
ಹೆಬ್ರಿ :ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತಿ ಅಮೂಲ್ಯವಾದುದು. ಬಾಲ್ಯದಲ್ಲಿಯೇ ಮತದಾನದ ಪ್ರಾಮುಖ್ಯತೆ ಬಗ್ಗೆ ತಿಳಿದುಕೊಳ್ಳಬೇಕು.
ಮತದಾರರ ಪಟ್ಟಿಯಲ್ಲಿರುವ ಎಲ್ಲ ಅರ್ಹ ಮತದಾರರು ಚುನಾವಣೆಗಳಲ್ಲಿ ಪಾಲ್ಗೊಂಡು ಮತದಾನವನ್ನು ಚಲಾಯಿಸಿದಾಗ ಮಾತ್ರ ನೈಜ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಭವಿಷ್ಯದ ಮತದಾರರಾಗಲಿರುವ ತಾವು ಯಾವುದೇ ಆಮಿಷಗಳಿಗೆ ಬಲಿಯಾಗಿದೆ ಮುಕ್ತ, ನ್ಯಾಯಸಮ್ಮತವಾಗಿ ಚುನಾವಣೆಗಳಲ್ಲಿ ಪಾಲ್ಗೊಂಡಾಗ ದೇಶವು ಪ್ರಗತಿಯತ್ತ ಸಾಗಲು ಸಾಧ್ಯ ಎಂದು ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಇಂದಿರಾ ಬಾಯರಿ ಹೇಳಿದರು.
ಅವರು ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ನೇತಾಜಿ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ನಡೆದ ರಾಷ್ಟೀಯ ಮತದಾರರ ದಿನಾಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ, ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.ರಸಪ್ರಶ್ನೆ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಪ್ರತೀಕ್ಷಾ ಪಿ. ಮತ್ತು ವಿನೀತಾ, ಭಿತ್ತಿಚಿತ್ರ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ರಶ್ಮಿ, ಪ್ರಬಂಧ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಸುಗಂಧಿ ಬಹುಮಾನವನ್ನು ಪಡೆದುಕೊಂಡರು. ಭಾಗವಹಿಸಿದ ಎಲ್ಲರಿಗೂ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು. ಮತದಾರರ ಸಾಕ್ಷರತಾ ಕ್ಲಬ್ ನೋಡಲ್ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ಮಹೇಶ್ ನಾಯ್ಕ್ ವಂದಿಸಿದರು. ಮತದಾರರ ಸಾಕ್ಷರತಾ ಕ್ಲಬ್ ಅಧ್ಯಕ್ಷ ಅರ್ಪಿತ್, ಕಾರ್ಯದರ್ಶಿ ಸ್ನೇಹಾ, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





















