
ಬೆಂಗಳೂರು: ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಮತ್ತು ಫಲಿತಾಂಶ ಕುರಿತಾಗಿ ನ್ಯಾಯಾಲಯ ನೀಡಿದ ನಿರ್ದೇಶನದ ಮರುಪರಿಶೀಲನೆಗಾಗಿ ಅರ್ಜಿ ಸಲ್ಲಿಸಲಾಗಿದ್ದು ಮಂಗಳವಾರ ನಡೆಯುವ ವಿಚಾರಣೆಯ ನಂತರ ಮುಂದಿನ ಕ್ರಮ ತೀರ್ಮಾನಿಸಲಾಗುತ್ತದೆ ಎಂದರು.
ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ವ್ಯವಸ್ಥೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ದಂಡದೊಂದಿಗೆ ತಿರಸ್ಕರಿಸಿದ್ದು, ಹಿಂದಿ ಶಿಕ್ಷಕರ ಅರ್ಜಿಯೂ ಹಿಂಪಡೆಯಲಾಗಿದೆ. ಆದರೆ ವಿದ್ಯಾರ್ಥಿಯ ಅರ್ಜಿಯ ಕುರಿತು 2025-26 ಅಧಿಸೂಚನೆ ಅನುಸರಿಸಲು ನ್ಯಾಯಾಲಯ ಸೂಚಿಸಿದೆ. ಅಡ್ವೊಕೇಟ್ ಜನರಲ್ ಸಲಹೆಯಂತೆ ಮರುಪರಿಶೀಲನಾ ಅರ್ಜಿ ಹಾಕಲಾಗಿದ್ದು ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದು, ವಿಚಾರಣೆಯ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಪಾಲಕರು ಮತ್ತು ವಿದ್ಯಾರ್ಥಿಗಳು ಆತಂಕಪಡಬೇಕಿಲ್ಲ, ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬ ಆಗುವುದಿಲ್ಲ. ಸಣ್ಣ ಮಟ್ಟಿನ ವ್ಯತ್ಯಾಸ ಸಾಧ್ಯವಿದ್ದರೂ ಉತ್ತಮ ಫಲಿತಾಂಶದ ನಿರೀಕ್ಷೆ ಇದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.













