27.3 C
Udupi
Saturday, November 28, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 712

ಭರತೇಶ ಶೆಟ್ಟಿ, ಎಕ್ಕಾರು

ಕೃಷ್ಣನು ಇಂತಹ ಅಶುಭ ಸೂಚಕ ಶಕುನಗಳನ್ನು ಗಮನಿಸಿ ಕಾರಣ ಏನಿರಬಹುದೆಂದು ಯೋಚಿಸತೊಡಗಿದನು. ಆ ಕುರಿತು ವಿವೇಚಿಸಿ ಜನ ಜೀವನವನ್ನು ಪರೀಕ್ಷಿಸತೊಡಗಿದನು. ಜನರು ದ್ಯೂತ, ಬೇಟೆ, ಸುರಾಪಾನ, ವ್ಯಭಿಚಾರ ಇತ್ಯಾದಿ ದುರ್ವ್ಯಸನ ನಿರತರಾಗಿದ್ದಾರೆ. ತತ್ಪರಿಣಾಮ ಅಧರ್ಮ ತಾಂಡವವಾಡತೊಡಗಿ ದುರ್ನಿಮಿತ್ತಗಳು ಗೋಚರಿಸತೊಡಗಿದೆ. ಈಗ ತೋರುತ್ತಿರುವ ಅಮಂಗಲಗಳೆಲ್ಲ ಯಾವುದೊ ಮಹತ್ತರವಾದ ಅನರ್ಥವನ್ನು ಬಿಂಬಿಸುತ್ತಿದೆ ಎಂಬ ಸ್ಪಷ್ಟತೆ ದೊರೆತಾಗಿದೆ. ನಿಶ್ಚಿತವಾಗಿ ಏನಾದರೂ ಹೀಗೆಯೆ ಆಗುತ್ತದೆ ಎಂದು ಗೊತ್ತಾದಾಗ ಪ್ರಯತ್ನ ಮಾರ್ಗದಿಂದ ನಿವಾರಿಸುವ ಶ್ರಮ ಪಡುವುದು ಧರ್ಮ. ಮಾರಣಾಂತಿಕ ರೋಗ ಆವರಿಸಿದ್ದರೂ, ಈ ರೋಗದಿಂದ ಮರಣ ನಿಶ್ಚಿತ ಎಂದು ಗೊತ್ತಿದ್ದರೂ ಅಂತಹ ಆತ್ಮೀಯರ ಪ್ರಾಣ ಉಳಿಸಲು ಕೊನೆ ಕ್ಷಣದವರೆಗೂ ಪ್ರಯತ್ನ ಮಾಡುವುದೇ ಧರ್ಮ. ಹಾಗೆ ಪ್ರಯತ್ನ ಮಾಡಿದ ಬಳಿಕ ಏನಾದರೂ ಆಗ ಶ್ರಮಿಸಿದವನ ಪಾಲಿಗೆ ದೋಷವುಳಿಯದು. ಈಗ ಶ್ರೀಕೃಷ್ಣ ಇಂತಹ ಧರ್ಮ ಪಾಲನೆಗೆ ಕಟಿ ಬದ್ಧನಾಗಿದ್ದಾನೆ. ಪ್ರಜಾ ಜನರನ್ನು ಕರೆದು “ನಮ್ಮ ಸಾಮ್ರಾಜ್ಯದಲ್ಲಿ ಏನೇನು ಕೆಟ್ಟ ಲಕ್ಷಣಗಳು ಸಂಭವಿಸುತ್ತಿವೆಯೊ ಅದನ್ನೆಲ್ಲ ಪ್ರತ್ಯಕ್ಷ ಸಾಕ್ಷಿಗಳಾಗಿ ನೀವು ನೋಡುತ್ತಿದ್ದೀರಿ. ನಿಮ್ಮೊಳಗೆ ಯಾಕೆ ಹೀಗಾಗುತ್ತಿದೆ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿರಬಹುದು. ನಾನು ಈಗ ಹೇಳುವುದನ್ನು ಸೂಕ್ಷ್ಮವಾಗಿ ಕೇಳಿಸಿಕೊಂಡು ಅರ್ಥ ಮಾಡಿಕೊಳ್ಳಿ. ನಂತರ ಅದನ್ನು ಅನುಸರಿಸಿ ನಡೆದರೆ ತಲೆದೋರಿರುವ ಆಪತ್ತು ಕ್ಷೀಣವಾಗಿ ನಮಗೆಲ್ಲರಿಗೂ ಭವಿಷ್ಯದಲ್ಲಿ ಕ್ಷೇಮವಾಗಿ ಪರಿಣಮಿಸಬಹುದು. ಆಪತ್ತು ಬಂದೆರಗಿದಾಗ ನಾವು ಜಾಗೃತರಾಗಿದ್ದು, ಸುರಕ್ಷಾ ಕ್ರಮಗಳನ್ನು ಅರಿತುಕೊಂಡು ಪಾಲಿಸಬೇಕು. ಏನು ಮಾಡ ಬಾರದು, ಅದನ್ನು ತ್ಯಜಿಸಬೇಕು. ಅರಿತೂ ಹಾಗೆ ಮಾಡಿದರೆ ಈ ಸಂಕಷ್ಟ ಮತ್ತೂ ಉಲ್ಬಣಗೊಳ್ಳುತ್ತದೆ. ಹಾಗಾಗಿ ಕಷ್ಟ ಎಂದೆಣಿಸಿದರೂ ಯಾವುದು ವರ್ಜ್ಯವೋ ಅದನ್ನು ತ್ಯಜಿಸಿ ಬಿಡಬೇಕು. ಏನನ್ನು ಅನಿವಾರ್ಯವಾಗಿ ಪಾಲಿಸ ಬೇಕೋ ಅದನ್ನು ಕಷ್ಟವಾದರೂ ಅನುಸರಿಸ ಬೇಕು. ಇದು ಮುಂದೆ ಸಾರ್ವಜನಿಕವಾಗಿ ಸಂಭವಿಸಬಹುದಾದ ಮಹಾ ದುರಂತವನ್ನು, ಭವಿಷ್ಯದಲ್ಲಿ ಎದುರಾಗ ಬಹುದಾದ ಮಹಾ ಸಂಕಟದ ನಿವಾರಣೆಗೆ ಸೂತ್ರ. ಇಂದು ಒಮ್ಮೆ ನಮ್ಮ ಇಚ್ಚಾ ಪೂರ್ತಿಗಾಗಿ ನಿಯಮ ಮೀರಿ ನಾಳೆಯಿಂದ ಜಾಗೃತೆ ಮಾಡೋಣ ಎಂದು ತಿಳಿಯುವುದು ಅಪರಾಧ. ಹಾಗೆ ಮಾಡಿದಲ್ಲಿ ನಮಗೂ, ನಮ್ಮವರಿಗೂ ಭಯಾನಕ ಕಷ್ಟ ಬಂದೊದಗಿ ಬಾಧಿಸುತ್ತದೆ. ಪರಿಣಾಮವಾಗಿ ನಿರಪರಾಧಿಗಳು ಸಹಿತ ತೊಂದರೆ ಅನುಭವಿಸ ಬೇಕಾಗುತ್ತದೆ. ಅಜಾಗ್ರತೆ ತೋರಿದರೆ ಸಂಕಷ್ಟವನ್ನು ನಮ್ಮ ಕೈಯ್ಯಾರೆ ಆಮಂತ್ರಣವಿತ್ತು ಆಹ್ವಾನಿಸಿದಂತಾಗುತ್ತದೆ. ಹಾಗಾಗಿ ಯಾವಾಗಲೂ ಆಪತ್ತು ಬಾರದಂತೆ ತಡೆಯುವುದು ಜಾಣತನ. ಮೀರಿದರೆ ಒಂದೊಮ್ಮೆಗೆ ಕಷ್ಟ ಬಂದೊದಗಿ ಬಾಧಿಸಲು ತೊಡಗಿದ ನಂತರ ನಿವಾರಣೆಗಾಗಿ ಹೋರಾಡಲು ಸಿದ್ಧರಾಗುವುದು ಮೂರ್ಖತನವಾಗುತ್ತದೆ. ಈಗ ನಮ್ಮ ಸಾಮ್ರಾಜ್ಯದಲ್ಲಿ ಅಧರ್ಮ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣ ಏನು ಎಂದು ಅವಲೋಕಿಸಿದಾಗ, ನಮ್ಮವರೊಳಗೆ ದುಶ್ಚಟಗಳು ಆವರಿಸಿ ವಿನಾಶಕ್ಕೆ ಸ್ವಯಂ ನಾವು ದಾರಿ ಮಾಡಿ ಕೊಡುವಂತಾಗಿದೆ. ನಿಮ್ಮೆಲ್ಲರಲ್ಲಿ ದ್ಯೂತ, ಸುರಾಪಾನ, ವ್ಯಭಿಚಾರ, ಕಳ್ಳತನ, ಪರಸ್ತ್ರೀ ವ್ಯಾಮೋಹಾದಿ ದುಷ್ಕರ್ಮಗಳು ಮಿತಿ ಮೀರುತ್ತಿದೆ. ಅದನ್ನು ಈಗಿಂದೀಗಲೆ ನಿಲ್ಲಿಸಿದರೆ, ಧರ್ಮಕಾರ್ಯಗಳತ್ತ ಎಲ್ಲರೂ ಮನ ಮಾಡಿದರೆ ಗೋಚರಿಸುತ್ತಿರುವ ದುರ್ನಿಮಿತ್ತಗಳು ದೂರವಾಗಿ ಸುಭಿಕ್ಷವಾಗಲಿದೆ”. ಎಂದು ವಿನಂತಿಸಿಕೊಂಡನು.

ಜನರೆಲ್ಲರ ಅಭ್ಯುದಯಕ್ಕಾಗಿ ಶ್ರೀಕೃಷ್ಣ ಹೇಳಿದ ಮಾತುಗಳು ಜನರ ಮೇಲೆ ಕೆಲವು ದಿನಗಳ ಕಾಲ ಪರಿಣಾಮ ಬೀರಿತು. ಎಲ್ಲರೂ ಸಜ್ಜನರಾಗಿದ್ದು, ಕೃಷ್ಣನ ಕೋರಿಕೆಯನ್ನು ಗಂಭೀರವಾಗಿ ಸ್ವೀಕರಿಸಿ ಬದುಕಿದರು. ಕ್ರಮೇಣ ಬದುಕು ನೀರಸ ಎಣಿಸಿದಾಗ ಮತ್ತೆ ಮೊದಲಿನ ಚಾಳಿಯನ್ನು ಮೈಗೂಡಿಸಿಕೊಳ್ಳತೊಡಗಿದರು. ಯಾವಾಗ ಜನರಿಗೆ ಒಂದು ನಿಯಮ ವಿಧಿಸಲ್ಪಟ್ಟು ಹೀಗೆ ಮಾಡಬಾರದು ಎಂದು ಕಟ್ಟಪ್ಪಣೆ ಹೇರಿಕೆ ಮಾಡಲಾಗುತ್ತದೋ, ಆಗ ಆ ಕುರಿತಾದ ಆಸಕ್ತಿ ಮೊದಲಿಗಿಂತಲೂ ಬಲಗೊಳ್ಳುತ್ತದೆ. ಎಷ್ಟು ಕಷ್ಟ ನಷ್ಟಗಳಾದರೂ ನಾನೊಬ್ಬ ನನ್ನ ಆಸೆಗಾಗಿ ಮೆಲ್ಲ ಕದ್ದು ಮುಚ್ಚಿ ಬಯಸಿದ್ದನ್ನು ಮಾಡುತ್ತೇನೆ. ಏನೂ ಆಗಲಿಕ್ಕಿಲ್ಲ ಎಂದು ಪ್ರಯತ್ನಿಸಲು ಆರಂಭಿಸುತ್ತಾರೆ. ಆಗ ಅಂತಹ ಜನರ ಮನಸ್ಥಿತಿ ಏನೆಂದರೆ ಉಳಿದವರೆಲ್ಲರೂ ಜಾಗ್ರತೆ ಮಾಡುತ್ತಿದ್ದಾರೆ, ನಾನೊಬ್ಬ ನಿಯಮ ಮೀರಿದರೆ ಏನೂ ತೊಂದರೆಯಾಗಲಿಕ್ಕಿಲ್ಲ ಎಂಬುದಾಗಿ ಇರುತ್ತದೆ. ದುರಂತವೇನೆಂದರೆ ದಿನಗಳೆದಂತೆ ಎಲ್ಲರಿಗೂ ಇದು ಅಭ್ಯಾಸವಾಗುತ್ತಾ ಮೊದಲಿನ ಯಥಾಸ್ಥಿತಿ ಪುನರಾವರ್ತನೆಯಾಗುತ್ತದೆ. ಆಗ ರಾಜಾಜ್ಞೆಗೆ ಬೆಲೆ ಇಲ್ಲದಂತಾಗಿ ಒಂದೋ ಕಠಿಣ ಕ್ರಮ ಕೈಗೊಳ್ಳುವುದು, ಇಲ್ಲ ಆಗುವುದು ಆಗಲಿ ಎಂದು ಬಿಟ್ಟು ಸುಮ್ಮನಿರಬೇಕಾಗುತ್ತದೆ. ದ್ವಾರಕೆಯಲ್ಲೂ ಇದೇ ಸ್ಥಿತಿ ನಿರ್ಮಾಣವಾಗತೊಡಗಿತು. ಆರಂಭದಲ್ಲಿ ಕೃಷ್ಣನ ಬೇಡಿಕೆಗೆ ಮಾನ್ಯತೆ ನೀಡಿ ಎಲ್ಲಾ ವ್ಯಸನಗಳನ್ನು ತೊರೆದು ಜನರು ಧರ್ಮಾತ್ಮರಾಗಿ ಬದುಕ ತೊಡಗಿದರು. ಕ್ರಮೇಣ ಗುಟ್ಟಾಗಿ ಒಬ್ಬೊಬ್ಬರು ಮಾತು ಮೀರಿ ಕದ್ದು ಮುಚ್ಚಿ ತಮ್ಮ ಆಸೆ ಈಡೇರಿಸುವ ಮನ ಮಾಡತೊಡಗಿದರು. ಒಬ್ಬ ಮಾಡಿದ, ಏನೂ ಆಗಲಿಲ್ಲ ಎಂದು ಮತ್ತೊಬ್ಬ ಹೀಗೆ ಎಲ್ಲರೂ ಮೊದಲಿನಂತೆ ದುರ್ವ್ಯಸನಗಳ ದಾಸರಾಗಿ ಬಿಟ್ಟರು. ಕೃಷ್ಣನಿಗೆ ತಮ್ಮವರ ದುರ್ಬುದ್ಧಿ ತಿಳಿದರೂ ಏನೂ ಮಾಡಲಾಗಲಿಲ್ಲ. ಯಾದವರು ಮೊದಲು ಕೃಷ್ಣನ ಬಗ್ಗೆ ತೋರುತ್ತಿದ್ದ ಗೌರವ, ಭಯಗಳನ್ನು ಬಿಟ್ಟು ಬಿಟ್ಟರು ಹೊರತು ದುಶ್ಚಟಗಳನ್ನು ತೊರೆಯಲಿಲ್ಲ.

ಈಗ ದ್ವಾರಕೆ ದುರ್ಜನರ ಆಗರವಾಗಿದೆ. ಎಲ್ಲಿ ನೋಡಿದರೂ ಸ್ವೇಚ್ಚಾಚಾರ ಮೇಳೈಸಿದೆ. ಹೆಂಗಸರು, ಗಂಡಸರು ಎಂಬ ಪರಿಭೇದವಿಲ್ಲ. ಉತ್ತಮ ನಡವಳಿಕೆ, ಸೌಜನ್ಯ, ನಾಚಿಕೆ, ಸತ್ಕರ್ಮ, ಸದಾಚಾರಗಳು ಹೇಳ ಹೆಸರಿಲ್ಲದಂತೆ ಮಾಯವಾದವು. ಜನರು ಮದಿರೆಯ ದಾಸರಾದರು. ಜೂಜು, ಚೋರತನ, ಪರಸ್ತ್ರೀ ಗೋಷ್ಠಿಯಲ್ಲಿ ನಿರತರಾದರು. ಸಂಸ್ಕಾರ, ಕರ್ಮಾನುಷ್ಠಾನ, ಗೋ ಸೇವೆಗಳನ್ನು ಗಾಳಿಗೆ ತೂರಿದರು. ಮಲಗಿ ನಿದ್ರಿಸಬೇಕಾದ ಹೊತ್ತು ವಿಲಾಸಿಗಳಾಗಿ, ಸುಖ ಭೋಗಿಗಳಾಗಿ, ದುಷ್ಟ ಕೂಟಗಳಲ್ಲಿ ಸಮೇಳನಗೊಂಡು ಕಾಲ ಕಳೆಯ ತೊಡಗಿದರು. ಮುಂಜಾವದ ಬ್ರಾಹ್ಮಿ ಮುಹೂರ್ತದ ಅರುಣೋದಯಕ್ಕೆ ಎದ್ದು ಏನೇನು ಆಚಾರಗಳನ್ನು ನೆರವೇರಿಸಬೇಕಿತ್ತೊ ಅವೆಲ್ಲ ಗೊಡ್ಡು ಸಂಪ್ರದಾಯಗಳಾದವು. ಹೊತ್ತು ಮೀರಿ ಸೂರ್ಯ ನೆತ್ತಿಗೆ ಏರಿ ಬರುವವರೆಗೂ ಮಲಗುವುದು ಸಾಮಾನ್ಯವಾಯಿತು. ನಂಬಿಕೆ, ಪರಿಪಾಲನೆಗಳೆಲ್ಲವೂ ಮೌಢ್ಯ ಎಂಬ ಭ್ರಮೆ ಆವರಿಸಿತು. ಎಲ್ಲಿ ಕುಲಾಚಾರಗಳು, ಧರ್ಮಕಾರ್ಯಗಳು, ಮನಃಪೂರ್ವಕವಾಗಿ ಕ್ರಮದಂತೆ ಚಾಚೂ ತಪ್ಪದೆ ನಡೆಯುತ್ತಿದ್ದವೊ ಅಲ್ಲಿ ಅನಾಚಾರಗಳು, ಅಧರ್ಮ ಕಾರ್ಯಗಳು ಹೆಚ್ಚಾಗತೊಡಗಿದವು. ಅತುಲವಾದ ಸಂಪತ್ತು, ಐಶ್ವರ್ಯ, ಸ್ವೇಚ್ಚಾ ಮನೋವೃತ್ತಿ ಹೆಚ್ಚಾಯಿತು. ಕಂಡದ್ದನ್ನು ಬಯಸಿ ಪಡೆಯುವ ಪ್ರಯತ್ನಗಳು ಸಾಂಗವಾಗಿ ಸಾಗತೊಡಗಿದವು. ಗೋ ಪಾಲಕರಾಗಿದ್ದ ಯಾದವರಿಗೆ ದನಗಳು ಸರ್ವಸ್ವವಾಗಿತ್ತು. ಆದರೆ ಈಗ ಧನಮದ ತಲೆಗಡರಿ ಧನವೇ ಸರ್ವತ್ರ ಸಾಧನ ಎಂಬುವುದಷ್ಟೆ ನಿಜವಾಗಿದೆ. ಯಾವ ರೀತಿಯ ತಡೆ, ನಿರ್ಬಂಧ, ನಿಯಂತ್ರಣಗಳೂ ಕಾರ್ಯವೆಸಗುತ್ತಿಲ್ಲ. ಅಂಕೆ ಆಣತಿಗಳಿಗೆ ಮಾನ್ಯತೆಯಿಲ್ಲ. ಹೀಗಾದಾಗ ಊರಿಗೆ ಊರು ಪರಂಪರೆಯ ಪರಿಧಿಯನ್ನು ದಾಟಿ ಎಲ್ಲೆ ಮೀರಿ ಹೋಗಲು ಹೆಚ್ಚು ಕಾಲಾವಕಾಶ ಬೇಕಾಗದು. ಎಲ್ಲವೂ ಹಾಳಾಗತೊಡಗಿತು. ದ್ವಾರಕೆಯೂ ಈಗ ಅಂತಹ ಸ್ಥಿತಿಗೆ ತಲುಪಿದೆ. ಯಾದವರೊಳಗೆ ಎಲ್ಲರಿಗೂ ನಾವು ಪ್ರಧಾನರು, ಪ್ರಮುಖರು ಎಂಬ ಭಾವ ತುಂಬಿಕೊಂಡಿದೆ. ಅದರಂತೆ ಅವರವರಿಗೆ ತೋರಿದ್ದನ್ನು ಮಾಡುವ, ಪಡೆದುಕೊಳ್ಳುವ, ಅನುಭವಿಸುವ, ಸಾಧಿಸುವ ಬುದ್ದಿ ಮನ ಮಾಡಿದೆ. ಬಯಸಿದ ಇಚ್ಚೆ ಈಡೇರದೆ ಹೋದರೆ ವಾಮ ಮಾರ್ಗ, ಆಮಿಷ, ಬಲ ಪ್ರಯೋಗ, ಪ್ರಭಾವ, ಅಸಹಾಯಕ ಸ್ಥಿತಿಯ ಲಾಭವೆತ್ತುವ ಅವಕಾಶ ಬುದ್ದಿ ಹೀಗೆ ಎಲ್ಲವೂ ಇಚ್ಚಾಪೂರ್ತಿಯ ಕಾರ್ಯ ಸಾಧನೆಗೆ ಆಯುಧಗಳಾಗಿದೆ. ಯಾರು ಯಾರನ್ನೂ ಕೇಳುವಂತಿಲ್ಲ. ನಿಷ್ಠೆ, ಪ್ರಾಮಾಣಿಕತೆ, ಮರ್ಯಾದೆ ಇತ್ಯಾದಿಗಳಿಗೆ ಸ್ಥಾನ ಇಲ್ಲ. ನಿರಂಕುಶವಾಗಿ ತಾವು ಬಯಸಿದ ಅಧಿಕಾರಕ್ಕಾಗಿ ಪ್ರಯತ್ನ, ಮಾತು ತಪ್ಪುವುದು, ವೃಥಾ ವಿರೋಧ ಮಾಡುವುದು, ಒಮ್ಮತ ಮುರಿದು ದ್ರೋಹಿಗಳಾಗಿ ಬಂಡಾಯವೆದ್ದು ಬಣಗಳಾಗಿ ಪ್ರತಿರೋಧ ತೋರುವುದು, ಹೊಡೆದಾಡಿಕೊಳ್ಳುವುದು ಇತ್ಯಾದಿ ವರ್ತನೆಗಳು ಸರ್ವೇ ಸಾಮಾನ್ಯವಾದವು. ಸತ್ಯ, ಧರ್ಮ, ನ್ಯಾಯ ಮಾರ್ಗದಲ್ಲಿ ಬದುಕುವವರ ಬದುಕು ದುಸ್ತರವಾಗ ತೊಡಗಿತು.

ಇದೆಲ್ಲವನ್ನೂ ನೋಡಿ ಸಮೀಪದಿಂದ ಗಮನಿಸುತ್ತಿದ್ದ ಶ್ರೀಕೃಷ್ಣ ಯೋಚನಾ ಮಗ್ನನಾದನು. ಧರ್ಮ ಸಂಸ್ಥಾಪನೆಗಾಗಿ ಬಂದಿರುವ ನಾನು ಇರುವಾಗ ಹೀಗಾಗುತ್ತಿದೆ ಎಂದರೆ ಇದಕ್ಕೆ ಕಾರಣ ಏನು ಎಂದು ತರ್ಕಿಸತೊಡಗಿದ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page