
ನವದೆಹಲಿ: ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ಸಂಬಂಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ, ಕಾಕ್ರೋಚ್ ಜನತಾ ಪಾರ್ಟಿ (CJP) ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್ನಿಂದ ದೆಹಲಿ ಪೊಲೀಸ್ ಪ್ರಧಾನ ಕಚೇರಿವರೆಗೆ ನಡೆಸಲು ನಿರ್ಧರಿಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ರದ್ದುಗೊಳಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠದ ಮುಂದೆ ಸಿಜೆಪಿ ವಕ್ತಾರ ಸೌರವ್ ದಾಸ್ ಪಕ್ಷದ ನಿರ್ಧಾರವನ್ನು ಪ್ರಕಟಿಸಿದರು. ಕೇಂದ್ರ ಸರ್ಕಾರದ ಭರವಸೆ, ನ್ಯಾಯಾಂಗದ ಮೇಲಿನ ಗೌರವ ಹಾಗೂ ಸುಪ್ರೀಂ ಕೋರ್ಟ್ ಆದೇಶವನ್ನು ಪರಿಗಣಿಸಿ ಮೆರವಣಿಗೆಯನ್ನು ಹಿಂಪಡೆಯಲಾಗಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಆಗಸ್ಟ್ 31ರಂದು ಮೆರವಣಿಗೆಯನ್ನು ತಡೆಯುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಸರ್ಕಾರ ಮತ್ತು ಪೊಲೀಸರ ಜವಾಬ್ದಾರಿ ಎಂದು ಪೀಠ ಹೇಳಿತ್ತು.
ಸಿಜೆಪಿ ಜಂಟಿ ಸಂಚಾಲಕ ಸೌರವ್ ದಾಸ್ ಈ ಬಗ್ಗೆ ಮಾತನಾಡಿದ್ದು, “ಭಾರತ ಸರ್ಕಾರದ ಭರವಸೆಗಳು, ನ್ಯಾಯಾಂಗದ ಪವಿತ್ರತೆ ಮತ್ತು ಈ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಗಮನದಲ್ಲಿಟ್ಟುಕೊಂಡು, ಸಿಜೆಪಿಯು ಸೆಪ್ಟೆಂಬರ್ 5ರ ಮೆರವಣಿಗೆಯನ್ನು ಹಿಂಪಡೆಯುವುದು ಸೂಕ್ತವೆಂದು ಭಾವಿಸುತ್ತದೆ” ಎಂದು ತಿಳಿಸಿದರು.
ಸಿಜೆಪಿಯ ನಿರ್ಧಾರವನ್ನು ಸ್ವಾಗತಿಸಿದ ಸಿಜೆಐ ಸೂರ್ಯ ಕಾಂತ್, ಎರಡೂ ಕಡೆಯವರು ಪರಸ್ಪರ ವಿಶ್ವಾಸದಿಂದ ನಡೆದುಕೊಂಡರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಮುಕ್ತ ಮನಸ್ಸಿನಿಂದ ಚರ್ಚಿಸಿದರೆ ಪರಿಹರಿಸಲಾಗದ ಸಮಸ್ಯೆ ಯಾವುದೂ ಇಲ್ಲ ಎಂದರು.
ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರಕರಣಗಳನ್ನು ಹಿಂಪಡೆಯುವ ಪ್ರಕ್ರಿಯೆಯ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಕ್ರಿಮಿನಲ್ ಹಿನ್ನೆಲೆಯಿರುವ 2,873 ಮಂದಿಯ ವಿರುದ್ಧ ಹೊಸದಾಗಿ ಎಫ್ಐಆರ್ ದಾಖಲಿಸಲಾಗುವುದು ಎಂದೂ ತಿಳಿಸಿದರು. ಉಂಟಾದ ನಷ್ಟಕ್ಕೆ ಪರಿಹಾರ ನೀಡುವ ಕುರಿತು ಸರ್ಕಾರ ಬದ್ಧವಾಗಿದೆ ಎಂದರು.
ಜುಲೈನಲ್ಲಿ ನಡೆದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಭರವಸೆ ಈಡೇರಿಲ್ಲ ಎಂದು ಆರೋಪಿಸಿ ಸಿಜೆಪಿ ಈ ಮೆರವಣಿಗೆಗೆ ಕರೆ ನೀಡಿತ್ತು. ಪ್ರಕರಣಗಳನ್ನು ಹಿಂಪಡೆಯುವುದು ಹಾಗೂ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡುವ ಭರವಸೆಗಳನ್ನು ಸರ್ಕಾರ ಪಾಲಿಸಿಲ್ಲ ಎಂಬುದು ಪಕ್ಷದ ಆರೋಪವಾಗಿತ್ತು.






















































































