ಇನ್ಸ್ಪೆಕ್ಟರ್ ಧನಂಜಯ್ ಪರ ಯತೀಂದ್ರ ಬ್ಯಾಟಿಂಗ್

ಮೈಸೂರು: ಟಿ. ನರಸೀಪುರದಲ್ಲಿ ಗಣೇಶ ಚತುರ್ಥಿ ಶಾಂತಿ ಸಭೆ ವೇಳೆ ಇನ್ಸ್ಪೆಕ್ಟರ್ ಧನಂಜಯ್ ನೀಡಿದ್ದ ಎಚ್ಚರಿಕೆ ಇದೀಗ ಕಾಂಗ್ರೆಸ್-ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಮಸೀದಿ ಮುಂದೆ ಪಟಾಕಿ ಸಿಡಿಸದಂತೆ ಅವರು ನೀಡಿದ್ದ ಸೂಚನೆ ವಿವಾದಕ್ಕೆ ಕಾರಣವಾಗಿತ್ತು.
ಇದೀಗ ಧನಂಜಯ್ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದ್ದು, ಇನ್ಸ್ಪೆಕ್ಟರ್ ಯಾವುದೇ ತಪ್ಪು ಮಾಡಿಲ್ಲ, ಬದಲಾಗಿ ಬುದ್ಧಿವಾದ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಅವರ ಮಾತಿನ ಧಾಟಿ ಬದಲಾಗಿರಬಹುದು, ಆದರೆ ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ, ಮೆರವಣಿಗೆ ನಡೆಸಲು ಸ್ಥಳೀಯ ಆಡಳಿತದ ಅನುಮತಿ ಪಡೆಯಬೇಕು. ಅನುಮತಿ ಇಲ್ಲದೆ ಏನಾದರೂ ಸಮಸ್ಯೆಯಾದರೆ ಹೊಣೆ ಯಾರು ಎಂದು ಪ್ರಶ್ನಿಸಿದರು. ಧನಂಜಯ್ ಕೂಡ ಇದೇ ವಿಚಾರವನ್ನು ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಇದೇ ವೇಳೆ ಬಿಜೆಪಿ ವಿರುದ್ಧವೂ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಕೋಮುಗಲಭೆಯಿಂದ ರಾಜಕೀಯ ಲಾಭ ಪಡೆಯಲು ಬಿಜೆಪಿ ಕಾಯುತ್ತಿದೆ ಎಂದು ಆರೋಪಿಸಿದ ಅವರು ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ಅದೇ ಕೆಲಸಕ್ಕೆ ಬಂದಿದ್ದಾರೆ. ಪ್ರತಿಭಟನಾ ಮೆರವಣಿಗೆ ಸೇರಿದಂತೆ ಏನಾದರೂ ಮಾಡಲಿ ಬಿಡಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.






























































































































