ಭಾಗ 89
ಭರತೇಶ್ ಶೆಟ್ಟಿ, ಎಕ್ಕಾರ್

ತಲೆ ತಗ್ಗಿಸಿಕೊಂಡು ಕಾರ್ಯವು ವಿಫಲವಾಯಿತು ಎಂಬಂತೆ ಯುವರಾಜ ರುಕ್ಮ – ವರ ವೇಷದಲ್ಲಿದ್ದ ಶಿಶುಪಾಲನ ಮುಂದೆ ನಿಂತುಕೊಂಡನು. ಜರಾಸಂಧ ಇದನ್ನು ನೋಡಿ, ಮುಂದೆ ಬಂದು ಶಿಶುಪಾಲನನ್ನು ಉದ್ದೇಶಿಸಿ ಹೇಳಿದ “ಒಳ್ಳೆಯದೇ ಆಯಿತು, ಒಲ್ಲದ ಮನಸ್ಸಿನ ಹೆಣ್ಣನ್ನು ಬಲತ್ಕಾರದಿಂದ ವರಿಸಿಯೂ ಸುಖ ಸಿಗದು. ಮದುವೆ ಯೋಗದಿಂದ ನಡೆಯುವಂತಹುದು. ಆದದ್ದು ಆಗಿ ಹೋಗಿದೆ, ಆ ಕುರಿತು ಪಶ್ಚಾತ್ತಾಪ, ಚಿಂತೆ ಮಾಡುವ ಅಗತ್ಯವಿಲ್ಲ. ಸಿಂಹದ ಬೇಟೆಯನ್ನು ನರಿಯೊಂದು ಕದ್ದು ಕೊಂಡು ಹೋದಂತಾಗಿದೆ. ನಾವು ಸಾಹಸಿಗರು ಮಾಡಬೇಕಾದದ್ದನ್ನು ಸಮಯ ನೋಡಿ ಸಾಧಿಸಿಕೊಳ್ಳೋಣ” ಎಂದು ಸಮಾಧಾನದ ಮಾತು ಹೇಳಿದ. ನಂತರ ತಮ್ಮ ತಮ್ಮ ರಾಜ್ಯಗಳತ್ತ ಮುಖಮಾಡಿ ಹೊರಟು ಹೋದರು. ವಿದರ್ಭದಲ್ಲಿ ಮಿಶ್ರ ಭಾವ ಮನ ಮಾಡಿತ್ತು. ಭೀಷ್ಮಕ ಮತ್ತು ಆಪ್ತರಾದ ಕೆಲವರಿಗೆ ಸಂತೋಷ, ರುಕ್ಮ ಮತ್ತು ಅವನ ಸಂಗಡಿಗರಿಗೆ ದುಃಖ.
ಇತ್ತ ದ್ವಾರಕೆಯಲ್ಲಿ ಕೃಷ್ಣ – ರುಕ್ಮಿಣಿಯರು ಚೈತ್ರ ರಥವೇರಿದ ಋತುರಾಜನಂತೆ ಕಂಗೊಳಿಸುತ್ತಾ ಬಂದು ಸೇರಿದರು. ಇವರನ್ನು ಕಂಡು ಸಾಕ್ಷಾತ್ “ಲಕ್ಷ್ಮೀ ನಾರಾಯಣ” ರನ್ನು ಪ್ರತ್ಯಕ್ಷ ಕಂಡಂತೆ ಜನ ಭಕ್ತಿಯ ಜಯಘೋಷ ಕೂಗ ತೊಡಗಿದರು.
ಯಾದವರ ಮನಮನೆಗಳಲ್ಲಿ ಮಹೋತ್ಸವ, ಶುಚಿರ್ಭೂತರಾದರು ನರ ನಾರಿಯರು, ಧ್ವಜಗಳನ್ನೆತ್ತಿ ಕಟ್ಟಿದರು. ತಳಿರು ತೋರಣ, ಪೂಗೀತರುಗಳಿಂದ ದ್ವಾರಗಳನ್ನು ಸಿಂಗರಿಸಿದರು, ತಳಿಲ ನೀರನ್ನು ಚೆಲ್ಲಿ ರಂಗವಲ್ಲಿಗಳನ್ನು ಬರೆದರು, ಪೂರ್ಣ ಕುಂಭಗಳನ್ನಿಟ್ಟು, ಚಿತ್ರವಸನಗಳನ್ನುಟ್ಟು, ಆಭರಣಗಳನ್ನು ತೊಟ್ಟು – ವಿದರ್ಭ, ಯಾದವ, ಕುರುಸೃಂಜಯ ರಾಜರು, ರಾಜರಮಣಿಯರಿಗೆ ಸಂಭ್ರಮದಿಂದ ಸ್ವಾಗತ ಕೋರಿದರು. ಸಮಷ್ಟಿಯಲ್ಲಿ ದ್ವಾರಕಾನಗರಿಯೇ ಅಪಾರ ಸನ್ಮೋದ- ಉಲ್ಲಾಸ ತುಂಬಿ ಶೃಂಗಾರದ ಬಳುಕಿನಲ್ಲಿ ಭೂ ಸ್ವರ್ಗದಂತೆ ಕಂಗೊಳಿಸುತ್ತಿತ್ತು.
ಅತಿಥಿ ಗಣ್ಯರ ಸಮಕ್ಷ, ಬಲರಾಮ, ವಸುದೇವ ದೇವಕಿ, ಉಗ್ರಸೇನ, ಅಕ್ರೂರಾದಿಗಳ ಉಪಸ್ಥಿತಿ, ಸಮಸ್ತ ಯಾದವರ ಹಾರೈಕೆಯೊಂದಿಗೆ ಭಗವಂತ ಶ್ರೀ ಕೃಷ್ಣ ಮಹೋತ್ಸಾಹದಿಂದ ನಿಖಿಲ ಸಂಪತ್ಕಾರಿಣಿಯೂ, ಮಹಾದಾರಿದ್ರ್ಯ ನಿವಾರಿಣಿಯೂ, ಗುಣವತಿ ಚೂಡಾಮಣಿಯೂ ಸೌಂದರ್ಯ ಗಣಿಯೂ ಆದ ರುಕ್ಮಿಣಿದೇವಿಯನ್ನು ವಿವಾಹವಾದನು.
ವಿವಾಹವಾದ ನವ ದಂಪತಿಗಳು ಕೃಷ್ಣ ರುಕ್ಮಿಣಿಯರು ಏಕಾಂತದಲ್ಲಿದ್ದಾರೆ. ಪತ್ನಿ – ಪತಿಯಲ್ಲೊಂದು ಪ್ರಶ್ನೆ ಕೇಳಲು ಅಂಜಿಕೆ ತೋರಿದಾಗ, ಕೃಷ್ಣ ನಿಸ್ಸಂಕೋಚವಾಗಿ ಕೇಳುವಂತವಳಾಗು ಎಂದು ಧೈರ್ಯ ತುಂಬಿದ. ರುಕ್ಮಿಣಿ ನೇರವಾಗಿ ವಿಷಯಕ್ಕೇ ಬಂದು “ದೇವಾ! ನಿನ್ನ ಬಾಲಲೀಲೆಗಳನ್ನೆಲ್ಲಾ ಕೇಳಿ ನಿನ್ನ ಭಕ್ತಳಾಗಿ ನಿನ್ನನ್ನೇ ಬಯಸಿದೆ. ಕಾಲ ಕಳೆಯುವಾಗ ನಿನ್ನ ಅತಿಮಾನುಷ ವಿಕ್ರಮಗಳೂ, ಭಕ್ತ ವತ್ಸಲನಾದ ನಿನ್ನ ವಿನೋದಗಳು ನನ್ನ ಮನಸೂರೆಗೊಂಡು ಪ್ರೇಮಿಸಿದೆ. ಆದರೂ ನಿನ್ನ ಚಾರಿತ್ರ್ಯದಲ್ಲಿ ಒಂದು ಆರೋಪ ಕೇಳಿರುವೆ. ಬಾಲ್ಯದಲ್ಲಿ ಗೋಪಿಕೆಯರೊಡನೆ ರಾಸಲೀಲೆಯ ಜಾರತ್ವ, ಚೋರತ್ವದ ವಿಚಾರ ನನ್ನ ಮನದಲ್ಲಿ ಜಿಜ್ಞಾಸೆಗೆ ಕಾರಣವಾಗಿದೆ. ನನ್ನ ದೇವನ ಬಗ್ಗೆ ಪೂರ್ಣ ವಿಶ್ವಾಸವಿದೆ ಆದರೂ ನಿನ್ನಲ್ಲೇ ಕೇಳಿ ತಿಳಿಯುವ ಆಸೆಯಾಗಿದೆ” ಎಂದಾಗ ಕೃಷ್ಣ ಸಂತೋಷಗೊಂಡು, ತನ್ನ ಲೀಲೆಗಳ ತತ್ವ ವಿಶೇಷಗಳನ್ನು ಸತ್ಪಾತ್ರರಿಗೆ ತಿಳಿಸುವ ಅವಶ್ಯಕತೆಯಿತ್ತು.
ಇಂದು ಸಮಯ ಒದಗಿದೆ ಎಂದು ಹೇಳಲಾರಂಭಿಸಿದ.
“ರುಕ್ಮಿಣಿ, ಗಂಡನಾದ ಮೇಲೆ ಪತ್ನಿಗೆ ತನ್ನ ವಿವಾಹ ಪೂರ್ವ ನಡವಳಿಯನ್ನು ತಿಳಿಸುವುದು ಗಂಡನಾಗಿ ಮುಂದಿನ ಸುದೀರ್ಘ ಬದುಕಿಗೆ, ವಿಶ್ವಾಸಕ್ಕೆ ಅಗತ್ಯ. ರಾಸಲೀಲೆಯ ರಹಸ್ಯವನ್ನು ಪ್ರಕಟಪಡಿಸುವೆ. ತತ್ವ ಉಪದೇಶಕನು ಜಿಜ್ಞಾಸುವಾದ ಪ್ರಿಯ ಶಿಷ್ಯನಿಗೆ ಬೋಧಿಸುವಂತೆ ಸಹಧರ್ಮಚಾರಿಣಿಯಾದ ನಿನಗೆ ಹೇಳುವೆ ಕೇಳು. ಬಹುಪಾಲು ಗಂಡು ಹೆಣ್ಣನ್ನೂ, ಹೆಣ್ಣು ಗಂಡನ್ನೂ ಯಾಕೆ ಬಯಸುತ್ತಾರೆ? ಪರಸ್ಪರ ಆಕರ್ಷಣೆಯಿಂದ ಮನಸ್ಸಿನ ಕಾಮನೆಗಳ ಸ್ವಾರ್ಥ ಸಿದ್ಧಿಯ ಸಾಧನೆಗಾಗಿ. ಮೇಲಿಂದ ಮೇಲೆ ಎಲ್ಲರೂ ಹಾಗಲ್ಲ ಎಂದು ಕಂಡರೂ ಸೂಕ್ಷ್ಮವಾಗಿ ವಿವೇಚಿಸಿದಾಗ ಮಾತ್ರ ಇದನ್ನು ಅರಿಯಬಹುದು. ಪರಸ್ಪರ ಆಕರ್ಷಣೆಯಿಂದ ಒಲವು ಮೂಡಿ, ಅನ್ಯೋನ್ಯತೆಯ ಪರಿಣಾಮ ಬೆಸುಗೆ ಬೆಸೆಯಲ್ಪಟ್ಟು, ನಿರಂತರ ಜೊತೆಯಾಗಿಯೇ ಇರಬೇಕೆಂಬ ಸ್ವಭಾವಜನ್ಯ ವಿಶಿಷ್ಟ ಭಾವ ಬೆಳೆಯುತ್ತದೆ. ಅದನ್ನೇ ಪ್ರೇಮವೆಂದು ಭ್ರಮಿಸುತ್ತಾರೆ. ಇಂತಹ ಪ್ರೇಮದ ಗುರಿಯೇನು? ಮನಸ್ಸಿನ ಆಸೆಯಂತೆ ಶರೀರ ಮಾಧ್ಯಮದಿಂದ ಸೌಂದರ್ಯ, ಪರಸ್ಪರ ಸ್ಪರ್ಶ, ಆಸ್ವಾದನೆ, ಇಂದ್ರಿಯ – ಅಂಗಗಳ ಸುಖ ಪಡೆಯುವುದು. ಹೀಗೆ ಮನಸ್ಸಿನಲ್ಲಿ ಹುಟ್ಟಿದ ಆಶೆಯನ್ನು ದೇಹದ ಮೂಲಕ ಪಡೆಯುತ್ತಾರೆ. ಇಲ್ಲೊಂದು ಸೂಕ್ಷ್ಮವಿದೆ ಸುಖದ ಅನುಭವವಾಗುವುದು ದೇಹದ ಮೂಲಕ. ಆ ಸುಖ ಪ್ರಾಪ್ತಿಗೆ ಹೇತುವಾಗುವುದು ಮನಸ್ಸಿನ ಆಸೆ. ಹಾಗಾಗಿ ಮನಸ್ಸಿನಲ್ಲಿ ಏನನ್ನು ಬಯಸುತ್ತೇವೆಯೋ, ಯಾವ ಮಟ್ಟದಲ್ಲಿ ಅದರ ಬಗ್ಗೆ ಅಪೇಕ್ಷೆ ಹೊಂದುತ್ತೇವೆಯೋ, ತತ್ಸಮವಾಗಿ ಅದು ದೊರೆತರೆ ಸಂತೋಷವಾಗುತ್ತದೆ. ಇಲ್ಲದಿದ್ದರೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ ಸುಖ ಅಥವಾ ದುಃಖಕ್ಕೆ ಕಾರಣವಾಗುವುದು ಮನಸ್ಸು.
ಇಲ್ಲಿ ಸೂಕ್ಷ್ಮವಾಗಿ ಸಾರ್ವತ್ರಿಕ ವಿಚಾರದ ಬಗ್ಗೆ ವಿವೇಚಿಸಿದರೆ, ಯಾವುದೇ ವಿಚಾರವನ್ನು ಮನಸ್ಸು ಬಯಸಿದರೆ, ಶರೀರ ಮಾಧ್ಯಮದಿಂದ ಪಡೆಯುವ ಪ್ರಯತ್ನವಾಗುತ್ತದೆ. ಕೈಗೂಡಿದರೆ ಸುಖ ಸಂತೃಪ್ತ ಭಾವವೂ ಜೊತೆಗೆ ಪ್ರೀತಿ, ಗೌರವ, ಸ್ನೇಹ ಇತ್ಯಾದಿ ಬಾಂಧವ್ಯ ಬೆಸೆಯುತ್ತದೆ. ಕೈತಪ್ಪಿದರೆ ದುಃಖ ಉಂಟಾಗಿ ಪರಿಣಾಮದಲ್ಲಿ ಕೆಲವರಲ್ಲಿ ದ್ವೇಷ, ಪ್ರತಿಕಾರ ಭಾವಗಳು, ಇನ್ನು ಕೆಲವರಿಗೆ ಪಡೆಯಲೇ ಬೇಕೆಂಬ ಹಠಸಾಧನೆ ಬೆಳೆಯುತ್ತದೆ. ಇಲ್ಲಿ ಪಡೆಯದ ಹೊರತು ನೆಮ್ಮದಿಯನ್ನೇ ಕೆಡಿಸಿರುತ್ತದೆ. ಹೀಗೆ ಉತ್ಪನ್ನವಾದ ಪಡೆಯಲೇ ಬೇಕೆಂಬ ಆಸೆ, ದೇಹ ಸ್ವಭಾವ ಸಹಜವಾಗಿ ಬಲಕುಂದಿದರೂ ಮನಸ್ಸು ಅಪೇಕ್ಷಿಸುತ್ತಾ ಇದ್ದು, ಮರಣ ಪ್ರಾಪ್ತವಾದರೂ ಅತೃಪ್ತಿ ಉಳಿದು ಹಿಂಗದ ಆಸೆಯ ಕರ್ಮಶೇಷ ಪೂರ್ತಿಯ ಪ್ರಬಲ ಇಚ್ಚೆಯಿಂದ ಮತ್ತೊಂದು ಜನ್ಮಕ್ಕೆ ಕಾರಣವಾಗುತ್ತದೆ. ಹಾಗಾಗಿ ಬಾಹ್ಯ ಶಾರೀರಿಕ ಸುಖದ ಆಸೆಗಳನ್ನು ತೊರೆಯದ ಹೊರತು ಮುಕ್ತಿ ಪ್ರಾಪ್ತವಾಗದು. ಮಹಾತ್ಮರು ಇದನ್ನರಿತು ವ್ಯವಹರಿಸಿ ಬಂಧಮುಕ್ತರಾಗುತ್ತಾರೆ.
ಇದೇ ಸೂಚ್ಯವಾಗಿ ನಂದಗೋಕುಲದಲ್ಲಾದ ರಾಸಲೀಲಾ ರಹಸ್ಯ. ಸಮುದ್ರದಾಳದಿಂದ ಮುತ್ತನ್ನು ಆಯ್ದುಕೊಳ್ಳಲು ಉಸಿರು ಹಿಡಿದಿಟ್ಟು ಮುಳುಗಿ ಎತ್ತಿ ತರುವಂತೆ, ಗೋಪಿಕೆಯರೂ ಒಂದೇ ಉದ್ದೇಶದಿಂದ ನನ್ನನ್ನು ಬಯಸಿದ್ದರು. ಸತ್ಯವನ್ನು ಸಂಶೋಧಿಸಿಯೇ ಅರಿಯಬಹುದು. ಸದ್ಬುದ್ಧಿ, ಭಕ್ತಿ ಭಾವದ ಸಂಬಂಧ ಅರಿಯದ ಜನ ಜಾರತ್ವದ ಪಟ್ಟ ಕಟ್ಟಿದರು. ನಾನು ಕೇವಲ ಗೋಪಿಜಾರನಾಗಬಲ್ಲೆನೇ? ಭಕ್ತಿಯ ಶುಭ್ರ ಸುಖವರಿತ ಗೋಪಿಕೆಯರು ಪೂರ್ವ ಜನ್ಮದ ಆಸೆಯ ಪೂರೈಕೆಗಾಗಿ ತಪಸ್ಸಿನಂತೆ ನನ್ನನ್ನು ಸೇವಿಸಿ, ಪೂಜಿಸಿ ಭಕ್ತಿ ಭಾವದ ಪರಾಕಾಷ್ಟೆಯಲ್ಲಿ ಸುಖಿಸಿದ್ದಾರೆ. ನಿಷ್ಕಾಮ ಭಕ್ತಿ ಬಯಸಿದ ದೇವ ಜೀವರ ಸಂಬಂಧ, ಕೀರ್ತನ, ನರ್ತನ ನಿರತರಾಗಿದ್ದರೇ ಹೊರತು ಅನ್ಯವೇನು ನಡೆಯಲು ಸಾಧ್ಯವಿರಲಿಲ್ಲ. ನಾನು ಯಶೋಧ ಮಾತೆಯ ಕಂದನಾಗಿ ಮೊಲೆಹಾಲು ಕಡೆವಾಯಿಯಿಂದ ಹಿಂಗಿರದ ಆ ಪ್ರಾಯದಲ್ಲಿದ್ದೆ. ಅಂತಹ ಎಳೆ ಪ್ರಾಯದ ಕೃಷ್ಣ ನಾನಗಿದ್ದರೂ ಗೋಪಿಕೆಯರು ನನ್ನಿಂದ ಬಯಸಿದ್ದ ಸುಖವೇ ಬೇರೆ. ಅಧಮ್ಯವಾದ ಭಕ್ತಿ, ಅನನ್ಯವಾದ ಸೇವೆ ಬಯಸಿ ಬಂದ ಗೋಪಿಕೆಯರು ಮನೆ, ಗಂಡ, ಮಕ್ಕಳು, ಸಂಪತ್ತು, ಕೀರ್ತಿ, ಹೆಸರು ಯಾವುದನ್ನೂ ಅಪೇಕ್ಷಿಸದೆ ಶ್ರೀ ಕೃಷ್ಣನಲ್ಲಿ ಕಂಡದ್ದು, ಬೇಡಿದ್ದು, ಪಡೆದದ್ದು ಶಾಶ್ವತವಾದ ಸುಖವನ್ನು. ಕ್ಷಣಿಕತೆಯನ್ನು ಮೀರಿ ಬಹು ದೂರದೃಷ್ಟಿ ಹೊಂದಿದ್ದ ಅವರು ಬಾಲನಾದ ನನ್ನನ್ನು ಅರೆ ಕ್ಷಣ ಬಿಟ್ಟಿರಲಾಗದೆ, ಚೋರತ್ವದ ದೂರು ಹೊತ್ತು ನೋಡಲು ಬರುತ್ತಿದ್ದರು. ಅದು ಅವರಿಗೆ ನೆಪವಾಗಿ ನನ್ನ ದರುಶನಕ್ಕೆ ದಾರಿಯಾಗಿತ್ತು. ಕದ್ದ ಕಳ್ಳ ಎಂಬ ಆರೋಪ ಮಾಡುವವರು ಬೇಕು ಬೇಕಾದ ಬೆಣ್ಣೆ, ತುಪ್ಪವನ್ನು ಕಂಠ ಪೂರ್ತಿ ನನಗೆ ತಿನಿಸಿ ಅವರ ಬಳಿಯೇ ಇರಬೇಕೆಂದು ಕಟ್ಟಿ ಹಾಕುವ ಪ್ರಯತ್ನವನ್ನೂ ಮಾಡಿದ್ದಾರೆ. ಇಲ್ಲೂ ಅವರ ಬಯಕೆ ಸಾಮಿಪ್ಯ. ಕಳ್ಳನಿಗೆ ತಿನ್ನಿಸಿ ಮನ್ನಿಸುತ್ತಾರೆಯೇ?
ಅವರಿಗೆ ಒಬ್ಬ ಕೃಷ್ಣ ಮಾತ್ರ ಬೇಕಿತ್ತು. ಏನು ಇದರ ಅರ್ಥ? ಅವರೆಲ್ಲರ ಬಯಕೆಯ ಸೊತ್ತಾದ ನಾನು ನೀಡಿದ್ದಾದರು ಏನು? ಅಲ್ಲಾ ನೀಡಿರಬಹುದಾದರೂ ಏನನ್ನು? ಬಾಹ್ಯ ದೃಷ್ಟಿಯಿಂದ ನೋಡಿದರೆ ಏನೂ ಇಲ್ಲ. ಆದರೂ ಅವರು ಪಡೆದಿದ್ದಾರೆಂಬುವುದು ಸತ್ಯ. ನಾನೀಯದೆ ಅವರು ಪಡೆದುಕೊಂಡದ್ದು ಏನನ್ನು? ಅದು ವಿಚಾರ ಮಾಡಬೇಕಾದ ವಿಷಯ. ಭವಭಯಗಳಲ್ಲಿ ಕಂಗೆಟ್ಟ ಜೀವಾತ್ಮ ಪರಮಾತ್ಮನನ್ನು ಬಯಸಿ ಹಂಬಲಿಸಿದಾಗ ಪರಮಾತ್ಮ ನೀಡಬೇಕಾದದ್ದು ಏನು? ಅದೇ ಜೀವನು ಸಾಧನೆಯಿಂದ ಪರಮಾತ್ಮನನ್ನೇ ಸೇರಿಕೊಂಡಾಗ ಅದಕ್ಕಿಂತ ಹೆಚ್ಚಿನದು ನೀಡಲಿಕ್ಕೇನಿದೆ? ಬೆಂಕಿಯಂತೆ ಪರಿಶುದ್ಧ ಭಾವದಿಂದ ನಿರ್ಹೇತುಕವಾಗಿ ನನ್ನನೇ ಬಯಸಿ ಬಂದ ಆ ಗೊಲ್ಲತಿಯರು ನನ್ನನ್ನು ಹೊರತು ಏನನ್ನೂ ಬಯಸಲಿಲ್ಲ. ಪ್ರಾಪಂಚಿಕ ಸುಖ ತ್ಯಜಿಸಿ ನನ್ನನ್ನೇ ನೆಚ್ಚಿ ಬಂದು ಅಂತೆಯೇ ನನ್ನ ಸಾನಿಧ್ಯ ಪಡೆದುಕೊಂಡರು. ಇದು ಲೋಕ ಮುಖಕ್ಕೆ ಗೊಲ್ಲತಿಯರಿಂದ ಆದ ಪಾಠವಾಗಿದೆ. ಏನೂ ಸಾಗದ, ಏನೂ ಮಾಡಲಾಗದ, ಯಾರಿಗೂ ಬೇಡದ ಆ ನಂದಗೋಕುಲದ ಗೊಲ್ಲತಿಯರು ತೋರಿಸಿಕೊಟ್ಟ ಸರಳವೂ, ಸಹಜವೂ ಆದ ಹೆದ್ದಾರಿಯಿದು. ಈ ಮಹಾ ದಾರಿಯಲ್ಲಿ ಕ್ರಮಿಸಿ, ಮಧುರಭಾವದಿಂದಲೇ ಲೋಕದ ಜನ ಪರಮಾತ್ಮನ ಸಾನಿಧ್ಯ ಸೇರಿಕೊಳ್ಳುವಂತಾಗಲಿದೆ ಎಂಬ ತತ್ವವನ್ನು ಅನಾವರಣಗೊಳಿಸಿದ್ದಾರೆ. ಕಠಿಣ ತಪಸ್ಸಿನಿಂದಷ್ಟೇ ನನ್ನ ಸಾಯುಜ್ಯ ಸಾಧ್ಯವೆಂದು ತಿಳಿದು ಹಾಗೇ ನಿರತರಾಗಿದ್ದ ಋಷಿ ಮುನಿಗಳು ಈ ಸರಳ ಪಥ ಅರಿತುಕೊಂಡದ್ದೂ ಗೋಪಿಕೆಯರಿಂದಲೇ. ದಿವ್ಯ ಸತ್ವದ ಸತ್ಯವರಿತ ಋಷಿಮುನಿಗಳು ಈ ಪ್ರಸಂಗವನ್ನು “ರಾಸಲೀಲೆ”, ವೃಂದಾವನ ವಿಹಾರ” ಎಂದೂ ಕರೆದಿದ್ದಾರೆ. ಇದರಿಂದ ಗೋಪಿಕೆಯರಿಗೆ ಆನಂದ, ಋಷಿ ಮುನಿಗಳಿಗೆ ಇಷ್ಟಾರ್ಥ ಸಿದ್ಧಿ, ಪ್ರಾಪಂಚಿಕರಿಗೆ ಮಾರ್ಗದರ್ಶನವೂ ಆಗಿದೆ. ಆದರೆ ಶ್ರೀ ಕೃಷ್ಣನ ಕೌತುಕಪ್ರದವಾದ ಜೀವನ ಸುವಿಚಾರಿಗಳಲ್ಲದವರಿಗೆ ಒಗಟಾಗಿಯೇ ಉಳಿದಿದೆ. ಮೂಢಮತಿಗಳಿಗೆ ಅವರವರ ಸಹಜ ಸ್ವಭಾವದಂತೆ ಶ್ರೀ ಕೃಷ್ಣನಲ್ಲಿ ಜಾರತ್ವವನ್ನೋ, ಚೋರತ್ವವನ್ನೋ ಕಲ್ಪಿಸಿ, ಮನುಷ್ಯ ವ್ಯಾಪ್ತಿಗಷ್ಟೇ ಸೀಮಿತಗೊಳಿಸಿ ನೋಡುವ ಬುದ್ದಿ ಪ್ರಾಪ್ತವಾಗಿ ಜರೆಯಲು, ಆರೋಪಿಸಲು ಅವಕಾಶ ಒದಗಿಸಿದೆ.”
ಹೀಗೆ ಸವಿವರವಾಗಿ ಕೃಷ್ಣನಿಂದ ತತ್ವ ಸತ್ವ ಸತ್ಯ ಸಾರವನ್ನು ತಿಳಿದ ರುಕ್ಮಿಣಿದೇವಿ ಪತಿದೇವನ ಪಾದಕ್ಕೆ ನಮಿಸಿದಳು. ಈ ತತ್ವಸಾರ ಸವಿಸ್ತಾರವಾಗಿ ನಿಮ್ಮ ದಿವ್ಯ ಮುಖವಾಣಿಯಾಗಿ ಬಂದು ನನ್ನನ್ನು ಜಾಗೃತಗೊಳಿಸಿದೆ. ಇಂತಹ ಅತಿ ಮಹಿಮೆಯ ವಿಚಾರ ಆಚಾರವಾಗಿ ಲೋಕದಲ್ಲಿ ಜನತೆ ಧನ್ಯತೆಯನ್ನು ಪಡೆಯುವಂತಾಗಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥಿಸಿದಳು.
ಮುಂದುವರಿಯುವುದು…





















