
ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಇಲ್ಲಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಮತ್ತು ವಾರ್ಷಿಕ ಪ್ರತಿಭಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮವು ಅ 28 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಂಶುಪಾಲರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಪ್ರೊ. ಶ್ರೀವರ್ಮ ಅಜ್ರಿ ಎಂ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಜೀವನದಲ್ಲಿ ಸಿಗುವ ಕೆಲಸದಲ್ಲಿ ತಾರತಮ್ಯವನ್ನು ಮಾಡದೆ. ಮಾಡುವ ಕಾರ್ಯವನ್ನು ಆಸಕ್ತಿ, ಶ್ರದ್ಧೆ ಮತ್ತು ಸೃಜನಾತ್ಮಕವಾಗಿ ಮಾಡಬೇಕು. ಸ್ಪರ್ಧಾತ್ಮಕ ಈ ಯುಗದಲ್ಲಿ ಮುಂದುವರಿಯಲು ಪ್ರತಿಯೊಂದು ಕೆಲಸದಲ್ಲಿಯೂ ಸೃಜನಶೀಲರಾಗಿರುವುದು ಬಹಳಾ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಜ್ಯೋತಿ ಲಕ್ಷ್ಮಣ ರಾವ್ ಜನ್ನೆ ನೆರವೇರಿಸಿದರು. ಕಾಲೇಜಿನ ವಾರ್ಷಿಕಾಂಕ ‘ವಿಕಸನ’ ಮತ್ತು ಕಾಲೇಜಿನ ಅರೆವಾರ್ಷಿಕ ‘ಎಂಪಿಎಂ ದರ್ಪಣ’ವನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜಯಭಾರತಿ ಎ (ಅತ್ಯುತ್ತಮ ದೈಹಿಕ ಶಿಕ್ಷಣ ಶಿಕ್ಷಕಿ ಪುರಸ್ಕೃತರು) ಹಾಗೂ ಕಾಲೇಜಿಗೆ ಕಂಪ್ಯೂಟರ್ಗಳನ್ನು ನೀಡಿರುವ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸ್ನೇಹಾ ಬಲ್ಲಾಳ್ ಇವರನ್ನು ಸಮ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ರೈ. ಕೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅವಿನಾಶ್ ಜಿ ಶೆಟ್ಟಿ ಕಾಲೇಜಿನ ಸಾಂಸ್ಕೃತಿಕ ಸಂಘದ ಸಂಚಾಲಕರಾದ ಸೌಮ್ಯ ಹೆಚ್ ಕೆ, ಐಕ್ಯುಎಸಿ ಸಂಚಾಲಕರಾದ ವಿನಯ್ ಎಂ ಎಸ್ ಹಾಗೂ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಂತಿಮ ಎಂ. ಕಾಂ ವಿದ್ಯಾರ್ಥಿನಿ ಶ್ರುತಿ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಚಂದ್ರಾವತಿ ಅತಿಥಿಗಳನ್ನು ಸ್ವಾಗತಿಸಿ, ಸಾಂಸ್ಕೃತಿಕ ಸಂಘದ ಸಂಯೋಜಕರಾದ ಡಾ. ಸುಬ್ರಹ್ಮಣ್ಯ ವಂದಿಸಿದರು.
























