
ಬೆಂಗಳೂರು: ಅಸಲಿ ಔಷಧ ಮಾರಾಟದ ಏಜೆನ್ಸಿಯಲ್ಲಿ ನಷ್ಟ ಉಂಟಾದ ಬಳಿಕ ಆರೋಪಿಗಳು ನಕಲಿ ಔಷಧ ದಂಧೆ ಆರಂಭಿಸಿದ್ದರು ಎಂಬುದು ಎಸ್ಐಟಿ ತನಿಖೆಯಿಂದ ಬೆಳಕಿಗೆ ಬಂದಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ದೊಡ್ಡೇರಿ ಫಾರ್ಮ್ಹೌಸ್ನಲ್ಲಿ ಪತ್ತೆಯಾದ ನಕಲಿ ಔಷಧ ಪ್ರಕರಣದ ತನಿಖೆಯನ್ನು ಎಸ್ಐಟಿ ಮುಖ್ಯಸ್ಥ ವಂಶಿಕೃಷ್ಣ ನೇತೃತ್ವದ ತಂಡ ತೀವ್ರಗೊಳಿಸಿದೆ. ವಿವಿಧೆಡೆ ದಾಳಿ ನಡೆಸಿ ಸಾಕ್ಷ್ಯ ಹಾಗೂ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಶಿವಮೊಗ್ಗದ ಪ್ರಶಾಂತ್ ಹಾಗೂ ರಾಯಚೂರಿನ ವೆಂಕಟೇಶ್ ಪ್ರಮುಖ ಆರೋಪಿಗಳಾಗಿದ್ದು, ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಮತ್ತು ಬಾಮರಾಜಪೇಟೆಯಲ್ಲಿ ನಾಲ್ಕು ಕಂಪನಿಗಳ ಹೆಸರಿನಲ್ಲಿ ಸುಮಾರು ಎರಡು ವರ್ಷಗಳಿಂದ ನಕಲಿ ಔಷಧ ಮಾರಾಟ ಮಾಡುತ್ತಿದ್ದರು ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಇಬ್ಬರೂ ಆರಂಭದಲ್ಲಿ ಪ್ರತಿಷ್ಠಿತ ಔಷಧ ಕಂಪನಿಗಳಲ್ಲಿ ಸೇಲ್ಸ್ ಪ್ರತಿನಿಧಿಗಳಾಗಿ ಕೆಲಸ ಮಾಡಿದ್ದರು. ಬಳಿಕ ಸ್ವಂತ ಔಷಧ ಏಜೆನ್ಸಿ ಆರಂಭಿಸಿ ಅಸಲಿ ಔಷಧ ಮಾರಾಟ ನಡೆಸಿದರೂ ನಷ್ಟ ಅನುಭವಿಸಿದ್ದರು. ನಂತರ ವಿವಿಧ ಹೆಸರಿನಲ್ಲಿ ಕಂಪನಿಗಳನ್ನು ನೋಂದಣಿ ಮಾಡಿ ಜಿಎಸ್ಟಿ ಸಂಖ್ಯೆ ಪಡೆದು, ಫಾರ್ಮ್ಹೌಸ್ನಲ್ಲಿ ನಕಲಿ ಔಷಧ ತಯಾರಿ, ಪ್ಯಾಕಿಂಗ್ ಹಾಗೂ ದಾಸ್ತಾನು ಮಾಡುತ್ತಿದ್ದರು.
ಈ ಕೆಲಸಕ್ಕಾಗಿ ಕಾರ್ಮಿಕರನ್ನು ನೇಮಿಸಿಕೊಂಡಿದ್ದ ಆರೋಪಿಗಳು, ತಾವು ನಕಲಿ ಔಷಧ ದಂಧೆ ನಡೆಸುತ್ತಿರುವ ವಿಚಾರ ಅವರಿಗೆ ತಿಳಿಯದಂತೆ ಎಚ್ಚರಿಕೆ ವಹಿಸಿದ್ದರು ಎಂದು ಎಸ್ಐಟಿ ಮೂಲಗಳು ಹೇಳಿವೆ.





















































































