ಭಾಗ – 494
ಭರತೇಶ ಶೆಟ್ಟಿ, ಎಕ್ಕಾರು

ಹೀಗೆಯೆ ಹಲವು ದಿನ ಭೀಷ್ಮಾಚಾರ್ಯರ ಬಳಿ ದಿವ್ಯೋಪದೇಶ ಪಡೆಯುತ್ತಾ ಧರ್ಮರಾಯ ತನಗೆ ಬೇಕಾದುದೆಲ್ಲವನ್ನೂ ಕೇಳಿ ತಿಳಿದುಕೊಂಡನು. ಭೀಷ್ಮಾಚಾರ್ಯರು ನಾನಾ ವಿಧವಾದ ದಾನಗಳ, ಕಾಲ ಅಕಾಲಗಳ, ಪಾತ್ರ ಅಪಾತ್ರಗಳ, ವರ್ಣಾಶ್ರಮ ಧರ್ಮಗಳ, ಶ್ರಾದ್ಧವಿಧಿಗಳ, ಧರ್ಮಶಾಸ್ತ್ರ ಮುಂತಾದವುಗಳ ಬಗ್ಗೆ ಕಥೆಯ ಸಹಿತವಾಗಿ ವಿವರಿಸುತ್ತಾ ದಿನಗಳು ಸಾಗುತ್ತಿದ್ದವು. ಬ್ರಹ್ಮ, ವಿಷ್ಣು, ಮಹೇಶ್ವರ ತ್ರೀಮೂರ್ತಿಗಳ ವಿಶೇಷಗಳನ್ನು ವರ್ಣಿಸಿ ವಿಷ್ಣು ಸಹಸ್ರನಾಮವನ್ನೂ ಅದರ ಮಹಿಮೆಯನ್ನೂ ವಿವರಿಸಿದರು.
ಮಹಿಮಾತಿಷಯ ವಿಚಾರಗಳನ್ನು ತಿಳಿಯುತ್ತಾ ಧರ್ಮಜನ ಮನಸ್ಸು ಶುದ್ಧವಾಗುತ್ತಾ ನಿರಾಳವಾಗುತ್ತಿತ್ತು. ಆದರೂ ಆತನ ಮನದಲ್ಲಿ ಒಂದು ವಿಚಾರ ಕೊರೆಯುತ್ತಲಿತ್ತು. ಪರಿಹಾರಕ್ಕಾಗಿ ಅಜ್ಜನನ್ನು ಕೇಳಿದನು “ಅಜ್ಜಾ! ನೀವು ಪಾಂಡು ಪುತ್ರರು ಹಾಗು ಧೃತರಾಷ್ಟ್ರ ಪುತ್ರರೆಂದು ಭೇದವೆಣಿಸಿದವರಲ್ಲ. ಸಮಾನವಾಗಿ ರಕ್ಷಣೆ, ಪಾಲನೆ, ಪೋಷಣೆ ಮಾಡಿದವರು. ಆದರೂ ಧರ್ಮ ಪಾಲನೆ ಮಾಡುತ್ತಾ ಹಸ್ತಿನಾವತಿಯ ಸಿಂಹಾಸನಕ್ಕೆ ಅಧೀನರಾಗಿ ಆ ಪಕ್ಷದ ಪರವಾಗಿ ನಿಂತವರು ಹೊರತು ನಾವು ನಿಮ್ಮ ವೈರಿಗಳು ಎಂಬ ಭಾವದಿಂದಲ್ಲ. ಆದರೂ ನಾವು ನಿಷ್ಕರುಣಿಗಳಾಗಿ ನಿಮಗೆ ಈ ಸ್ಥಿತಿ ತಂದಿತ್ತೆವು. ನಮ್ಮನ್ನು ಎತ್ತಿ ಮುದ್ದಾಡಿದ ನಿಮ್ಮನ್ನು ನೋಯಿಸಿದೆವು, ನಮಗೆ ಒಳಿತನ್ನು ಬಯಸುತ್ತಾ ನಿಮ್ಮ ಶರೀರದಲ್ಲಿ ಹರಿಯುತ್ತಿದ್ದ ರಕ್ತ ಕಾರುವಂತೆ ಮಾಡಿದೆವು, ಬಹುವಿಧ ಕನಸುಗಳನ್ನು, ಪುರದ ಶ್ರೇಯಸ್ಸನ್ನು, ಪ್ರಜೆಗಳ ಕ್ಷೇಮವನ್ನು ಬಯಸುತ್ತಲೆ ಬದುಕಿದ ನಿಮ್ಮನ್ನು ಚಿತ್ರಹಿಂಸೆ ಅನುಭವಿಸುವಂತೆ ಮಾಡಿದೆವು. ಅಜ್ಜಾ ನಮ್ಮ ಈ ಕೃತ್ಯದಿಂದಾಗಿ ಬಹಳಷ್ಟು ನೊಂದುಕೊಳ್ಳುತ್ತಿದ್ದೇವೆ” ಎಂದು ಕಣ್ಣೀರ್ಗರೆದನು.
ಅಜ್ಜ ಪಿತಾಮಹ ಭೀಷ್ಮಾಚಾರ್ಯರು ನೋವಲ್ಲೂ ನಗುತ್ತಾ “ಕಂದಾ! ನೀವೆಲ್ಲ ನೆಪ ಮಾತ್ರಕ್ಕೆ ಎದುರಿದ್ದೀರಿ ಹೊರತು ಅನ್ಯತಃ ನೀವೇನು ಮಾಡಿದ್ದೂ ಇಲ್ಲ, ಮಾಡಲಾಗುತ್ತಲೂ ಇರಲಿಲ್ಲ. ಕರ್ಮ ನಿರ್ದೇಶನದಂತೆ ನಿಯತಿ ಸೂತ್ರಧಾರನಾಗಿ ನಡೆಸಿದ ನಾಟಕದ ಪಾತ್ರಧಾರಿಗಳು ನಾವಾಗಿದ್ದೆವು. ನಿಷ್ಠೆಯಿಂದ ನಮ್ಮ ನಮ್ಮ ಪಾತ್ರಗಳನ್ನು ನಿರ್ವಹಿಸಿದ್ದೇವೆ ಹೊರತು ನಿಯಂತ್ರಣ ನಮ್ಮ ಯಾರ ಕೈಯಲ್ಲೂ ಇರಲಿಲ್ಲ. ಕರ್ಮವೆ ಕಾರಣೀಭೂತವಾಗಿ ಯಾರ ಕಣ್ಣಿಗೂ ತೋರದೆ, ತನ್ನ ಪ್ರಭಾವವನ್ನೂ ಕಾಣಿಸದೆ ಕಾರ್ಯವೆಸಗಿದೆ.
ಇದಕ್ಕೆ ಪೂರಕವಾಗಿ ಒಂದು ಕಥೆಯನ್ನು ಹೇಳುತ್ತೇನೆ ಕೇಳು. ಹಿಂದೆ ಗೌತಮಿಯೆಂಬ ಓರ್ವ ಹೆಂಗಸಿದ್ದಳು. ಒಂದು ದಿನ ಅವಳ ಮಗನು ವಿಷ ಸರ್ಪದ ಕಡಿತಕ್ಕೊಳಗಾಗಿ ಸತ್ತು ಹೋದನು. ಅತೀವ ದುಃಖಕ್ಕೊಳಗಾದ ಮಾತೆ ಗೌತಮಿ ರೋದಿಸತೊಡಗಿದಳು. ಇದನ್ನೆಲ್ಲ ನೋಡುತ್ತಿದ್ದ ಒಬ್ಬ ಬೇಡನು ಕೂಡಲೆ ಆ ಮಗುವನ್ನು ಕಚ್ಚಿದ ಹಾವನ್ನು ಹಿಡಿದು ” ಅಮ್ಮಾ! ನೀನು ಅಳಬೇಡ, ಇದೋ ನಿನ್ನ ಮಗುವನ್ನು ಕಚ್ಚಿ ಸಾಯಿಸಿದ ಹಾವನ್ನು ಹಿಡಿದಿದ್ದೇನೆ. ಅದನ್ನು ಕೊಂದು ಬಿಡಲೆ?” ಎಂದು ಕೇಳಿದನು. ಆಗ ಆ ಹತಭಾಗಿನಿ ಮಾತೆ “ಅಯ್ಯಾ ಸೈರಿಸು. ಆ ಹಾವಿಗೆ ಏನೂ ಮಾಡದಿರು. ಅದನ್ನು ಕೊಂದರೆ ಕೇವಲ ನನ್ನ ಸೇಡು ತೀರಿಸಿದಂತಾದೀತೆ ಹೊರತು ನನಗೆ ಬೇಕಾದ ನನ್ನ ಮಗ ಬದುಕಲಾರ. ಹಾಗಾಗಿ ಹಾವನ್ನು ಕೊಂದರೆ ನನಗೇನೂ ಪ್ರಯೋಜನವಾಗದು, ಬಿಟ್ಟು ಬಿಡು” ಎಂದು ಕೈ ಮುಗಿದು ಬೇಡಿದಳು. ಮಾತೆಯ ಸದ್ಗುಣ ಕಂಡ ಹಾವಿಗೂ ಬೇಸರವಾಯಿತು “ಅಮ್ಮಾ ನಾನು ಸ್ವತಂತ್ರನಲ್ಲ. ಆ ಹುಡುಗನ ಮೇಲೆ ನನಗೇನೂ ಹಗೆಯಿರಲಿಲ್ಲ. ಆತನ ಆಯಸ್ಸು ತೀರಿದ ಕಾರಣ ಮೃತ್ಯುವಿನ ಪ್ರೇರಣೆಯ ವಶನಾದ ನಾನು ಹಾಗೆ ಮಾಡಬೇಕಾಯಿತು.” ಎಂದಿತು. ಆಗ ಮೃತ್ಯು ದೇವತೆ ತಾನು ದೋಷಿಯೆಂದು ಎಲ್ಲರ ಮನಸ್ಸಲ್ಲಿ ಮೂಡಬಾರದೆಂದು ಪ್ರತ್ಯಕ್ಷವಾಗಿ “ಹೇ ಮಾತೆ ನಿನಗೊಂದು ನಿಗೂಢ ಸತ್ಯವನ್ನು ತಿಳಿಸುತ್ತೇನೆ. ” ಇಲ್ಲಿರುವ ಹಾವು ಅಥವಾ ನಾನು ದೋಷಿಯಲ್ಲ. ಈ ಜಗತ್ತು ಕಾಲದ ಕೈಗೊಂಬೆ. ನಾನೂ ಕಾಲ ಪ್ರೇರಿತನಾಗಿದ್ದೆನು. ಹಾವನ್ನು ಬಳಸಿಕೊಂಡು ಆಗಬೇಕಾದದ್ದು ಆಗುವಂತೆ ಮಾಡಿಸಿದ್ದೇನಷ್ಟೆ. ಎಲ್ಲವೂ ಎಲ್ಲರೂ ಕಾಲದ ಅಧೀನರು. ನಾನು ತಪ್ಪುಗಾರಳಲ್ಲ” ಎಂದು ಹೇಳಿದಳು. ಆಗ ಕಾಲ ದೇವ ಪ್ರತ್ಯಕ್ಷವಾಗಿ “ಈ ಮಗು ಸಾಯಲು ನಾವು ಯಾರೂ ಕಾರಣರಲ್ಲ. ಅವನು ಮಾಡಿರುವ ಕರ್ಮವೆ ಆತನ ಸ್ಥಿತಿಗೆ ಕಾರಣ. ಕರ್ಮ ಫಲದಿಂದ ಜನನ, ಕರ್ಮದಿಂದಲೆ ಮರಣ. ನಾವೆಲ್ಲರು ಕರ್ಮಕ್ಕೆ ವಶರಾಗಿದ್ದೇವೆ. ನೆರಳು ಮತ್ತು ಬೆಳಕು ಒಂದಕ್ಕೊಂದು ಅಂಟಿಕೊಂಡಿರುವಂತೆ ಕರ್ಮವೂ ಕರ್ತನೂ ಅಂಟಿಕೊಂಡಿರುತ್ತಾರೆ. ಈ ಜನ್ಮದಲ್ಲಿ ಆತನು ಬದುಕಿರಲು ಪಡೆದುಕೊಂಡಿದ್ದ ಅವಧಿ ಮುಗಿಯಿತು. ಹಾಗಾಗಿ ಸತ್ತಿದ್ದಾನೆ ಹೊರತು ಯಾರೂ ಏನು ಮಾಡಲಿಲ್ಲ” ಎಂದು ಸವಿವರವಾಗಿ ವಿವರಿಸಿತು.
ಕೇಳಿಸಿಕೊಂಡು ಅರ್ಥೈಸಿದ ಗೌತಮಿಯು “ದಿವ್ಯ ಶಕ್ತಿಗಳೇ, ನಾನು ಕರ್ಮ ವಶಳಲ್ಲವೇ? ಪುತ್ರ ಶೋಕವನ್ನು ಅನುಭವಿಸಿಯೆ ನಾನು ಸಾಯಬೇಕು ಎಂಬಂತಹ ಕರ್ಮ ನನ್ನದ್ದಾಗಿದ್ದರೆ ಅದು ಆಗಲೆ ಬೇಕಲ್ಲವೇ? ಯಾರನ್ನು ದೂಷಿಸಿಯೂ ಫಲವಿಲ್ಲ. ನನ್ನ ಮಗನ ಕರ್ಮಫಲ ಕಿರಿದಾಗಿತ್ತು, ಅದನ್ನು ಅನುಭವಿಸಿ ಶೀಘ್ರವಾಗಿ ಮುಕ್ತನಾಗಿದ್ದಾನೆ. ನನಗಿನ್ನೂ ಅನುಭವಿಸಲು ಬಾಕಿಯಿದೆ, ಹಾಗಾಗಿ ನಾನಿನ್ನೂ ಸಾಯದೆ ಬದುಕಿದ್ದೇನೆ. ಇದು ಸತ್ಯವಲ್ಲವೇ?” ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾ, ಉತ್ತರ ಅರ್ಥವಾಗಿದೆ ಎಂಬುವುದನ್ನು ಸ್ಪಷ್ಟೀಕರಿಸಿದಳು. ಮೃತ್ಯು ಮತ್ತು ಕಾಲ ಅದೃಶ್ಯರಾದರು. ಹಾವು ತನ್ನ ದಾರಿ ಹಿಡಿದು ಹರಿದಾಡುತ್ತಾ ಹೋದರೆ, ಬೇಡನು ತನ್ನ ಕಸುಬನ್ನು ಅರಸುತ್ತಾ ಹೊರಟನು.
ಧರ್ಮರಾಯಾ, ಕರ್ಮ ನಿರ್ದೇಶಿತವಾದ ಬದುಕು ಈ ಮರ್ತ್ಯಲೋಕದ ಜೀವರುಗಳೆಲ್ಲರದ್ದು. ಆದರೆ ಆ ಕರ್ಮಫಲ ಅನುಭವಿಸಲ್ಲಿ ಧರ್ಮಜೀವನ ನಡೆಸುವುದು ಸಜ್ಜನರ ಲಕ್ಷಣ. ಸುಮ್ಮನೆ ನೀನು ಕೊರಗಬೇಡ. ಧರ್ಮಾತ್ಮನಾಗಿರುವ ನೀನೇನೂ ಚ್ಯುತಿ ಬರುವಂತಹ ಕಾರ್ಯ ಮಾಡಲಿಲ್ಲ. ಸಮಾಧಾನವನ್ನು ತಂದು ಕೋ. ಇಲ್ಲಿ ಸತ್ತವರ ಸಾವಿಗೆ ದುರ್ಯೋಧನನ ಹಠವಾಗಲಿ, ಕರ್ಮವಾಗಲಿ ಕಾರಣವೇ ಅಲ್ಲ. ಅವರವರು ಅವರವರ ಕರ್ಮ ಫಲಾನುಸಾರ ಅಂತ್ಯ ಕಂಡುಕೊಂಡಿದ್ದಾರೆ. ಜ್ಞಾನದಿಂದ ಕರ್ಮಗಳನ್ನೆಲ್ಲ ದಹಿಸಿ ಅದರ ಬಂಧನಗಳನ್ನು ಕಳಚಿಕೊಂಡು ಮುಕ್ತನಾಗು. ನಿನಗೆ ಶ್ರೇಯಸ್ಸು ಉಂಟಾಗಲಿ ಎಂದು ಹರಸಿದರು.
ಮುಂದುವರಿಯುವುದು…













