
ನವದೆಹಲಿ: ನೀಟ್-ಯುಜಿ ಮರುಪರೀಕ್ಷೆ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ ಮೇಲಿದ್ದ ತಾತ್ಕಾಲಿಕ ನಿಷೇಧವನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಿಂಪಡೆದಿದೆ. ಆದರೆ ಬಳಕೆದಾರರ ಸುರಕ್ಷತೆಯನ್ನು ಗಮನಿಸಿ ‘ಮೆಸೇಜ್ ಎಡಿಟಿಂಗ್’ ಸೌಲಭ್ಯದ ಮೇಲಿನ ನಿರ್ಬಂಧವನ್ನು ಜೂನ್ 30ರವರೆಗೆ ಮುಂದುವರಿಸಲಾಗಿದೆ.
ಪ್ರಸ್ತುತ ಟೆಲಿಗ್ರಾಮ್ ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಆ್ಯಪ್ ಸ್ಟೋರ್ನಲ್ಲಿ ಲಭ್ಯವಿಲ್ಲ. ಆದರೆ ಇಂಟರ್ನೆಟ್ ಸೇವಾ ಪೂರೈಕೆದಾರರು ಹಂತಹಂತವಾಗಿ ಸೇವೆಯನ್ನು ಮರುಸ್ಥಾಪಿಸುತ್ತಿದ್ದು, ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಯಿದೆ.
ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮ ಮಾರಾಟ ಪ್ರಕರಣದ ಹಿನ್ನೆಲೆಯಲ್ಲಿ, ಎನ್ಟಿಎ ಶಿಫಾರಸಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿತ್ತು.
ನಿಷೇಧ ಪ್ರಶ್ನಿಸಿ ಟೆಲಿಗ್ರಾಮ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಈ ನಡುವೆ ಟೆಲಿಗ್ರಾಮ್ ಸಂಸ್ಥಾಪಕ ಪಾವೆಲ್ ಡುರೊವ್ ಹಾಗೂ ಇಂಟರ್ನೆಟ್ ಫ್ರೀಡಂ ಫೌಂಡೇಶನ್ ಸರ್ಕಾರದ ಕ್ರಮವನ್ನು ಟೀಕಿಸಿದ್ದು, ಇದು ಸಾಮಾನ್ಯ ಬಳಕೆದಾರರ ಮೇಲೆ ಪರಿಣಾಮ ಬೀರಿದೆ ಎಂದು ಅಭಿಪ್ರಾಯಪಟ್ಟಿವೆ.


































