
ಬೆಂಗಳೂರು: ತಮ್ಮ ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಹಿರಿಯ ನಟ ದೊಡ್ಡಣ್ಣ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ಆಧರಿಸಿ ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.
ಕಿಡಿಗೇಡಿಗಳು AI ತಂತ್ರಜ್ಞಾನ ಬಳಸಿ ದೊಡ್ಡಣ್ಣ ಅವರ ಫೋಟೋ ಹಾಗೂ ಹೆಸರನ್ನು ತಿರುಚಿ, ಫೇಸ್ಬುಕ್ನ ಖಾತೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂಬ ಸುಳ್ಳು ಪೋಸ್ಟ್ ಹಂಚಿಕೊಂಡಿದ್ದರು. ಈ ಸುದ್ದಿ ವೈರಲ್ ಆಗಿ ಕುಟುಂಬಕ್ಕೆ ಮಾನಸಿಕ ನೋವು ಉಂಟುಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಂಬಂಧಿತ ಫೇಸ್ಬುಕ್ ಖಾತೆಯ ಐಪಿ ವಿಳಾಸ ಪತ್ತೆ ಕಾರ್ಯ ನಡೆಸುತ್ತಿದ್ದಾರೆ. ಈ ಹಿಂದೆ ದೊಡ್ಡಣ್ಣ ಅವರು ಸ್ವತಃ ಸಾರ್ವಜನಿಕವಾಗಿ ಕಾಣಿಸಿಕೊಂಡು ತಾವು ಆರೋಗ್ಯವಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು.

































