
ಕಡಬ: ಕಡಬ ತಾಲೂಕಿನ ಅಲಂಕಾರು ಪ್ರದೇಶದಲ್ಲಿ ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಶನಿವಾರ (ಜೂ.20) ಅಪರಾಹ್ನ ಬೆಳಕಿಗೆ ಬಂದಿದೆ. ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪತ್ನಿಯನ್ನು ಹತ್ಯೆಗೈದು ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮೂಲತಃ ಕಾರ್ಕಳ ತಾಲೂಕಿನ ಬಜಗೋಳಿ ನಿವಾಸಿಯಾಗಿದ್ದ ದಿನೇಶ್ ಹಾಗೂ ಸಿದ್ದಕಟ್ಟೆಯ ಸಂಗೀತಾ ದಂಪತಿ ಅಲಂಕಾರು ಕಜೆ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಈ ದಂಪತಿ ಅಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದು, ಶನಿವಾರ ಅವರು ಮೃತಪಟ್ಟಿರುವುದು ಪತ್ತೆಯಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಪತ್ನಿಯನ್ನು ಕೊಂದ ಬಳಿಕ ಪತಿ ನೇಣು ಬಿಗಿದುಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ದಂಪತಿಗೆ ಎರಡು ವರ್ಷದ ಹೆಣ್ಣು ಮಗು ಇರುವುದಾಗಿ ತಿಳಿದುಬಂದಿದೆ. ಸುಮಾರು ಒಂದು ತಿಂಗಳ ಹಿಂದೆ ಅವರು ಅಲಂಕಾರಿನಲ್ಲಿ ನಡೆಸುತ್ತಿದ್ದ ಹೋಟೆಲ್ನ್ನು ಮುಚ್ಚಿ ಬೇರೆಡೆ ತೆರಳಿದ್ದು, ಬಳಿಕ ಶುಕ್ರವಾರ ಮತ್ತೆ ಬಾಡಿಗೆ ಮನೆಗೆ ಮರಳಿದ್ದರು.
ಘಟನೆ ನಡೆದ ದಿನ ಮನೆಯನ್ನು ಒಳಗಿನಿಂದ ಚಿಲಕ ಹಾಕಲಾಗಿತ್ತು ಎಂದು ತಿಳಿದುಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಕಡಬ ಪೊಲೀಸ್ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.


































