
ನವದೆಹಲಿ: ಬಿಹಾರದ ಜಮುಯಿ ಜಿಲ್ಲೆಯಲ್ಲಿ ಕೋಚಿಂಗ್ ಸೆಂಟರ್‌ನಿಂದ ಮನೆಗೆ ತೆರಳುತ್ತಿದ್ದ ಅಪ್ರಾಪ್ತ ಜೋಡಿಯನ್ನು ದುಷ್ಕರ್ಮಿಗಳ ಗುಂಪೊಂದು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸೆಪ್ಟೆಂಬರ್ 19ರ ಸಂಜೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಡಿಯೋದಲ್ಲಿರುವ ವಾಹನದ ನೋಂದಣಿ ಸಂಖ್ಯೆಯ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದ್ದು, ಸುಮಾರು ಏಳು ಮಂದಿಯನ್ನು ಗುರುತಿಸಲಾಗಿದೆ ಎಂದು ಜಮುಯಿ ಎಸ್ಪಿ ಬಿಶ್ವಜೀತ್ ದಯಾಳ್ ಹೇಳಿದ್ದಾರೆ.
ಘಟನೆ ನಡೆದ ಎರಡು ದಿನಗಳವರೆಗೆ ಸಂತ್ರಸ್ತರಿಂದ ಯಾವುದೇ ದೂರು ಬಂದಿರಲಿಲ್ಲ. ಆದರೆ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಸಂತ್ರಸ್ತರನ್ನು ಪತ್ತೆಹಚ್ಚಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರುತಿಸಲಾದ ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಘಟನೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, “ಇದು ತೀವ್ರ ಮನ ಕಲಕುವ ಘಟನೆ. ಇದು ಸಂಸ್ಕೃತಿಯಲ್ಲ, ಇದು ಪಿತೃಪ್ರಭುತ್ವ” ಎಂದು ಟೀಕಿಸಿದ್ದು, ಅಂತಹ ವರ್ತನೆಗಳನ್ನು “ಸಾಮಾನ್ಯೀಕರಿಸಲು” “ಆಂಧಭಕ್ತರು” ಕಾರಣ ಮತ್ತು ಇದಕ್ಕೆ ಅಂಧಭಕ್ತರೇ ಹೊಣೆ ಎಂದು ಆರೋಪಿಸಿದ್ದಾರೆ.
ವಿಡಿಯೋದಲ್ಲಿ ಗುರುತಿಸಲಾದ ವ್ಯಕ್ತಿಗಳ ವಿರುದ್ಧ “POCSO ಅಡಿಯಲ್ಲಿ ಮೊಕದ್ದಮೆ ಹೂಡಬೇಕು” ಎಂದು ಕಾಂಗ್ರೆಸ್ ನಾಯಕ ಆಗ್ರಹಿಸಿದ್ದು, “ರಸ್ತೆಯಲ್ಲಿ ಒಬ್ಬ ಹುಡುಗಿ ಏಕೆ ಸುರಕ್ಷಿತವಾಗಿಲ್ಲ” ಎಂದು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಆಮ್ ಆದ್ಮಿ ಪಕ್ಷವೂ ಘಟನೆಯ ವಿಡಿಯೋವನ್ನು ತನ್ನ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ.































































































































