
ನವದೆಹಲಿ: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಗುರಿ ಹೊಂದಿದ್ದು, ಇದಕ್ಕಾಗಿ ಪ್ರತಿಯೊಬ್ಬರೂ ದೊಡ್ಡ ಕನಸು ಕಾಣಬೇಕು ಎಂದು ಕರೆ ನೀಡಿದ್ದಾರೆ.
‘ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವು ಮಾಡುವ ಕೆಲಸವು, ಜಗತ್ತೇ ನಮ್ಮನ್ನು ವಿಭಿನ್ನ ರೀತಿಯಲ್ಲಿ ನೋಡುವಂತೆ ಮಾಡುತ್ತದೆ. ಇನ್ನು ಸಣ್ಣ ಸಣ್ಣ ಕನಸುಗಳು ಸಾಕಾಗುವುದಿಲ್ಲ. ನಾವು ದೊಡ್ಡ ಕನಸುಗಳನ್ನು ಕಾಣಲು ಆರಂಭಿಸಬೇಕು. ದೊಡ್ಡ ಕನಸುಗಳು ನಮ್ಮ ಸಾಮರ್ಥ್ಯವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತವೆ’ ಎಂದು ಹೇಳಿದ್ದಾರೆ.
‘2047ರ ಹೊತ್ತಿಗೆ ವಿಕಸಿತ ಭಾರತ ನಿರ್ಮಾಣವಾಗಬೇಕು ಎಂಬುದು ದೇಶದ ಕನಸಾಗಬೇಕು. ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವು ಅಭಿವೃದ್ಧಿ ಸಾಧಿಸುವ ಸಂಕಲ್ಪ ಮಾಡಿದಾಗ, ಜಗತ್ತು ನಮ್ಮತ್ತ ತಿರುಗಿ ನೋಡುತ್ತದೆ’ ಎಂದು ಹೇಳಿದ್ದಾರೆ.
ಇದೇ ವೇಳೆ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ‘ವಂದೇ ಮಾತರಂ’ ಘೋಷಣೆ ಮೊಳಗಿದ್ದನ್ನು ಮೋದಿ ಹೆಮ್ಮೆಯಿಂದ ಉಲ್ಲೇಖಿಸಿದರು. ಮಹಾತ್ಮ ಗಾಂಧಿ ಸೇರಿದಂತೆ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿದ್ದಾರೆ.



































































































