
ಬೆಂಗಳೂರು: ಗುರುವಾರ ನಗರದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು ಈ ಸಭೆಯಲ್ಲಿ ರಾಜ್ಯ ಸರ್ಕಾರವು ರಾಷ್ಟ್ರಕವಿ ಕುವೆಂಪುಗೆ ಮರಣೋತ್ತರ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಣಯ ಕೈಗೊಂಡಿದೆ.
ಈ ಹಿಂದೆಯೇ ಕುವೆಂಪು ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಹಿರಿಯ ಸಾಹಿತಿಗಳು ಮನವಿ ಮಾಡಿದ್ದು ಅದರಂತೆ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡದ ಮೇರುಕವಿ, ನಾಟಕಕಾರ ಮತ್ತು ವಿಮರ್ಶಕ. ಕನ್ನಡ ಸಾಹಿತ್ಯಕ್ಕೆ ಕುವೆಂಪು ಕೊಡುಗೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ‘ರಾಷ್ಟ್ರಕವಿ’ ಬಿರುದನ್ನು 1964ರಲ್ಲಿ ನೀಡಿ ಗೌರವಿಸಿತು. ಅವರ ‘ಶ್ರೀ ರಾಮಾಯಣ ದರ್ಶನಂ’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿ ಪಡೆದ ಮೊದಲ ಕನ್ನಡ ಸಾಹಿತಿ ಎಂಬ ಹೆಗ್ಗಳಿಕೆಗೆ ಕುವೆಂಪು ಅವರು ಪಾತ್ರರಾಗಿದ್ದಾರೆ.













