
ಮುಂಬೈ: ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಾಗೂ ಉತ್ಪಾದನೆಗೆ ಸಂಬಂಧಿಸಿದ ನಿರ್ಬಂಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ದೀಪಾವಳಿಗೆ ಪಟಾಕಿಗಳ ಚಿಲ್ಲರೆ ಮಾರಾಟ ದರದಲ್ಲಿ ಶೇ. 15ರಿಂದ 20ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ದೇಶದ ಪ್ರಮುಖ ಪಟಾಕಿ ಉತ್ಪಾದನಾ ಕೇಂದ್ರವಾದ ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿಗಳ ಸಗಟು ವ್ಯಾಪಾರ ಚುರುಕುಗೊಂಡಿದೆ. ಈ ಕುರಿತು ಮಾತನಾಡಿದ ತಮಿಳುನಾಡು ಪಟಾಕಿ ವ್ಯಾಪಾರಿಗಳ ಒಕ್ಕೂಟದ ನಾಯಕ ಎನ್. ಇಳಂಗೋವನ್, ಈಗಾಗಲೇ ಚಿಲ್ಲರೆ ದರಗಳು ಏರಿಕೆಯಾಗುತ್ತಿದ್ದು, ರಜಾದಿನಗಳ ಬಳಿಕ ಬೆಲೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಪಟಾಕಿ ತಯಾರಿಕೆಗೆ ಅಗತ್ಯವಾದ ಗಂಧಕದ ಬೆಲೆಯೂ ಏರಿಳಿತ ಕಂಡಿದೆ. ಈ ಹಿಂದೆ ಕೆ.ಜಿಗೆ 75 ರೂ. ಇದ್ದ ಗಂಧಕದ ದರ ಇತ್ತೀಚೆಗೆ 140 ರೂ.ವರೆಗೆ ತಲುಪಿತ್ತು. ಸದ್ಯ ಕೆ.ಜಿಗೆ 100 ರೂ. ಆಗಿದ್ದು, ಕಚ್ಚಾ ವಸ್ತುಗಳ ಬೆಲೆ ಏರಿಕೆಯು ಪಟಾಕಿಗಳ ಉತ್ಪಾದನಾ ವೆಚ್ಚದ ಮೇಲೂ ಪರಿಣಾಮ ಬೀರಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.






















