
ಬೆಂಗಳೂರು: ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಅವಧಿ ಮೀರಿದ ಔಷಧಗಳನ್ನು ರೋಗಿಗಳಿಗೆ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಡಾ. ಕೆ. ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇತ್ತೀಚೆಗೆ ₹5 ಕೋಟಿ ಮೌಲ್ಯದ ನಕಲಿ ಔಷಧ ಜಾಲ ಪತ್ತೆಯಾಗಿದ್ದು, ಔಷಧಗಳು ಎಲ್ಲೆಲ್ಲಿ ಪೂರೈಕೆಯಾಗಿವೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಗೃಹ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಎಸ್‌ಐಟಿ ಮೂಲಕ ತನಿಖೆ ನಡೆಸುತ್ತಿದೆ ಎಂದು ಹೇಳಿದರು.
ಜನೌಷಧಿ ಕೇಂದ್ರಗಳು, ಔಷಧ ಮಾರಾಟಗಾರರು ಹಾಗೂ ಆಸ್ಪತ್ರೆಗಳು ಔಷಧಗಳ ಗುಣಮಟ್ಟ ಮತ್ತು ಅವಧಿ ಪರಿಶೀಲಿಸಿಯೇ ರೋಗಿಗಳಿಗೆ ನೀಡಬೇಕು ಎಂದು ಸೂಚಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಪಾಡಲು ಕೂಡ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ಖಾದರ್ ತಿಳಿಸಿದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.80ರಷ್ಟು ಜನರಿಗೆ ಚಿಕಿತ್ಸೆ ದೊರೆಯುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದ ಹಲವು ಮೂಲಸೌಕರ್ಯಗಳೂ ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವುದರಿಂದ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದರು.



















































































