ಭಾಗ – 620
ಭರತೇಶ್ ಶೆಟ್ಟಿ, ಎಕ್ಕಾರು

“ನಿಮ್ಮ ಸಾಧನೆ, ಜ್ಞಾನ ವಿಶೇಷ ಅತುಲ್ಯವಾದುದು. ಪರಮೋಚ್ಚ ಗುರುವಿನಂತೆ ನೀವಿತ್ತ ಜ್ಞಾನಮೃತವನ್ನು ಸವಿಯುವ ಭಾಗ್ಯ ದೊರೆತ ಶಿಷ್ಯನಾದ ನನಗಿದು ಮಹಾಯೋಗವೂ ಮಹಾ ಸೌಭಾಗ್ಯವೂ ಆಗಿದೆ. ಗುರುಗಳೇ, ನನಗೇನೂ ಮಹತ್ತರವಾದುದು ತಿಳಿದಿದ್ದರೂ ನಿಮ್ಮದ್ದಾದ ಜ್ಞಾನಸಾಗರದೆದುರು ನನ್ನ ತಿಳುವಳಿಕೆ ಅತ್ಯಲ್ಪವಾದುದು ಎಂದು ಸ್ಪಷ್ಟವಾಗಿ ತಿಳಿದವನಿದ್ದೇನೆ. ನಮ್ಮ ಜೀವನದಲ್ಲಿ ಎಲ್ಲವೂ ನಡೆದು ಹೋಯಿತು, ನಾವು ಕೇವಲ ಕಾಲದ ಕೈಗೊಂಬೆಗಳಾಗಿ ಸಮಯಕ್ಕೆ ತಲೆಬಾಗುತ್ತಾ ಬದುಕಿದವರಿದ್ದೇವೆ. ಆದರೆ ಈ ರೀತಿಯ ಬದುಕು ಸಾಗುವಲ್ಲಿ ನಮ್ಮಿಂದಲೂ ಅಗಣಿತ ಅಪರಾಧಗಳಾಗಿರಬಹುದು. ಮಾತ್ರವಲ್ಲ ಸಹಸ್ರಾರು ದೋಷಗಳೂ ಆಗಿರಬಹುದು. ಪರಮ ಪೂಜ್ಯರೂ ಕ್ಷಮಾನಿಧಿಯೂ ಆಗಿರುವ ತಮ್ಮ ಚರಣಾವಿಂದಗಳಲ್ಲಿ ಅರಿಯದೆ ನಮ್ಮಿಂದ ಆಗಿರಬಹುದಾದ ಸರ್ವಾಪರಾಧಗಳಿಗೂ ಕ್ಷಮಾಪಣೆ ಬೇಡುತ್ತಾ ನಮ್ಮ ಬಿನ್ನಹವೊಂದನ್ನು ನಡೆಸಿಕೊಡಬೇಕೆಂದು ಪ್ರಾರ್ಥಿಸಿಕೊಳ್ಳುತ್ತೇನೆ. ಗುರುವರ್ಯಾ! ಗೃಹಸ್ಥರಾಗಿ ಜೀವನ ಸಾಗಿಸುವ ನಾವು ನಿಮ್ಮ ಹಾಗೆ ತಪಸ್ಸನ್ನು ವಿರಚಿಸಿ ಸಾಧನೆ ಮಾಡಲಾಗದು, ಮಾಡಲಾರೆವು. ಹೀಗಿರುವಾಗ ನಮಗುಳಿದ ಮಾರ್ಗವೆಂದರೆ ಯಾಗ – ಯಜ್ಞಾದಿಗಳನ್ನು ಮಾಡಿಯಾದರೂ ನಮ್ಮ ದೋಷ, ಪಾಪ ನಿವಾರಣೆ ಮಾಡಿಸುವ ಪ್ರಯತ್ನ ಮಾಡಬೇಕಾಗುತ್ತದೆ. ನಮ್ಮ ಬದುಕು ಕುರುಕ್ಷೇತ್ರದ ಮಹಾಸಂಗ್ರಾಮ ಕಾದಾಡುವಂತೆ ಮಾಡಿತು. ಕ್ಷಾತ್ರಧರ್ಮದಂತೆ ಕ್ಷತ್ರಿಯರಾದ ನಾವು ಯುದ್ಧಕರ್ಮಿಗಳು ಆಗಬೇಕಾಯಿತು. ಪರಿಣಾಮ ಬಂಧು, ಬಾಂಧವರು, ಆಚಾರ್ಯರು, ಗುರುಗಳೆಲ್ಲರನ್ನೂ ರಣಕ್ಷೇತ್ರದಲ್ಲಿ ವಧಿಸಬೇಕಾಯಿತು. ತತ್ಪರಿಣಾಮ ಬಂಧುಹತ್ಯಾ ದೋಷಕ್ಕೆ ನಾವು ಗುರಿಯಾಗಿದ್ದೇವೆ ಎಂಬ ಕೊರಗು ಧರ್ಮಾತ್ಮನಾದ ನನ್ನ ಅಗ್ರಜ ಧರ್ಮರಾಜನದ್ದಾಯಿತು. ಇದನ್ನರಿತು ಶ್ರೀಕೃಷ್ಣ ಪರಮಾತ್ಮನ ನಿರ್ದೇಶನದಂತೆ ನಾವು ಅಶ್ವಮೇಧ ಯಾಗ ಆರಂಭಿಸಿ ದಿಗ್ವಿಜಯ ಯಾತ್ರೆ ನಡೆಸುತ್ತಾ ಬರುವಾಗ ಯಾಗಾಶ್ವಗಳು ನಿಮ್ಮಲ್ಲಿಗೆ ಬಂದ ಕಾರಣ ನಮಗೆ ನಿಮ್ಮ ಸಂದರ್ಶನ ಭಾಗ್ಯ ಪ್ರಾಪ್ತವಾಯಿತು. ಪೂಜನೀಯರೇ, ತಾವು ಕೃಪೆದೋರಿ ಶ್ರೀಕೃಷ್ಣನ ಅನುಜ್ಞೆಯಂತೆ ಯಾಗ ದೀಕ್ಷಿತನಾಗಿ ನಮ್ಮಣ್ಣ ಆಚರಿಸುತ್ತಿರುವ ಯಾಗಕ್ಕೆ ಅಲ್ಲಿಯವರೆಗೆ ಬಂದು, ಎಲ್ಲರಿಗೂ ತಮ್ಮ ದರುಶನ ಕೊಟ್ಟು, ಸೂಕ್ತ ನಿರ್ದೇಶನವಿತ್ತು ಯಜ್ಞ ಕಾರ್ಯವನ್ನು ಸಾರ್ಥಕಗೊಳಿಸಿ ನಮ್ಮನ್ನು ಕೃತಾರ್ಥರನ್ನಾಗಿಸಬೇಕು. ಕರುಣಾಳುಗಳಾದ ತಾವು ನಮ್ಮೆಲ್ಲರ ಮೇಲೆ ಕೃಪೆದೋರಿ ಅನುಗ್ರಹಿಸಬೇಕೆಂಬುದು ಬೇಡಿಕೆ” ಎಂದು ಪಾದಮೂಲಕ್ಕೆರಗಿದನು.
ಮಹರ್ಷಿ ಬಕದಾಲ್ಭ್ಯರು ಅರ್ಜುನನನ್ನು ಹಿಡಿದೆತ್ತಿ “ಅರ್ಜುನಾ! ನಾನು ಯಾವ ಅಪೇಕ್ಷೆಯನ್ನೂ ಹೊಂದಿಲ್ಲ. ನನಲ್ಲಿ ಯಾವ ಗರ್ವ ಭಾವವೂ ಉಳಿದಿಲ್ಲ. ಸಾಕ್ಷಾತ್ ವಾಸುದೇವನು ನಿಮ್ಮ ಜೊತೆಗಿದ್ದು ಪ್ರತ್ಯಕ್ಷನಾಗಿ ಯಾಗವನ್ನು ಮುನ್ನಡೆಸುತ್ತಿರುವಾಗ ಸಾರ್ಥಕತೆಯ ಗೊಂದಲ ಯಾಕಾಗಿ ನಿನ್ನ ಮನವನ್ನಾವರಿಸಿತೋ ನಾನರಿಯೆ! ದಯವಿಟ್ಟು ನನ್ನನ್ನು ಈ ಕಾರ್ಯಕ್ಕೆ ಕರೆದು ಮತ್ತೆ ನನ್ನಲ್ಲಿ ಆಶಾಭಾವವಾಗಲಿ, ಗರ್ವವಾಗಲಿ ಜಾಗೃತವಾಗುವಂತೆ ಮಾಡದಿರು. ಆ ಎರಡೂ ನನಗೆ ಅಂಟಬಾರದು ಎಂಬ ವಿರಕ್ತಿಯಿಂದ ಎಲ್ಲವನ್ನೂ ತೊರೆದು ಆಕಾಶ ತತ್ವವನ್ನು ಅವಲಂಬಿಸಿ ತಪೋನಿರತನಾಗಿರುವುದು. ನನಗೆ ಅನ್ಯಥಾ ಯಾವ ಭಾವವೂ, ಆಶಯವೂ, ಆಸೆಯೂ ಉಳಿದಿಲ್ಲ. ಈ ಭಾವಕ್ಕೆ ಪೂರಕವಾಗಿ ನಿನಗೊಂದು ಮಹತ್ತರವಾದ ವಿಚಾರವನ್ನು ತಿಳಿಸುವೆ. ಹಿಂದೊಮ್ಮೆ ಸೃಷ್ಟಿಕರ್ತನಾದ ಚತುರ್ಮುಖ ಬ್ರಹ್ಮದೇವ ಆತನ ನಲ್ವತ್ತನೇ ವಯಸ್ಸಿನಲ್ಲಿ ಶಾರದೆಯ ಜೊತೆಯಲ್ಲಿ ಹಂಸವಾಹನನಾಗಿ ಇಲ್ಲಿಗೆ ಬಂದಿದ್ದನು.
ಮುಂದುವರಿಯುವುದು…



















































































