
ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯ ಕಾಂಗ್ರೆಸ್ನಲ್ಲಿ ಅಧಿಕಾರ ಬದಲಾವಣೆ ಹಾಗೂ ದಲಿತ ಸಿಎಂ ವಿಚಾರಗಳು ಚರ್ಚೆಯಾಗುತ್ತಿರುವ ಮಧ್ಯೆ ಮಹತ್ವದ ಹೇಳಿಕೆ ನೀಡಿದ್ದಾರೆ. ರಾಜ್ಯದ ರಾಜಕೀಯ ನಿರ್ಣಯಗಳನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ತಾವು ಸೇರಿ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ಪ್ರಮುಖ ರಾಜಕೀಯ ವಿಷಯಗಳ ಬಗ್ಗೆ ಮೂವರು ಸೇರಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ಸಂಬಂಧ ಶೀಘ್ರದಲ್ಲೇ ಸಭೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು. ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಬುದ್ಧನ ಸಂದೇಶ ಇಂದು ಅತ್ಯಂತ ಪ್ರಸ್ತುತವಾಗಿದ್ದು, ಶಾಂತಿಯ ತತ್ವಗಳು ಜಗತ್ತಿಗೆ ಅಗತ್ಯವಿವೆ. ಯುದ್ಧಗಳಿಂದ ಉಂಟಾಗುತ್ತಿರುವ ಸಮಸ್ಯೆಗಳು ಜಾಗತಿಕವಾಗಿ ಪರಿಣಾಮ ಬೀರುತ್ತಿದ್ದು, ಬೆಲೆ ಏರಿಕೆಯೂ ಜನರ ಮೇಲೆ ಹೊರೆ ಹೆಚ್ಚಿಸಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ನೀತಿಗಳ ಬಗ್ಗೆ ಟೀಕಿಸಿದ ಖರ್ಗೆ, ಕಾರ್ಮಿಕರ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಹಿಂದಿನ ಕಾರ್ಮಿಕ ನೀತಿಗಳನ್ನು ಬದಲಾಯಿಸುವ ಮೂಲಕ ಕಾರ್ಮಿಕ ವಿರೋಧಿ ಕ್ರಮಗಳು ಜಾರಿಯಾಗಿವೆ ಎಂದು ಹೇಳಿದರು.
ಉದ್ಯೋಗ ಹಾಗೂ ಕಾರ್ಮಿಕರ ಸಮಸ್ಯೆಗಳ ಕಡೆ ಗಮನ ಹರಿಸಬೇಕೆಂದು ಒತ್ತಾಯಿಸಿದ ಅವರು, ಕನಿಷ್ಠ ದಿನಗೂಲಿ ಹೆಚ್ಚಳ ಅಗತ್ಯವಿದೆ. ಕಾರ್ಮಿಕರ ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಣವ್ ಝಾ, ಡಾ. ಶರಣಪ್ರಕಾಶ ಪಾಟೀಲ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.



















