ಅಂಗೀಕಾರಗೊಂಡ ಮಸೂದೆಯನ್ನು ಮತ್ತೊಮ್ಮೆ ಮಂಡಿಸಿ, ಮುಖಭಂಗ ಅನುಭವಿಸಿದ ಕೇಂದ್ರ ಸರಕಾರ: ಶುಭದ ರಾವ್

2023ರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿ, ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಒಪ್ಪಿಗೆ ಕೂಡ ಪಡೆಯಲಾಗಿದೆ. ಇದು ದೇಶದಲ್ಲಿ ಮಹಿಳೆಯರ ರಾಜಕೀಯ ಪ್ರತಿನಿಧಿತ್ವ ಹೆಚ್ಚಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿತ್ತು.
ಆದರೆ, ಮಸೂದೆಗೆ ಈಗಾಗಲೇ ಕಾನೂನುಬದ್ಧ ಮಾನ್ಯತೆ ಸಿಕ್ಕಿದ್ದರೂ, ಕೇಂದ್ರ ಸರ್ಕಾರವೇ ಅದನ್ನು ಜಾರಿಗೊಳಿಸದೆ ಈಗ ಕ್ಷೇತ್ರ ಪುನರ್ವಿಂಗಡಣೆಗಾಗಿ ಮಹಿಳಾ ಮೀಸಲಾತಿಯನ್ನು ಮುನ್ನೆಲೆಗೆ ತಂದಿರುವುದು ಇದು ಮಹಿಳೆಯರಿಗೆ ಬಿಜೆಪಿ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಬ್ಲಾಕ್ ಅಧ್ಯಕ್ಷ ಶುಭದ ರಾವ್ ತಿಳಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಅಬ್ಕಿ ಬಾರ್ ಚಾರ್ ಸೌ ಪಾರ್ ಎಂದು ಘೋಷಣೆ ಕೂಗಿದರು ಸರಳ ಬಹುಮತವನ್ನು ಪಡೆಯಲಾಗದೆ ಕೇವಲ 240 ಸೀಟುಗಳಿಗೆ ಕುಸಿದ ಬಿಜೆಪಿ ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳ ಸಹಾಯದಿಂದ ಊರುಗೋಲಿನ ಸರ್ಕಾರವನ್ನು ನಡೆಸುವ ದಯನೀಯ ಪರಿಸ್ಥಿತಿಗೆ ಬಂದು ತಲುಪಿದೆ. ದೇಶದಲ್ಲಿ ದಿನದಿಂದ ದಿನಕ್ಕೆ ಬಿಜೆಪಿ ಜನಪ್ರಿಯತೆ ಕಳೆದುಕೊಳ್ಳುತ್ತಿದ್ದು ಪರಿಸ್ಥಿತಿ ಹೀಗೆ ಮುಂದುವರಿದರೆ ಇನ್ನು ಮುಂದೆ ಎಂದಿಗೂ ಬಹುಮತ ಪಡೆಯಲು ಸಾಧ್ಯವಿಲ್ಲ ಎಂದು ಅರಿತ ಕೇಂದ್ರ ಬಿಜೆಪಿ ನಾಯಕತ್ವ ಸದಾಕಾಲ ದೇಶದಲ್ಲಿ ಆಡಳಿತದಲ್ಲಿರಲು ವಾಮ ಮಾರ್ಗವನ್ನು ಬಳಸಿಕೊಂಡಿರುವಂತಿದೆ.
ಅದಕ್ಕಾಗಿ ತನ್ನ ಪ್ರಾಬಲ್ಯ ಇರುವ ಉತ್ತರ ಭಾರತದಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ಮೂಲಕ ಸ್ಥಾನಗಳನ್ನು ಹೆಚ್ಚಿಸಿಕೊಂಡು ನಿರಂತರವಾಗಿ ದೇಶದಲ್ಲಿ ಆಡಳಿತದಲ್ಲಿರಲು ಹವಣಿಸುತ್ತಿದೆ, ಈ ಎಲ್ಲಾ ಕಾರಣಗಳಿಗಾಗಿ ಮಹಿಳಾ ಮೀಸಲಾತಿಯನ್ನು ಮುಂದಿಟ್ಟುಕೊಂಡು ಕ್ಷೇತ್ರ ಪುನರ್ ವಿಂಗಡಣೆಯ ರಾಜಕೀಯ ನಾಟಕವನ್ನು ಬಿಜೆಪಿ ಆಡುತ್ತಿದೆ.
ಕ್ಷೇತ್ರ ಪುನರ್ವಿಂಗಡಣೆಯ ನಿಗೂಢ ಕಾರ್ಯಸೂಚಿಯನ್ನು ಹೊಂದಿರುವ ಬಿಜೆಪಿಯು ಮಹಿಳಾ ಮೀಸಲಾತಿಯನ್ನು ಮುಂದಿಟ್ಟುಕೊಂಡು ತನ್ನ ಅಜೆಂಡಾವನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಮಹಿಳಾ ಮೀಸಲಾತಿಯೊಂದಿಗೆ ಕ್ಷೇತ್ರ ಪುನರ್ ವಿಂಗಡನೆ ನಡೆಸಲು ಮುಂದಾಗಿರುವುದು ಇದು ದೇಶದ ಜನರಿಗೆ ಅನ್ನದ ಜೊತೆಗೆ ವಿಷವನ್ನು ಬೆರೆಸಿ ನೀಡಿದಂತಿದೆ.
ಮಹಿಳೆಯರ ಹಕ್ಕಿನ ಹೆಸರಿನಲ್ಲಿ ಬಿಜೆಪಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿರುವುದು ಗಮನಾರ್ಹವಾಗಿದೆ, ನಿಮಗೆ ಮಹಿಳೆಯರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಇದನ್ನು 2023 ರಲ್ಲಿಯೇ ಜಾರಿಗೊಳಿಸಬಹುದಿತ್ತು. ಆಗ ಮಸೂದೆ ಮಂಡನೆಯಾಗಿ ಸಂಸತ್ತಿನ ಒಪ್ಪಿಗೆ ಪಡೆದರೂ ಜಾರಿಗೊಳಿಸದೆ ಈಗ ಪಂಚ ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ತರಾತುರಿಯಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವ ಅಗತ್ಯವಾದರೂ ಏನಿತ್ತು..?
ಮಹಿಳಾ ಸಬಲೀಕರಣ ಎಂಬ ಮಹತ್ವದ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಸಮಂಜಸವಲ್ಲ. ಜನರು ಈಗ ಜಾಗೃತರಾಗಿದ್ದು, ಭಾಷಣಕ್ಕಿಂತ ಹೆಚ್ಚು ಕಾರ್ಯರೂಪವನ್ನು ನಿರೀಕ್ಷಿಸುತ್ತಿದ್ದಾರೆ. ಮಹಿಳೆಯರ ಹಕ್ಕು ಮತ್ತು ಪ್ರತಿನಿಧಿತ್ವವನ್ನು ನಿಜವಾಗಿ ಬಲಪಡಿಸಲು ಪ್ರಾಮಾಣಿಕ ಇಚ್ಛಾಶಕ್ತಿ ಮತ್ತು ಕಾರ್ಯಯೋಜನೆ ಅಗತ್ಯವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.













