
ಮುಂಬೈ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಶಿವಸೇನಾ (ಯುಬಿಟಿ) ಪಕ್ಷದಿಂದ ನೀಡಿದ್ದ 1 ಕೋಟಿ ರೂಪಾಯಿ ದೇಣಿಗೆಗೆ ಯಾವುದೇ ಅಧಿಕೃತ ರಶೀದಿ ದೊರೆತಿಲ್ಲ ಎಂದು ಪಕ್ಷದ ನಾಯಕ ಹಾಗೂ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ.
ಮುಂಬೈನಲ್ಲಿ ಮಾತನಾಡಿದ ಅವರು, ಹಣ ಮಾತ್ರವಲ್ಲದೆ ರಾಮಮಂದಿರ ನಿರ್ಮಾಣಕ್ಕಾಗಿ ಪಕ್ಷದ ವತಿಯಿಂದ ನೀಡಿದ್ದ ಬೆಳ್ಳಿಯ ಇಟ್ಟಿಗೆಗೂ ಟ್ರಸ್ಟ್‌ನಿಂದ ರಶೀದಿ ನೀಡಲಾಗಿಲ್ಲ ಎಂದು ಹೇಳಿದ್ದಾರೆ. ಆರಂಭದಲ್ಲೇ 1 ಕೋಟಿ ರೂಪಾಯಿ ಚೆಕ್ ಹಾಗೂ 25 ಕೆಜಿಗಿಂತ ಹೆಚ್ಚು ತೂಕದ ಬೆಳ್ಳಿ ಇಟ್ಟಿಗೆಯನ್ನು ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ರಾಮಮಂದಿರಕ್ಕೆ ಸಂಗ್ರಹಿಸಲಾದ ದೇಣಿಗೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆ ಉತ್ತರ ಪ್ರದೇಶ ಸರ್ಕಾರ ಎಸ್‌ಐಟಿ ರಚಿಸಿರುವುದನ್ನು ಉಲ್ಲೇಖಿಸಿದ ಅವರು, ಹಗರಣಕ್ಕೆ ಸಂಬಂಧಿಸಿದ ಎಫ್‌ಐಆರ್‌ನಲ್ಲಿ ಕೆಲವರ ಹೆಸರುಗಳೂ ಕೇಳಿಬಂದಿವೆ ಎಂದು ಹೇಳಿದ್ದಾರೆ.
ಸಾರ್ವಜನಿಕರಿಂದ ಸಂಗ್ರಹಿಸಿದ ಹಣದ ಬಳಕೆಯ ಕುರಿತು ತನಿಖೆ ನಡೆಸಬೇಕು. ಅಯೋಧ್ಯೆಯಲ್ಲಿ ಹಗರಣ ನಡೆದಿರುವ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಸ್ಥಳೀಯ ಬಿಜೆಪಿ ಮುಖಂಡರನ್ನು ರಕ್ಷಿಸಲು ತೆರೆಮರೆಯಲ್ಲಿ ದೊಡ್ಡ ಪ್ರಯತ್ನಗಳು ನಡೆಯುತ್ತಿವೆ. ಈ ನಾಯಕರು ಅಯೋಧ್ಯೆಯ ಸುತಮುತ್ತಲಿನ ಜಮೀನುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ, ನಂತರ ಅದೇ ಭೂಮಿಯನ್ನು ರಾಮಮಂದಿರ ಟ್ರಸ್ಟ್‌ಗೆ ಕೋಟ್ಯಂತರ ರೂಪಾಯಿ ಹೆಚ್ಚಿನ ದರಕ್ಕೆ ಮಾರಿ ಲಾಭ ಮಾಡಿಕೊಂಡಿದ್ದಾರೆ. ಈ ಭೂ ಖರೀದಿ ಮತ್ತು ಟ್ರಸ್ಟ್ ವ್ಯವಹಾರಗಳ ಬಗ್ಗೆ ಸಂಪೂರ್ಣ ಸತ್ಯ ಹೊರಬರಬೇಕು ಎಂದು ಸಂಜಯ್ ರಾವತ್ ಆಗ್ರಹಿಸಿದ್ದಾರೆ.


































