ಭಾಗ – 646
ಭರತೇಶ್ ಶೆಟ್ಟಿ ಎಕ್ಕಾರು

ನರಭಕ್ಷಕ ರಾಕ್ಷಸ ಕಲ್ಮಾಷ ಪಾದ ಬರುತ್ತಿರುವುದನ್ನು ನೋಡಿದ ವಸಿಷ್ಟರ ವಿರೋಧಿ ಕೌಶಿಕ ಮುನಿ ಈ ರಾಕ್ಷಸನನ್ನು ತನ್ನ ಪರಮೋಚ್ಚ ಉದ್ದೇಶವಾದ ಹಗೆಸಾಧನೆ ಮಾಡಿಕೊಳ್ಳಲು ಬಳಸಬೇಕೆಂದು ತೀರ್ಮಾನಿಸಿದ. ತಕ್ಷಣ ಈ ವರೆಗಿನ ತನ್ನ ತಪಸ್ಶಕ್ತಿಯನ್ನು ವಿನಿಯೋಗಿಸಿ ಕಿಂಕರ ಎಂಬ ಮಾಯಾ ರಕ್ಕಸ ಶಕ್ತಿಯನ್ನು ಸೃಷ್ಟಿಸಿ ಕಲ್ಮಾಶಪಾದ ಸೌದಾಸನ ಶರೀರದೊಳಗೆ ಸಮಾವೇಶಗೊಳಿಸಿದನು. ಈಗ ಎರಡು ನಕಾರಾತ್ಮಕ ಶಕ್ತಿಗಳು ಸೌದಾಸನೊಳಗೆ ಸಮಾಹಿತಗೊಂಡಿವೆ. ಒಂದು ವಸಿಷ್ಟರ ನರಭಕ್ಷಕ ರಕ್ಕಸನಾಗುವ ಶಾಪ. ಈಗ ಕೌಶಿಕ ಸೇರಿಸಿರುವ ಕಿಂಕರ ಎನ್ನುವ ಮಾಯಾ ನಿಯಂತ್ರಕ ಶಕ್ತಿ. ಪರಿಣಾಮವಾಗಿ ಸೌದಾಸ ವಸಿಷ್ಟರ ಮಗ ಶಕ್ತಿ ಮುನಿಯನ್ನೇ ಕೊಂದು ತಿಂದು ಬಿಟ್ಟನು.
ಬ್ರಹ್ಮರ್ಷಿ ವಸಿಷ್ಟರಿಗೆ ಪುತ್ರವಿಯೋಗದ ದುಃಖ ನೀಡಿತಾದರೂ, ಹೀಗಾಗಲು ತಾನೇ ಕಾರಣ ಎಂದು ಅರ್ಥೈಸಿಕೊಂಡರು. ಅಕಾರಣವಾಗಿ ಸತ್ಕರ್ಮ ನಿರತ, ವಿಧೇಯನೂ ಆಗಿದ್ದ ಸೌದಾಸನನ್ನು ಶಪಿಸಿದ ಪಾಪದ ಫಲವನ್ನು ಅನುಭವಿಸುವಂತಾಯಿತು. ಹೀಗೆಂದು ಸ್ವಯಂ ಅಪರಾಧಿ ಭಾವ ತಳೆದು ತನ್ನ ಮಗ ಶಕ್ತಿ ಮುನಿಯ ಆಶ್ರಮದತ್ತ ಹೊರಟರು. ಅಲ್ಲಿ ಬಂದು ನೋಡುವಾಗ ಪತಿಯನ್ನು ಕಳಕೊಂಡು ದುಃಖತಪ್ತಳಾದ ಸೊಸೆ, ಅಂದರೆ ಶಕ್ತಿ ಮುನಿಯ ಪತ್ನಿ ಅದೃಷ್ಯವಂತಿ ಯನ್ನು ಕಂಡರು. ಆಕೆ ಏಕಾಂತದಲ್ಲಿ ಕುಳಿತು ಕಣ್ಣೀರ್ಗರೆಯುತ್ತಿದ್ದಳು. ವಸಿಷ್ಠರು ಆಶ್ರಮಕ್ಕೆ ಬಂದುದನ್ನು ಕಂಡು ಕಣ್ಣೀರನ್ನು ಒರೆಸಿಕೊಂಡು ಮಾವನಿಗೆ ಗೌರವ ಸೂಚಿಸುತ್ತಾ ಎದ್ದು ನಿಂತಳು. ಅದೃಷ್ಯವಂತಿ ಹಾಗೆ ಅವಸರ ಅವಸರವಾಗಿ ಎದ್ದು ನಿಲ್ಲುವಾಗ ಸನಿಹದಲ್ಲೇ ಇದ್ದ ವಸಿಷ್ಠರಿಗೆ ಅತ್ಯದ್ಬುತವೂ, ದಿವ್ಯವೂ ಆದ ವೇದಧ್ವನಿಯ ನಾದವು ಹೊಮ್ಮಿದಂತೆ ಕೇಳಿಸಿತು. ಅರೆ! ಇದೇನಿದು ವಿಶೇಷ? ಇಂತಹ ವಿಸ್ಮಯಕರವೂ, ಅತಿ ಶ್ರೇಷ್ಟವೂ ಆದ ವೇದ ನಿನಾದ ಎಲ್ಲಿಂದ ಉತ್ಪತ್ತಿಯಾಗುತ್ತಿದೆ ಎಂದ ಕೌತುಕ ಮೂಡಿತು. ವಸಿಷ್ಠರ ಅನ್ವೇಷಣೆಯ ಕಣ್ಮನಗಳು ತನ್ನ ಸೊಸೆಯತ್ತ ತಿರುಗಿತು. ಸೂಕ್ಷ್ಮವಾಗಿ ಆಕೆಯನ್ನು ದಿಟ್ಟಿಸಿ ಅವಲೋಕನ ದೃಷ್ಟಿಯಲ್ಲಿ ನೋಡಿದಾಗ ಆಕೆಯಲ್ಲಿ ಗರ್ಭಿಣಿಯ ಲಕ್ಷಣಗಳು ಗೋಚರಿಸಿದವು. ತನ್ನ ಮಗ ಶಕ್ತಿ ಮಹರ್ಷಿಯ ಅಗಲಿಕೆಯ ದುಃಖ ಬಾಧಿಸುತ್ತಿದ್ದರೂ, ಸೊಸೆ ಗರ್ಭವತಿಯಾಗಿ ಮಗನ ವಂಶಾಕುರವನ್ನು ಧರಿಸಿದ್ದಾಳೆ ಎಂಬ ಸತ್ಯ ಅರಿವಾದಾಗ ಹರ್ಷಚಿತ್ತರಾದರು. ತಾನು ನಿಂತಲ್ಲೇ ನಿಂತು ಕದಲದೆ ಹೀಗೆಲ್ಲಾ ತರ್ಕಿಸಿ ಪರೀಕ್ಷಿಸುತ್ತಿರುವಾಗ ಸೊಸೆ ಹಿರಿಯರೂ, ಮಹಿಮಾನ್ವಿತರೂ ಆದ ಮಾವನನ್ನು ನೋಡಿ ಒಂದು ಹೆಜ್ಜೆ ಇಟ್ಟು ಮುಂದೆ ಬರಲು ಮುಂದಾದಾಗ ಮತ್ತೆ ಆಕೆಯ ಶರೀರದಿಂದ ಅದೇ ದಿವ್ಯ ವೇದಧ್ವನಿ ಸ್ಪಷ್ಟವಾಗಿ ಕೇಳಿಸಿತು. ಕೂಡಲೇ ಆಕೆಯ ಸಾಮಿಪ್ಯಕ್ಕೆ ಧಾವಿಸಿದ ವಸಿಷ್ಠರು ತನ್ನ ಸೊಸೆಯ ಮನಸ್ಸಿಗೆ ಧೈರ್ಯದ ನುಡಿಗಳನ್ನೂ, ದುಃಖ ಶಮನಕ್ಕಾಗಿ ಸಾಂತ್ವನವನ್ನೂ ಹೇಳಿ ಸಂತೈಸಿದರು. ಮಾತ್ರವಲ್ಲ ತನ್ನ ಸೊಸೆಗೆ ಯಾವ ದುಷ್ಟ ಶಕ್ತಿಗಳಿಂದಲೂ, ರಕ್ಕಸರಿಂದಲೂ ಆಪತ್ತು ಒದಗಬಾರದೆಂದು ಸರ್ವ ರಕ್ಷಣೆಗಾಗಿ ಮಂತ್ರರಕ್ಷೆಯನ್ನಿತ್ತು ಸುಭದ್ರಗೊಳಿಸಿದರು. ಗರ್ಭಕ್ಕೂ ದಿವ್ಯ ಮಂತ್ರದಿಂದ ರಕ್ಷಣೆಯೊದಗಿಸಿ ಕಾಪಾಡತೊಡಗಿದರು.
ಹೀಗಿರಲು ಕೌಶಿಕನಿಂದ ಸಮಾಹಿತಗೊಂಡ ಕಿಂಕರನೆಂಬ ಮಾಯಾ ಶಕ್ತಿಯ ನಿರ್ದೇಶನದಿಂದ ನರಭಕ್ಷಕ ಕಲ್ಮಾಶಪಾದ ವಸಿಷ್ಠರ ಉಳಿದ ಎಲ್ಲಾ ಮಕ್ಕಳನ್ನೂ ತಿಂದು ತೇಗಿದ. (ವಸಿಷ್ಠರ ನೂರು ಮಕ್ಕಳನ್ನು ಎಂಬ ಉಲ್ಲೇಖವಿದೆ). ದುಡುಕಿ ಶಪಿಸಿದ ಪರಿಣಾಮ ವಸಿಷ್ಠರಿಗೆ ಈಗ ತನ್ನಿಂದಲೇ ಶಾಪಗ್ರಸ್ಥನಾದ ನರಭಕ್ಷಕನಿಂದ ಘೋರ ಪುತ್ರ ವಿಯೋಗ ಬಂದೊದಗಿದೆ. ಆದರೂ ವಿಚಲಿತರಾಗಿದ್ದರೂ ಸಹಿಸಿಕೊಂಡು ತನ್ನ ತಪಸ್ಶಕ್ತಿಯನ್ನು ಬಳಸಿಕೊಂಡು ಸೊಸೆ ಅದೃಷ್ಯವಂತಿಯ ಗರ್ಭವನ್ನು ಸರ್ವ ವಿಧದಿಂದಲೂ ರಕ್ಷಿಸಿ ಕಾಪಾಡಿಕೊಂಡರು. ದಿನಗಳು ಕಳೆದು ಮಾಸಗಳು, ಮಾಸಗಳು ಕಳೆಯುತ್ತಾ ನವ ಮಾಸಗಳು ತುಂಬಿಕೊಂಡಾಗ ಒಂದು ದಿನ ಸೊಸೆ ಅದೃಶ್ಯವಂತಿಗೆ ಪ್ರಸವ ವೇದನೆ ಆರಂಭವಾಯಿತು.
ಮುಂದುವರಿಯುವುದು…..






























































































































