
ನವದೆಹಲಿ: ಯೂಟ್ಯೂಬ್ ಮೂಲಕ ಹಣ ಸಂಪಾದಿಸಲು ಬಯಸುವ ಹೊಸ ಕಂಟೆಂಟ್ ಕ್ರಿಯೇಟರ್‌ಗಳಿಗೆ ಕಂಪನಿ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. 2027ರ ಫೆಬ್ರವರಿ 1ರಿಂದ ಯೂಟ್ಯೂಬ್ ಪಾಲುದಾರಿಕೆ ಕಾರ್ಯಕ್ರಮ (YPP)ದ ಮಾನಿಟೈಸೇಶನ್ ಮಾನದಂಡಗಳು ಮತ್ತಷ್ಟು ಕಠಿಣವಾಗಲಿವೆ.
ಹೊಸ ನಿಯಮದಂತೆ, ಮಾನಿಟೈಸೇಶನ್ ಪಡೆಯಲು 1,000 ಸಬ್ಸ್ಕ್ರೈಬರ್‌ಗಳ ಜತೆಗೆ ಕಳೆದ 12 ತಿಂಗಳಲ್ಲಿ 8,000 ಗಂಟೆಗಳ ವಾಚ್‌ಟೈಮ್ ಅಥವಾ 90 ದಿನಗಳಲ್ಲಿ 2 ಕೋಟಿ ಶಾರ್ಟ್ಸ್ ವೀಕ್ಷಣೆಗಳು ಅಗತ್ಯವಿರಲಿದೆ. ಈಗಾಗಲೇ YPP ಮೂಲಕ ಆದಾಯ ಗಳಿಸುತ್ತಿರುವ ಕ್ರಿಯೇಟರ್‌ಗಳಿಗೆ ಈ ಬದಲಾವಣೆ ಅನ್ವಯಿಸುವುದಿಲ್ಲ.
ಇನ್ನು ಶಾರ್ಟ್ಸ್ ಮೂಲಕ ನಿರಂತರ ಆದಾಯ ಪಡೆಯಲು ಪ್ರತಿ 90 ದಿನಗಳ ಅವಧಿಯಲ್ಲಿ ಕನಿಷ್ಠ 1 ಕೋಟಿ ವೀಕ್ಷಣೆಗಳನ್ನು ಕಾಯ್ದುಕೊಳ್ಳಬೇಕಾಗುತ್ತದೆ. ವೀಕ್ಷಣೆಗಳು ನಿಗದಿತ ಮಿತಿಗಿಂತ ಕಡಿಮೆಯಾದರೆ ಶಾರ್ಟ್ಸ್ ಆದಾಯ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಮತ್ತೆ 1 ಕೋಟಿ ವೀಕ್ಷಣೆ ತಲುಪಿದ ಬಳಿಕ ಆದಾಯ ಮರುಸ್ಥಾಪನೆಯಾಗಲಿದೆ. ಲಾಂಗ್‌ಫಾರ್ಮ್ ವಿಡಿಯೋಗಳ ಆದಾಯಕ್ಕೆ ಇದರಿಂದ ಯಾವುದೇ ಪರಿಣಾಮ ಇರುವುದಿಲ್ಲ.
ಯೂಟ್ಯೂಬ್‌ನಲ್ಲಿ ಶಾರ್ಟ್ಸ್‌ಗಳ ಜನಪ್ರಿಯತೆ ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ. ಸದ್ಯ ಪ್ರತಿದಿನ 200 ಬಿಲಿಯನ್‌ಗೂ ಅಧಿಕ ಶಾರ್ಟ್ಸ್ ವೀಕ್ಷಣೆಗಳು ದಾಖಲಾಗುತ್ತಿವೆ.
ಇದೇ ವೇಳೆ, ಯೂಟ್ಯೂಬ್ ತನ್ನ ಕಡಿಮೆ ದರದ ‘ಪ್ರೀಮಿಯಂ ಲೈಟ್’ ಚಂದಾದಾರಿಕೆಯನ್ನು ವಿಸ್ತರಿಸುವುದಾಗಿ ತಿಳಿಸಿದೆ. ಇದರಿಂದ ಬರುವ ಆದಾಯದಲ್ಲೂ ಕ್ರಿಯೇಟರ್‌ಗಳಿಗೆ ಪಾಲು ಸಿಗಲಿದ್ದು, ಲಾಂಗ್‌ಫಾರ್ಮ್ ವಿಡಿಯೋಗಳಿಗೆ ಶೇ.55 ಮತ್ತು ಶಾರ್ಟ್ಸ್‌ಗೆ ಶೇ.45ರಷ್ಟು ಆದಾಯ ಹಂಚಿಕೆ ಮಾಡಲಾಗುತ್ತದೆ.



























































