
ಬೆಂಗಳೂರು: ರಾಜ್ಯದಲ್ಲಿ ಡೀಸೆಲ್ ದರ ಏರಿಕೆಯ ಪರಿಣಾಮವಾಗಿ ಶೀಘ್ರದಲ್ಲೇ ಬಸ್ ಪ್ರಯಾಣ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಸಂಬಂಧ ನಾಲ್ಕು ಸಾರಿಗೆ ನಿಗಮಗಳು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ.
ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಡಿಪೋ ಹಾಗೂ ಖಾಸಗಿ ಮಾರುಕಟ್ಟೆಯ ದರದಲ್ಲಿ ದೊಡ್ಡ ಅಂತರವಿದೆ ಎಂದು ತಿಳಿಸಿದರು.
ಡೀಸೆಲ್ ವೆಚ್ಚದ ಬಗ್ಗೆ ಅಧಿಕಾರಿಗಳಿಂದ ವರದಿ ಕೇಳಲಾಗಿದೆ. ಕೆಎಸ್ಆರ್ಟಿಸಿಯನ್ನು ಉಳಿಸುವುದರ ಜೊತೆಗೆ ಜನರಿಗೆ ಹೆಚ್ಚಿನ ಹೊರೆ ಆಗದಂತೆ ಸಮತೋಲಿತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.
ಸಾರಿಗೆ ಇಲಾಖೆ ಸಲ್ಲಿಸಿದ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದ್ದು, ರಾಜ್ಯ ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಗಮನಿಸಿ ಶೀಘ್ರದಲ್ಲೇ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ತಿಳಿಸಿದರು.


































