ದಶಮಾನೋತ್ಸವದ ಹೊಸ್ತಿಲಲ್ಲಿ ‘ಪಾಂಡ್ಯನಗರಿ ಫ್ರೆಂಡ್ಸ್’

ಕಾರ್ಕಳ: ಸಮಾಜಮುಖಿ ಕಾರ್ಯಗಳು ಹಾಗೂ ನಿಸ್ವಾರ್ಥ ಸೇವೆಯ ಮೂಲಕ ಗುರುತಿಸಿಕೊಂಡಿರುವ ಕಾರ್ಕಳದ ‘ಪಾಂಡ್ಯನಗರಿ ಫ್ರೆಂಡ್ಸ್ ಜೋಡುರಸ್ತೆ’ ತಂಡವು 9 ವರ್ಷಗಳ ಸೇವೆಯನ್ನು ಯಶಸ್ವಿಯಾಗಿ ಪೂರೈಸಿ 10ನೇ ವರ್ಷಕ್ಕೆ ಕಾಲಿಡುತ್ತಿದೆ. ಯುವಕರೇ ಒಗ್ಗೂಡಿ ಕಟ್ಟಿಕೊಂಡಿರುವ ಈ ಬಳಗ ಧಾರ್ಮಿಕ, ಸಾಮಾಜಿಕ ಹಾಗೂ ನೈರ್ಮಲ್ಯ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ.
ಜೋಡುರಸ್ತೆಯ ಶ್ರೀ ಸಾರ್ವಜನಿಕ ಗಣೇಶೋತ್ಸವದ 5ನೇ ದಿನದ ಶೋಭಾಯಾತ್ರೆಯಲ್ಲಿ ಪ್ರತಿವರ್ಷ 1700ಕ್ಕೂ ಅಧಿಕ ಭಕ್ತರಿಗೆ ಫಲಾಹಾರ ಹಾಗೂ ಪಾನೀಯ ವಿತರಿಸುವ ಸೇವೆಯನ್ನು ತಂಡ ಮಾಡುತ್ತಿದೆ. ಕಾರ್ಯಕ್ರಮ ಮುಗಿದ ಬಳಿಕ ಸ್ಥಳವನ್ನು ಸ್ವತಃ ಸ್ವಚ್ಛಗೊಳಿಸುವ ಮೂಲಕ ಪರಿಸರ ಕಾಳಜಿಯನ್ನೂ ತೋರುತ್ತಿದೆ.
50ಕ್ಕೂ ಹೆಚ್ಚು ಸಕ್ರಿಯ ಸದಸ್ಯರನ್ನು ಹೊಂದಿರುವ ತಂಡವು ವೃದ್ಧಾಶ್ರಮಗಳಿಗೆ ಭೇಟಿ, ವಿಶೇಷ ಚೇತನ ಮಕ್ಕಳಿಗೆ ಆರ್ಥಿಕ ನೆರವು, ಬ್ಯಾರಿಯರ್ ಗೇಟ್ ನಿರ್ಮಾಣ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ. ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿದೆ.
ಕಾರ್ಕಳ ದಸರಾ ಎಂದೇ ಪ್ರಸಿದ್ಧವಾಗಿರುವ ಬಂಗ್ಲೆಗುಡ್ಡೆ ಶಾರದಾ ಉತ್ಸವದ ಶೋಭಾಯಾತ್ರೆಯಲ್ಲೂ ಬಳಗ ಸೇವೆ ಸಲ್ಲಿಸುತ್ತಿದೆ. ಪರಿಸರ ದಿನಾಚರಣೆ, ರಕ್ತದಾನ ಶಿಬಿರ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ತುರ್ತು ನೆರವು ನೀಡುವ ಕಾರ್ಯಗಳನ್ನೂ ಕೈಗೊಂಡಿದೆ.
ಇದೀಗ ದಶಮಾನೋತ್ಸವದ ಸಂಭ್ರಮದಲ್ಲಿರುವ ‘ಪಾಂಡ್ಯನಗರಿ ಫ್ರೆಂಡ್ಸ್’ ತಂಡವು 10ನೇ ವರ್ಷದಲ್ಲಿ ಮತ್ತಷ್ಟು ವಿಭಿನ್ನ ಹಾಗೂ ಅರ್ಥಪೂರ್ಣ ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ.































































































































