
ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯ ಬಳಿಕ ಇದೀಗ ಸಿಎನ್‌ಜಿ ದರವೂ ಹೆಚ್ಚಳಗೊಂಡಿದ್ದು, ಸಾರ್ವಜನಿಕರಿಗೆ ಬರೆ ಎಳೆದಂತಾಗಿದೆ. ಹಾರ್ಮುಜ್ ಜಲಸಂಧಿ ದಿಗ್ಬಂಧನದಿಂದ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆ ದೇಶಾದ್ಯಂತ ಸಿಎನ್‌ಜಿ ದರವನ್ನು ಪ್ರತಿ ಕೆಜಿಗೆ 2 ರೂ. ಹೆಚ್ಚಿಸಲಾಗಿದೆ.
ದೆಹಲಿಯಲ್ಲಿ ಸಿಎನ್‌ಜಿ ದರ 77.09 ರೂ.ಗಳಿಂದ 79.09 ರೂ.ಗೆ ಏರಿಕೆಯಾಗಿದೆ. ಮುಂಬೈನಲ್ಲಿ ಮಹಾನಗರ ಗ್ಯಾಸ್ ಲಿಮಿಟೆಡ್ ಈಗಾಗಲೇ ಹೊಸ ದರ ಜಾರಿಗೆ ತಂದಿದ್ದು, ಅಲ್ಲಿ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 84 ರೂ. ತಲುಪಿದೆ.
ಜಾಗತಿಕ ಮಾರುಕಟ್ಟೆಯ ಅಸ್ಥಿರತೆ ಹಾಗೂ ರೂಪಾಯಿ ಮೌಲ್ಯ ಕುಸಿತದಿಂದ ದರ ಏರಿಕೆ ಅನಿವಾರ್ಯವಾಗಿದೆ ಎಂದು ತೈಲ ಕಂಪನಿಗಳು ತಿಳಿಸಿದ್ದು ಬೆಂಗಳೂರಿನಲ್ಲೂ ಶೀಘ್ರದಲ್ಲೇ ದರ ಏರಿಕೆಯ ಪರಿಣಾಮ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಸಿಎನ್‌ಜಿ ಬೆಲೆ ಹೆಚ್ಚಳ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ದೊಡ್ಡ ಹೊರೆ ತಂದಿದೆ. ಈಗಾಗಲೇ ಅನಿಲ ಕೊರತೆಯಿಂದಾಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವ ಸಂಕಷ್ಟ ಎದುರಿಸುತ್ತಿರುವ ಚಾಲಕರು, ದರ ಏರಿಕೆಯಿಂದ ಆದಾಯವೇ ಕುಸಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.























