
ಬೆಂಗಳೂರು: ‘ಬೆಂಗಳೂರಿಗೆ ಬಂದ ಹಲವು ಶಾಸಕರು ಎರಡೆರಡು ಮದುವೆಯಾಗಿದ್ದಾರೆ. ಅಂತಹವರ ಡಜನ್‌ಗಟ್ಟಲೆ ಪಟ್ಟಿ ನನ್ನ ಬಳಿ ಇದೆ’ ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಹೇಳಿಕೆ ಇದೀಗ ಚರ್ಚೆಗೆ ಕಾರಣವಾಗಿದೆ. ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಬಂದ ಶಾಸಕರು ನಗರದಲ್ಲೇ ನೆಲೆಸಿದ್ದಾರೆ ಎಂದು ಹೇಳುವ ಸಂದರ್ಭದಲ್ಲಿ ಡಿಕೆಶಿ ಈ ಮಾತು ಆಡಿದ್ದರು.
ಸಿಎಂ ಹೇಳಿಕೆಗೆ ಬಿಜೆಪಿ ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಂತಹ ವೇದಿಕೆಯಲ್ಲಿ ಈ ರೀತಿಯ ವೈಯಕ್ತಿಕ ವಿಚಾರಗಳ ಕುರಿತು ಮಾತನಾಡುವುದು ಸದನದ ಘನತೆಗೆ ತಕ್ಕದ್ದಲ್ಲ ಎಂದು ಅವರು ಹೇಳಿದ್ದಾರೆ. ತಾವು ಸದನದಲ್ಲಿದ್ದಿದ್ದರೆ ತಕ್ಷಣವೇ ಪ್ರತಿಕ್ರಿಯಿಸುತ್ತಿದ್ದೆ ಎಂದೂ ತಿಳಿಸಿದ್ದಾರೆ.
ಈಗಾಗಲೇ ವಿಧಾನಸಭೆಯ ಚರ್ಚೆಗಳು ಹಾಗೂ ಶಾಸಕರ ಬಗ್ಗೆ ಜನರಲ್ಲಿ ಗಂಭೀರತೆ ಕಡಿಮೆಯಾಗುತ್ತಿದೆ. ಇಂತಹ ಹೇಳಿಕೆಗಳು ವಿಧಾನಮಂಡಲ ಮತ್ತು ಜನಪ್ರತಿನಿಧಿಗಳ ಗೌರವಕ್ಕೆ ಮತ್ತಷ್ಟು ಧಕ್ಕೆ ತರುತ್ತವೆ ಎಂದು ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುವ ಮುನ್ನ ನಾಯಕರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
‘ಶಾಸಕರ ಹೆಸರು ಬಹಿರಂಗಪಡಿಸಿ’
ಸಿಎಂ ಹೇಳಿಕೆಯಿಂದ ಸಾರ್ವಜನಿಕರಲ್ಲಿ ಕುತೂಹಲ ಮೂಡಿರುವುದರಿಂದ, ಎರಡೆರಡು ಮದುವೆಯಾಗಿರುವ ಅಥವಾ ಎರಡೆರಡು ಮನೆ ಹೊಂದಿರುವ ಶಾಸಕರ ಹೆಸರುಗಳನ್ನು ಬಹಿರಂಗಪಡಿಸುವಂತೆ ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ. ಹೆಸರುಗಳನ್ನು ಬಹಿರಂಗಪಡಿಸದಿದ್ದರೆ ಎಲ್ಲ ಶಾಸಕರನ್ನೂ ಜನರು ಅನುಮಾನದಿಂದ ನೋಡುವ ಅಥವಾ ಅಪಹಾಸ್ಯ ಮಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅವರು ಹೇಳಿದ್ದಾರೆ.































































































































