
ಬೆಳಗಾವಿ: ಆಸ್ತಿ ಹಂಚಿಕೆ ವಿಚಾರದ ಜಗಳದಲ್ಲಿ ಮಾಜಿ ಯೋಧ ಹಾಗೂ ಅವರ ಪುತ್ರಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಮೃತರನ್ನು ಮಾಜಿ ಸೈನಿಕ ರುದ್ರಪ್ಪ ಕುಂದರಗಿ (67) ಹಾಗೂ ಪುತ್ರಿ ಶಶಿಕಲಾ ಕುಂದರಗಿ ಎಂದು ಗುರುತಿಸಲಾಗಿದೆ. ದಾಳಿಯಲ್ಲಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ತಿ ಹಂಚಿಕೆ ಸಂಬಂಧ ಮಾತುಕತೆ ಹಾಗೂ ದಾಖಲೆ ಪರಿಶೀಲನೆಗಾಗಿ ರುದ್ರಪ್ಪ ಮತ್ತು ಶಶಿಕಲಾ ಗ್ರಾಮ ಪಂಚಾಯಿತಿ ಕಚೇರಿಗೆ ಬಂದಿದ್ದರು ಎನ್ನಲಾಗಿದೆ. ಈ ವೇಳೆ ಕುಟುಂಬದೊಳಗಿನ ವಿವಾದ ತೀವ್ರಗೊಂಡಿದ್ದು, ರುದ್ರಪ್ಪ ಅವರ ಇಬ್ಬರು ಸಹೋದರರು ಹಾಗೂ ಸಹೋದರನ ಪುತ್ರ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಎದುರೇ ನಡೆದ ದಾಳಿಯಲ್ಲಿ ರುದ್ರಪ್ಪ ಮತ್ತು ಶಶಿಕಲಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕಿತ್ತೂರು ಠಾಣೆಯ ಸಿಪಿಐ ಶಿವಾನಂದ ಗುಡಗನಟ್ಟಿ ಹಾಗೂ ಪಿಎಸ್ಐ ಭರತ್ ಎಸ್. ಗಂಗಾಧರ ಹಂಪಣ್ಣವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.






























































































































