪಸ್ವಿ, ಮಹಿಮಾನ್ವಿತ, ಮಹಾನ್ ಸಾಧಕ ಅಸಂಖ್ಯ ಋಷಿವರೇಣ್ಯರು ನಮ್ಮ ಜೊತೆಯಲ್ಲಿದ್ದಾರೆ. ರಾಜ ಮಹಾರಾಜರು, ವೀರಾಗ್ರಣಿಗಳು, ಮಿತ್ರ ರಾಜರು ಅನುಕೂಲರಾಗಿದ್ದಾರೆ, ಪುರ ಜನರು, ರಾಜ ಪರಿವಾರವೆಲ್ಲರೂ ಬಂದು ಸೇರಿದ್ದಾರೆ. ಸಕಲ ವ್ಯವಸ್ಥೆಗಳು, ಯಾಗ ಸಿದ್ಧತೆಗಳು ಆಗಿರುವಾಗ ಇನ್ನು ಅಶ್ವಮೇಧ ಯಾಗವನ್ನು ಪೂರೈಸುವಲ್ಲಿ ಸನ್ನದ್ಧನಾಗು.” ಎಂದು ಸೂಚನೆ ನೀಡಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page