
ಬೆಂಗಳೂರು: ಬೆಂಗಳೂರಿನ ಬನ್ನಪ್ಪ ಪಾರ್ಕ್ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭಾಗವಹಿಸಿ ಮಾತನಾಡಿದ್ದು ಈ ವೇಳೆ ಆರ್ಎಸ್ಎಸ್ ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿದರು.
ತಿರಂಗ ಹಾಗೂ ಕೇಸರಿ ಧ್ವಜಾರೋಹಣದ ಬಳಿಕ ಮಾತನಾಡಿದ ಸಂತೋಷ್, “ಆರ್ಎಸ್ಎಸ್ಗೆ ನೋಂದಣಿ ಆಗಿರಲಿಲ್ಲ, ಮುಂದೆಯೂ ಆಗುವುದಿಲ್ಲ. ಪ್ರತಿಯೊಂದಕ್ಕೂ ನೋಂದಣಿಯೇ ಮಾನದಂಡವಲ್ಲ. ನಿಮ್ಮ ಕುಟುಂಬ ಕಲಬುರಗಿಗೆ ಬಂದಾಗ ರಜಾಕಾರರ ವಿರುದ್ಧ ನಿಂತವರು ಇದೇ ಆರ್ಎಸ್ಎಸ್ ಕಾರ್ಯಕರ್ತರು” ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದ ಕುರಿತು ಮಾತನಾಡಿದ ಅವರು, “ಉಪ್ಪಿನ ಸತ್ಯಾಗ್ರಹ ಮತ್ತು ಚರಕದಿಂದ ಮಾತ್ರ ಸ್ವಾತಂತ್ರ್ಯ ಸಿಕ್ಕಿತು ಎಂಬುದನ್ನು ಹೇಳಿಕೊಡಲಾಗಿದೆ. ಆದರೆ 35 ಲಕ್ಷಕ್ಕೂ ಹೆಚ್ಚು ಹಿಂದೂಗಳ ಬಲಿದಾನವೂ ಸ್ವಾತಂತ್ರ್ಯಕ್ಕೆ ಕಾರಣವಾಗಿದೆ” ಎಂದು ಪ್ರತಿಪಾದಿಸಿದರು.
1200 ವರ್ಷಗಳ ಕಾಲ ಖಿಲ್ಜಿ, ಕುಶಾನರು, ಅರಬರು, ಯುರೋಪಿಯನ್ನರು ಹಾಗೂ ಬ್ರಿಟಿಷರ ನಿರಂತರ ದಾಳಿಯನ್ನು ಎದುರಿಸಿ ಸಮಾಜವನ್ನು ರಕ್ಷಿಸುವಲ್ಲಿ ಹಿಂದೂ ಸಮಾಜದ ಪಾತ್ರವಿದೆ. ಆರ್ಎಸ್ಎಸ್ ಸಮಾಜದ ರಕ್ಷಣೆ ಮತ್ತು ಸೇವೆಗೆ ಬದ್ಧವಾಗಿದ್ದು, ನೋಂದಣಿಯಂತಹ ಷರತ್ತುಗಳಿಗೆ ಅದನ್ನು ಸೀಮಿತಗೊಳಿಸಲು ಸಾಧ್ಯವಿಲ್ಲ ಎಂದು ಸಂತೋಷ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಕೆ.ಜೆ. ಪುರುಷೋತ್ತಮ್ ವಹಿಸಿದ್ದರು. ಡಾ. ಹೆಚ್.ಕೆ. ನಾಗರಾಜ್, ಶಾಸಕ ಎಸ್.ಆರ್. ವಿಶ್ವನಾಥ್, ಜಯನಗರ ರಾಮಮೂರ್ತಿ, ಚಿ.ನಾ. ರಾಮು, ಮಾಜಿ ಶಾಸಕ ನಂದೀಶ್ ರೆಡ್ಡಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.



































































































