
ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ಉಚಿತ ಸ್ಯಾನಿಟರಿ ಪ್ಯಾಡ್ ಹಾಗೂ ಋತುಚಕ್ರ ನೈರ್ಮಲ್ಯ ನಿರ್ವಹಣಾ ವ್ಯವಸ್ಥೆ (ಎಂಎಚ್ಎಂ) ಕಲ್ಪಿಸುವುದನ್ನು ಕಡ್ಡಾಯಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಸಾಮಾಜಿಕ ಕಾರ್ಯಕರ್ತೆ ಡಾ. ಜಯಾ ಠಾಕೂರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಅನುಷ್ಠಾನದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಋತುಚಕ್ರ ನೈರ್ಮಲ್ಯವನ್ನು ಸಂವಿಧಾನದ 21ನೇ ವಿಧಿಯಡಿ ಮೂಲಭೂತ ಹಕ್ಕಾಗಿ ಪರಿಗಣಿಸಿ ಇಲಾಖೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಎಲ್ಲ ಶಾಲಾ-ಕಾಲೇಜುಗಳು ಸೂಚನೆಗಳನ್ನು ತಕ್ಷಣ ಜಾರಿಗೊಳಿಸಬೇಕು. ನಿರ್ಲಕ್ಷ್ಯ ತೋರಿದರೆ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿ ವಾಟ್ಸ್ಆ್ಯಪ್ ಗುಂಪುಗಳ ಮೂಲಕ ಸಮನ್ವಯ ಸಾಧಿಸಬೇಕು. ಜಿಲ್ಲಾ ಉಪನಿರ್ದೇಶಕರು ವಾರ್ಷಿಕ ತಪಾಸಣೆ ನಡೆಸಿ, ವಿದ್ಯಾರ್ಥಿಗಳಿಂದ ಅನಾಮಧೇಯ ಪ್ರತಿಕ್ರಿಯೆ ಪಡೆದು ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಸುತ್ತೋಲೆಯ ಪ್ರಮುಖ ಮಾರ್ಗಸೂಚಿಗಳು:
- ನಗರ ಮತ್ತು ಗ್ರಾಮೀಣ ಪ್ರದೇಶಗಳ ಎಲ್ಲ ಶಾಲೆ-ಕಾಲೇಜುಗಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ, ನೀರಿನ ಸಂಪರ್ಕ ಹೊಂದಿರುವ ಸುಸ್ಥಿತಿಯ ಶೌಚಾಲಯಗಳನ್ನು ಕಲ್ಪಿಸಬೇಕು.
- ಅಂಗವಿಕಲ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶೌಚಾಲಯ ವಿನ್ಯಾಸಗೊಳಿಸಬೇಕು. ಸಾಬೂನು ಮತ್ತು ನೀರು ಸದಾ ಲಭ್ಯವಿರಬೇಕು.
- 6ರಿಂದ 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ಎಎಸ್ಟಿಡಿಎಂ ಡಿ-6954 ಮಾನದಂಡದ ಜೈವಿಕವಾಗಿ ಕರಗುವ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಉಚಿತವಾಗಿ ವಿತರಿಸಬೇಕು.
- ಸಾಧ್ಯವಾದಲ್ಲಿ ಶೌಚಾಲಯಗಳಲ್ಲಿ ಸ್ಯಾನಿಟರಿ ಪ್ಯಾಡ್ ವಿತರಣಾ ಯಂತ್ರ ಅಳವಡಿಸಬೇಕು ಅಥವಾ ನಿಗದಿತ ಸ್ಥಳಗಳಲ್ಲಿ ವಿತರಣೆಗೆ ವ್ಯವಸ್ಥೆ ಮಾಡಬೇಕು.
- ಘನ ತ್ಯಾಜ್ಯ ನಿರ್ವಹಣಾ ನಿಯಮಗಳಂತೆ ಸ್ಯಾನಿಟರಿ ತ್ಯಾಜ್ಯ ವಿಲೇವಾರಿಗೆ ಪರಿಸರಸ್ನೇಹಿ ವ್ಯವಸ್ಥೆ ಕಲ್ಪಿಸಬೇಕು.
- ಪ್ರತಿಯೊಂದು ಶೌಚಾಲಯದಲ್ಲೂ ಮುಚ್ಚಳವಿರುವ ಕಸದ ಬುಟ್ಟಿ ಇರಿಸಿ, ನಿಯಮಿತವಾಗಿ ಸ್ವಚ್ಛಗೊಳಿಸಬೇಕು.

























































































