ಒಂದು ವರ್ಷದಲ್ಲಿ ವಿಚಾರಣೆ ಪೂರ್ಣಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ಬುಧವಾರ ಸುಪ್ರೀಂ ಕೋರ್ಟ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಪ್ರಕರಣದ ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಟ್ರಯಲ್ ಕೋರ್ಟ್ಗೆ ಸೂಚನೆ ನೀಡಲಾಗಿದೆ.
ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಅವರ ನೇತೃತ್ವದ ದ್ವಿಸದಸ್ಯ ಪೀಠ ಈ ಆದೇಶ ಪ್ರಕಟಿಸಿದ್ದು ಜೈಲಿನಲ್ಲಿ ಇತರ ಆರೋಪಿಗಳಿಗೆ ನೀಡುವ ಮೂಲಭೂತ ಸೌಲಭ್ಯಗಳನ್ನು ದರ್ಶನ್ಗೂ ಒದಗಿಸಬೇಕು ಎಂದು ಕೋರ್ಟ್ ಹೇಳಿದೆ. ಜೊತೆಗೆ, ಮುಂದಿನ ಒಂದು ವರ್ಷ ಹೊಸ ಜಾಮೀನು ಅರ್ಜಿ ಸಲ್ಲಿಸಬಾರದು ಎಂದು ಸೂಚಿಸಿದೆ.
ಜೈಲಿನಲ್ಲಿನ ಸಮಸ್ಯೆಗಳು, ಕೈದಿಗಳಿಂದ ಕಿರುಕುಳ ಹಾಗೂ ಬೆದರಿಕೆ ಎದುರಿಸುತ್ತಿರುವುದಾಗಿ ದರ್ಶನ್ ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಾರಾಗೃಹ ಇಲಾಖೆಯಿಂದ ವರದಿ ಪಡೆದುಕೊಂಡು ಕೋರ್ಟ್ ಮುಂದೆ ಎಸ್ಪಿಪಿ ವಿಡಿಯೋ ದಾಖಲೆಗಳೊಂದಿಗೆ ವಾದ ಮಂಡಿಸಿ ಆರೋಪಗಳನ್ನು ತಳ್ಳಿಹಾಕಿದರು.
ಪ್ರಕರಣದಲ್ಲಿ ಒಟ್ಟು 270 ಸಾಕ್ಷಿಗಳಿದ್ದು, ಇದುವರೆಗೆ ಕೇವಲ 10 ಮಂದಿಯ ವಿಚಾರಣೆ ಮಾತ್ರ ಪೂರ್ಣಗೊಂಡಿದೆ ಎಂದು ದರ್ಶನ್ ಪರ ವಕೀಲರು ತಿಳಿಸಿದ್ದರು. ವಿಚಾರಣೆ ವಿಳಂಬವಾಗುತ್ತಿರುವ ಕಾರಣ, ಸಾಕ್ಷ್ಯ ಪರಿಶೀಲನೆ ಮುಗಿಯುವವರೆಗೆ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಲಾಗಿತ್ತು.























