30.2 C
Udupi
Wednesday, October 28, 2026
spot_img
spot_img
HomeBlogಕರ್ನಾಟಕದಲ್ಲಿ ಅಕ್ಕಿ ಬೆಲೆ ಏರಿಕೆ: ಕೆಜಿಗೆ ₹ 100 ದಾಟುವ ಸಾಧ್ಯತೆ!

ಕರ್ನಾಟಕದಲ್ಲಿ ಅಕ್ಕಿ ಬೆಲೆ ಏರಿಕೆ: ಕೆಜಿಗೆ ₹ 100 ದಾಟುವ ಸಾಧ್ಯತೆ!

ಬೆಂಗಳೂರು: ಕರ್ನಾಟಕದಲ್ಲಿ ಅಕ್ಕಿ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕೆಲವು ತಳಿಗಳ ದರ ಶೀಘ್ರದಲ್ಲೇ ಕೆಜಿಗೆ ₹ 100 ದಾಟುವ ಸಾಧ್ಯತೆಯಿದೆ. ಮುಂಗಾರು ಮಳೆ ಕೊರತೆ, ಭತ್ತದ ಬೆಳೆಗೆ ನೀರು ತಡವಾಗಿ ಬಿಡುಗಡೆ ಹಾಗೂ ಪೂರೈಕೆ ಕುಸಿತ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಹೆಚ್ಚು ಬಳಕೆಯಲ್ಲಿರುವ ಸೋನಾ ಮಸೂರಿ ಅಕ್ಕಿಯ ಬೆಲೆ ಎರಡು ತಿಂಗಳಲ್ಲಿ ಕೆಜಿಗೆ ₹ 20 ಹೆಚ್ಚಾಗಿದೆ. ಪ್ರಸ್ತುತ ಹಳೆಯ ಸೋನಾ ಮಸೂರಿ ₹ 82ರಿಂದ ₹ 98ಕ್ಕೆ, ಜೀರಿಗೆ ಅಕ್ಕಿ ₹ 90ರಿಂದ ₹ 115ಕ್ಕೆ ಹಾಗೂ ಬುಲೆಟ್ ಅಕ್ಕಿ ಸುಮಾರು ₹ 95ಕ್ಕೆ ಮಾರಾಟವಾಗುತ್ತಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ಅಂಕಿಅಂಶಗಳ ಪ್ರಕಾರ, ಕಳೆದ ನಾಲ್ಕು ತಿಂಗಳಲ್ಲಿ ಅಕ್ಕಿ ಬೆಲೆ ಏರಿಕೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಜೂನ್‌ನಲ್ಲಿ ಕೆಜಿಗೆ ₹ 52.11 ಇದ್ದ ಸರಾಸರಿ ಬೆಲೆ ಅಕ್ಟೋಬರ್‌ನಲ್ಲಿ ₹ 67.86ಕ್ಕೆ ಏರಿಕೆಯಾಗಿದ್ದು, ಸುಮಾರು ಶೇ. 30ರಷ್ಟು ಹೆಚ್ಚಳವಾಗಿದೆ.

ಕೃಷಿ ಇಲಾಖೆಯ ಮೂಲಗಳ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾರುಕಟ್ಟೆಗಳಲ್ಲಿ ಭತ್ತದ ಆವಕ ಶೇ. 10ರಿಂದ 40ರಷ್ಟು ಕಡಿಮೆಯಾಗಿದೆ. ಮುಂಗಾರು ಹಂಗಾಮಿನಲ್ಲಿ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದರೂ, ಕೇವಲ 4.87 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಭತ್ತ ಬೆಳೆಯಲಾಗಿದೆ.

ಕಳೆದ ವರ್ಷ 75 ಕೆ.ಜಿ. ಭತ್ತದ ಚೀಲಕ್ಕೆ ₹ 1,800ರಿಂದ ₹ 2,700 ಇದ್ದ ಬೆಲೆ ಈ ಬಾರಿ ₹ 3,400ರಿಂದ ₹ 4,000ಕ್ಕೆ ತಲುಪಿದೆ. ರಾಜ್ಯದಲ್ಲಿ ಭತ್ತದ ಕೊರತೆ ಎದುರಾಗಿದ್ದು, ಎರಡು ತಿಂಗಳಲ್ಲಿ ಪ್ರತಿ ಕ್ವಿಂಟಾಲ್‌ಗೆ ₹ 2,000ರಷ್ಟು ಬೆಲೆ ಏರಿಕೆಯಾಗಿರುವುದು ಅಪರೂಪ ಎಂದು ಕರ್ನಾಟಕ ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಕಾರ್ಯನಿರ್ವಾಹಕ ಅಧ್ಯಕ್ಷೆ ಸಾವಿತ್ರಿ ಪುರುಷೋತ್ತಮ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ತುಂಗಭದ್ರಾ ನೀರನ್ನು ಎರಡನೇ ಬೆಳೆಗೆ ಬಿಡುಗಡೆ ಮಾಡದಿರುವುದರಿಂದ ಭತ್ತದ ಉತ್ಪಾದನೆ ಮತ್ತಷ್ಟು ಕುಸಿಯುವ ಆತಂಕವಿದೆ. ಇದರಿಂದ ಅಕ್ಕಿಯ ಬೆಲೆ ಕ್ವಿಂಟಾಲ್‌ಗೆ ₹ 10,000 ದಾಟಬಹುದು ಎಂದು ಸಾವಿತ್ರಿ ಅಭಿಪ್ರಾಯಪಟ್ಟಿದ್ದಾರೆ. ಕೊಪ್ಪಳ ಭಾಗದಲ್ಲಿ ನೀರು ತಡವಾಗಿ ಬಂದಿರುವುದರಿಂದ ಭತ್ತದ ಇಳುವರಿ ಶೇ. 10ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.

ರೈತರಿಗೆ ಬೆಲೆ ಏರಿಕೆಯ ಲಾಭ ಸೀಮಿತ

ಅಕ್ಕಿ ಬೆಲೆ ಏರಿದ್ದರೂ ರೈತರಿಗೆ ಅದರ ಸಂಪೂರ್ಣ ಲಾಭ ಸಿಕ್ಕಿಲ್ಲ. ಗಂಗಾವತಿಯ ರೈತ ವಿಜಯ್ ಅವರ ಪ್ರಕಾರ, ಕೆಲವರು ಕ್ವಿಂಟಾಲ್‌ಗೆ ₹ 3,300 ಪಡೆದರೆ, ಬಹುತೇಕ ರೈತರು ಸರಾಸರಿ ₹ 2,600ಕ್ಕೆ ಭತ್ತ ಮಾರಾಟ ಮಾಡಿದ್ದಾರೆ.

ರಫ್ತು ಬೇಡಿಕೆ ಹೆಚ್ಚಳ; ದಾಸ್ತಾನು ಆರೋಪ ನಿರಾಕರಣೆ

ಭತ್ತವನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗುತ್ತಿದೆ ಎಂಬ ಆರೋಪವನ್ನು ಸಾವಿತ್ರಿ ಪುರುಷೋತ್ತಮ್ ತಳ್ಳಿಹಾಕಿದ್ದಾರೆ. ದೇಶಾದ್ಯಂತ ಭತ್ತದ ಪೂರೈಕೆ ಸಮಸ್ಯೆಯಿದೆ ಎಂದು ಅವರು ತಿಳಿಸಿದ್ದಾರೆ. ಕೊಲ್ಲಿ ರಾಷ್ಟ್ರಗಳು, ಸಿಂಗಾಪುರ ಹಾಗೂ ಆಫ್ರಿಕಾದ ಕೆಲವು ದೇಶಗಳಿಂದ ಭಾರತೀಯ ಅಕ್ಕಿಗೆ ಬೇಡಿಕೆ ಹೆಚ್ಚಿದ್ದು, ಹಳೆಯ ಅಕ್ಕಿಯ ದಾಸ್ತಾನು ಬಹುತೇಕ ಖಾಲಿಯಾಗಿದೆ ಎಂದು ರಾಯಚೂರಿನ ವ್ಯಾಪಾರಿಯೊಬ್ಬರು ಹೇಳಿದ್ದಾರೆ.

ದೇಶದಲ್ಲಿ ಅಕ್ಕಿ ಕೊರತೆಯಿಲ್ಲ: ಪ್ರಲ್ಹಾದ್ ಜೋಶಿ.

ಅಕ್ಕಿ ಬೆಲೆ ಏರಿಕೆಯ ನಡುವೆಯೂ ದೇಶದಲ್ಲಿ ಸಾಕಷ್ಟು ದಾಸ್ತಾನು ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಭಾರತೀಯ ಆಹಾರ ನಿಗಮವು ಮುಂದಿನ 18ರಿಂದ 20 ತಿಂಗಳ ಅಗತ್ಯಕ್ಕೆ ಸಾಕಾಗುವಷ್ಟು ಅಕ್ಕಿ ಸಂಗ್ರಹಿಸಿದೆ. ಅಗತ್ಯವಿದ್ದರೆ ರಾಜ್ಯಗಳಿಗೆ ರಿಯಾಯಿತಿ ದರದಲ್ಲಿ ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರ ಸಿದ್ಧವಿದೆ ಎಂದಿದ್ದಾರೆ.

ಭಾರತ ಸೇರಿದಂತೆ ಹಲವು ಅಕ್ಕಿ ಉತ್ಪಾದಕ ದೇಶಗಳಲ್ಲಿ ಬರ ಪರಿಸ್ಥಿತಿ ಉಂಟಾಗಿರುವುದರಿಂದ ಜಾಗತಿಕ ಬೇಡಿಕೆ ಹೆಚ್ಚಿದೆ. ಬೆಲೆ ಏರಿಕೆಗೆ ರಫ್ತು ಮಾತ್ರ ಕಾರಣವಲ್ಲ ಎಂದು ತಿಳಿಸಿರುವ ಜೋಶಿ, ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page