ಭಾಗ – 74
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೭೪ ಮಹಾಭಾರತ
ನಂದಗೋಕುಲದ ಗೊಲ್ಲರು ತಮ್ಮ ಪರಿವಾರ, ಗೋವುಗಳ ಸಮೇತ ವೃಂದಾವನದತ್ತ ಸಾಗಿದರು. ನಿರ್ಜನ ಯಮುನಾ ತೀರ – ಗೋವರ್ಧನ ಗಿರಿ ತಪ್ಪಲು ಪ್ರದೇಶದಲ್ಲಿ ಬಿಡಾರಗಳನ್ನು ನಿರ್ಮಿಸಿದರು. ಗೊಲ್ಲ – ಗೋಪಿಕೆಯರು ತಮ್ಮ ತಮ್ಮ ನಿವಾಸಗಳಲ್ಲಿ ವಾಸಿಸತೊಡಗಿದರು. ಹೀಗೆ ವಸತಿಗಳೂ, ಗೋವುಗಳಿಗೆ ಹಟ್ಟಿಯೂ ನಿರ್ಮಾಣವಾಗಿ ವಾಸಯೋಗ್ಯ ಪ್ರದೇಶವಾಯಿತು. ಇಲ್ಲೂ ನಂದಗೋಪ ಜಾಗೃತನಾಗಿದ್ದು ಉಪನಂದ ಎಂಬವನಿಗೆ ಯಜಮಾನಿಕೆ ವಹಿಸಿ ತಾನು ಸಾಮಾನ್ಯ ಗೋಪಾಲಕನಾಗಿ ಮಕ್ಕಳ ಗೌಪ್ಯತೆಯ ಹೊಣೆ ಹೊತ್ತು ಜಾಗೃತನಾಗಿದ್ದನು.
ಮನೆಯ ಗೋಪಿಕೆಯರು ಗೋಪಾಲಕ ಯಜಮಾನರು ಪೇಟೆಗೆ ಹೋಗಿ ಹೈನು ಉತ್ಪನ್ನ ಮಾರಾಟ ಮಾಡಿ ಮನೆಗೆ ಬೇಕಾದ ದವಸ ಧಾನ್ಯ ಖರೀದಿಸಿ ತರುತ್ತಿದ್ದರೆ, ಉಳಿದವರು ಗೋವುಗಳನ್ನು ಮೇಯಿಸುತ್ತಾ ಅವುಗಳ ಶೌಚ, ಮೇವಿನ ವ್ಯವಸ್ಥೆಯಲ್ಲಿ ನಿರತರಾಗಿದ್ದರು. ಹೀಗಿರಲು ವೃಂದಾವನದಲ್ಲಿ ಸರ್ವ ಕಾರ್ಯಗಳೂ ಆರಂಭವಾದವು. ಹಸು ಆಕಳುಗಳ ಪಾಲನೆ, ಕೃಷಿ, ದವಸ ಧಾನ್ಯಗಳ ಶೇಖರಣೆ, ಹೂ ಗಿಡಗಳು, ಹಣ್ಣಿನ ಮರಗಳು, ಮೇವುಗಳ ರಾಶಿ, ಹೀಗೆ ಜೀವನಾಧಾರ ಸಾಮಾಗ್ರಿಗಳ ಜೋಡಣೆಯಾಗುತ್ತಿರಬೇಕಾದರೆ ಬೃಂದಾವನವೂ ಗೋಕುಲದಂತೆಯೇ ವೈವಿಧ್ಯಮಯ ಸೊಬಗು ಪಡೆಯುತ್ತಿತ್ತು. ಮಕ್ಕಳೂ ಓಡಾಡುತ್ತಾ ಆಡುತ್ತಿದ್ದರು. ಗೋಪಾಲಕರ ಜೊತೆ ಊಟದ ಬುತ್ತಿ, ನೀರು ತುಂಬಿಕೊಂಡು ಮಕ್ಕಳೂ ದನ ಕರುಗಳನ್ನು ಮೇಯಿಸಲು ಹೋಗತೊಡಗಿದರು. ಅವರೊಂದಿಗೆ ಕೃಷ್ಣ ಬಲರಾಮರೂ ಜೊತೆಯಾದರು. ಬೆಳೆದು ಬಾಲಕನಾಗುತ್ತಿದ್ದ ಕೃಷ್ಣ ಕೆಲವೇ ದಿನಗಳಲ್ಲಿ ಮಕ್ಕಳ ತಂಡದ ನಾಯಕನಾದನು.
ಹೀಗಿರಲು ಒಂದು ದಿನ ಯಮುನಾ ತೀರದಲ್ಲಿ ದನಗಳನ್ನು ಮೇಯಿಸುತ್ತಿರಬೇಕಾದರೆ ಕಂಸನ ಕೂಟದ ವತ್ಸಾಸುರ ಎಂಬ ರಾಕ್ಷಸ ಕರುವಿನಂತೆ ಮಾಯಾ ರೂಪಧಾರಣೆ ಮಾಡಿ ಕಂಸಾಂತಕ ಮಗುವಿನ ಪತ್ತೆಗಾಗಿ ಬೃಂದಾವನ ಸೇರುವ ಯೋಜನೆ ರೂಪಿಸಿ ದನಗಳ ಮಂದೆ ಸೇರಿದ. ದನಗಳು ಮೂಕ ಪ್ರಾಣಿಗಳಾದರು ಕೃತಕ ರಕ್ಕಸನ ಗೋ ರೂಪ ಗುರುತಿಸಿ ತಮ್ಮೊಡನೆ ಸೇರಗೊಡದೆ ಪ್ರತಿರೋಧ ತೋರುತ್ತಾ ಸಂಘರ್ಷಕ್ಕೆ ಮುಂದಾದವು. ಸೂಕ್ಷ್ಮಮತಿ ಕೃಷ್ಣ ಹೊಸ ಕರುವಿನ ಕೃತಕತೆ ಗುರುತಿಸಿ ಅಟ್ಟುತ್ತಾ ದೂರ ಓಡಿಸಿ ಹಿಂಬಾಲಿಸಿದ. ತುಸು ದೂರ ಬಂದ ಕೂಡಲೆ ಆ ಕರು ರೂಪದಲ್ಲಿದ್ದ ವತ್ಸಾಸುರ ಒಬ್ಬಂಟಿ ಕೃಷ್ಣನ ಮೇಲೆ ಆಕ್ರಮಣಕ್ಕೆ ಮುಂದಾದ . ಅಸುರಾರಿಗೆ ಹೆಚ್ಚು ಹೊತ್ತು ಬೇಕೇ? ಓಡಿಬಂದು ಕೃಷ್ಣನ ಮೇಲೆ ಆಕ್ರಮಣ ಮಾಡಿದಾಗ ಹಿಡಿದೆತ್ತಿ ನೆಲಕ್ಕಪ್ಪಳಿಸಿದ. ರಕ್ಕಸ ನಿಜರೂಪದಲ್ಲಿ ಪ್ರಕಟನಾದ. ಬಿದ್ದವನ ಕಾಲಲ್ಲಿ ಹಿಡಿದು ಗಿರ ಗಿರನೆ ತಿರುವಿ ಮರಕ್ಕೆ ಅಪ್ಪಳಿಸಿದಾಗ ಮೃತನಾದ ದುರುಳ. ಗೋಪಾಲಕರಿಗೆ ಬಂದ ಆಪತ್ತು ನಿವಾರಣೆ ಯಾದ ಸಂತೋಷ.
ಮತ್ತೊಂದು ದಿನ ರಾಕ್ಷಸನೋರ್ವ ಬಕ ಪಕ್ಷಿಯ ಆಕಾರ ತಳೆದು ಕೃಷ್ಣನ ಕಣ್ಣಿಗೆ ಕುಕ್ಕಿ ನಂತರ ಕೊಲ್ಲುವ ಯೋಜನೆಯಲ್ಲಿ ವ್ಯಸ್ಥನಾಗಿದ್ದ. ಮಾಯೆಯೇ ಕೃಷ್ಣನ ಒಡನಾಡಿಯಾಗಿರುವಾಗ ಮಾಯಾವಿಗಳು ಕೃಷ್ಣನಿಗೆ ಏನು ತಾನೆ ಮಾಡಲಾದೀತು? ಕೊಕ್ಕರೆಯ ಕೊಕ್ಕಿನಲ್ಲಿ ಹಿಡಿದು ಅದರ ಪಾದಗಳನ್ನು ಕಾಲಿನಿಂದ ಒತ್ತಿ ಹಿಡಿದಾಗ ನಿರುಪಾಯನಾಗಿ ಪ್ರಕಟನಾದ ರಾಕ್ಷಸನೂ ಸಂಹರಿಸಲ್ಪಟ್ಟ.
ಹೀಗೆ ಕೃಷ್ಣನ ಲೀಲೆಯಾಟದಲ್ಲಿ ಕಂಸನ ಬಳಗದಿಂದ ಬೇಹನ್ನರಸಿ ಬಂದ ಮಾಯಾವಿಗಳ್ಯಾರೂ ಸುದ್ದಿ -ಸಾಧನೆಗಳೊಂದಿಗೆ ಹಿಂದಿರುಗಲಿಲ್ಲ.
ಒಂದು ದಿನ ಯಮುನಾ ತೀರದಲ್ಲಿ ದನ ಕರುಗಳು ನೀರು ಕುಡಿಯುತ್ತಿರಬೇಕಾದರೆ ಮಕ್ಕಳು ಈಜಾಡುತ್ತಾ ನೀರಾಟದ ಮೋಜಿನಲ್ಲಿ ನಿರತರಾಗಿದ್ದರು. ಆಡುತ್ತಾ ನೀರು ಕುಡಿದ ಮಕ್ಕಳೂ, ದನ ಕರುಗಳೂ ದಡದಲ್ಲಿ ಬಿದ್ದು ಕೈಕಾಲು ಬಡಿಯತೊಡಗಿದವು. ಇದನ್ನು ನೋಡಿ ಉಳಿದ ಗೋಪಾಲಕರು ಬೊಬ್ಬಿಟ್ಟರು. ಕೃಷ್ಣ ಸಾಂತ್ವಾನಗೊಳಿಸಿ ಮಕ್ಕಳನ್ನೂ, ಗೋವುಗಳನ್ನೂ ಉಪಚರಿಸಿದ. ಉಪಚಾರದಿಂದ ಚೈತನ್ಯ ತಳೆದು ದನಕರುಗಳೂ ಬಾಲಕರೂ ಎದ್ದು ನಿಲ್ಲುವಂತಾಯಿತು. ಹೀಗೇಕಾಗುತ್ತಿದೆ ಎಂಬ ಪ್ರಶ್ನೆ ಉತ್ತರವಿಲ್ಲದೆ ಗೊಂದಲಕ್ಕೆ ಕಾರಣವಾಯಿತು. ತುಸು ಹೊತ್ತು ದಡದಲ್ಲೇ ನಿಂತು ಏಕಾಗ್ರ ಚಿತ್ತದಿಂದ ನದಿಯನ್ನು ಗಮನಿಸಿದ ಕೃಷ್ಣನಿಗೆ ವಿಷಯ ಅರ್ಥವಾಯಿತು. ತಡಮಾಡದೆ ತಕ್ಷಣ ಯಮುನಾ ನದಿಗೆ ಧುಮುಕಿದ. ನೀರಿನಾಳದಲ್ಲಿ ಕೃಷ್ಣ ಕಾಣದಾದ. ಗೋಪಾಲಕರು ಹೆದರಿ ಕಂಗಾಲಾದರು. ಕೆಲವರು ಓಡಿ ಹೋಗಿ ಬೃಂದಾವನದಿಂದ ನಂದಗೋಪ ಉಪನಂದಾದಿ ಹಿರಿಯರನ್ನು ಕರೆ ತಂದರು. ಎಲ್ಲರೂ ನಿಂತು ದೇವರ ಮೊರೆ ಹೊಕ್ಕು ಬೇಡುತ್ತಿರಬೇಕಾದರೆ. ನೀರಿನಲ್ಲಿ ದೊಡ್ಡ ಅಲೆಯೊಂದು ಎದ್ದಿತು. ಘನ ಘೋರ ಘಟಸರ್ಪ ಕಾಳಿಂಗ ಪರ್ವತಾದಕೃತಿಯಲ್ಲಿ ಹೆಡೆಯೆತ್ತಿ ಬುಸುಗುಡುತ್ತಿದ್ದಾನೆ. ಅದರ ಹೆಡೆಯ ಮೇಲೆ ನಿಂತು ಕುಣಿಯುತ್ತಿದ್ದಾನೆ ಶ್ರೀ ಕೃಷ್ಣ ಪರಮಾತ್ಮ. ಎಡಗೈಯಲ್ಲಿ ಹಾವಿನ ಬಾಲವಿದೆ. ಸಪ್ತ ಶಿರಗಳ ಹೆಡೆಯ ಮೇಲೆ ನೆಗೆ ನೆಗೆದು ಕುಣಿಯುತ್ತಿರಬೇಕಾದರೆ, ಕೃಷ್ಣನ ತುಳಿತಕ್ಕೆ ಮರ್ದಿಸಲ್ಪಟ್ಟ ಕಾಳಿಂಗ ಎತ್ತಿ ನಿಲ್ಲುವ ಸಾಮರ್ಥ್ಯವಿಲ್ಲದೆ ಶರಣಾಗತನಾದ. ಶರಣರ ಪೊರೆಯುವವನಲ್ಲವೇ ಭಗವಂತ. ಕಾಳಿಂಗನ ಮೈ ಪೂಸಿ ಸಂತೈಸಿ ಬುದ್ಧಿವಾದ ಹೇಳಿದ. “ಕಾಳಿಂಗಾ, ನೀನು ಪರಿವಾರ ಸಹಿತ ಈ ಯಮುನೆಯಲ್ಲಿ ವಿಷಕಾರುತ್ತಾ ವಿಹರಿಸಿ ಗೋವುಗಳಿಗೂ ಗೋಪಾಲಕರಿಗೂ ಮೃತ್ಯುಕಾರಕನಾಗುತ್ತಿದ್ದೆ. ಹಾಗಾಗಿ ನದಿಯ ನೀರೂ ವಿಷಪೂರಿತವಾಗಿದೆ. ಹೀಗಿರುವಾಗ ಇನ್ನು ನೀನಿಲ್ಲಿ ಇರಕೂಡದು” ಎಂದು ಆಜ್ಞಾಪಿಸಿದ. ಕೃಷ್ಣನ ಆದೇಶದಂತೆ ಇಲ್ಲಿಂದ ಹೋಗಲು ಒಪ್ಪಿದ ಕಾಳಿಂಗ ತನ್ನ ಪೂರ್ವ ನಿವಾಸ ನಿರ್ಜನ ಪ್ರದೇಶ “ರಮಣಕ ದ್ವೀಪ” ಕ್ಕೆ ಹೋಗಲು ಅನುಮತಿ ಕೇಳಿ ಪರಿವಾರ ಸಹಿತ ಹೊರಟು ಹೋದನು.
ಕಾಳಿಂಗ ಮರ್ದನಗೈದ ಗೋಪಾಲ ಕೃಷ್ಣನನ್ನು ಎತ್ತಿ ಹೆಗಲೇರಿಸಿ ಕುಣಿದರು. ಗುಣಗಾನ ಮಾಡುತ್ತಿದ್ದ ಗೋಪಾಲಕರು ಕೃಷ್ಣನನ್ನು ಹೊತ್ತು ಮೆರವಣಿಗೆಯಲ್ಲೇ ಬೃಂದಾವನದವರೆಗೆ ಕರೆತಂದರು. ಈ ಸಂಭ್ರಮ ಕಂಡು ವಿಚಾರ ತಿಳಿದ ಯಶೋದಮ್ಮನಿಗೆ ಮಗನ ವಿಕ್ರಮ ಮೊದಲಿಗೆ ಭಯವನ್ನೂ ನಂತರ ಅತ್ಯಾನಂದವನ್ನಿತ್ತರೂ ಮಗನಿಗೆ ದೃಷ್ಟಿಯಾಗಬಾರದೆಂದು ಬಹು ಹೊತ್ತು ಹಲವು ವಿಧಾನಗಳಿಂದ ದೃಷ್ಟಿ ನಿವಾರಣಾ ವಿಧಿ ಪೂರೈಸಿದಳು.
ಕೆಲ ದಿನಗಳು ಕಳೆದು ಒಂದು ದಿನ ಕೃಷ್ಣ ಬಲರಾಮರು ಗೋವುಗಳನ್ನು ಮೇಯಲು ಬಿಟ್ಟು ಆಟದಲ್ಲಿ ನಿರತರಾಗಿದ್ದಾಗ ಅಪರಿಚಿತ ಗೊಲ್ಲರ ಬಾಲಕನೂ ಇವರ ಜೊತೆ ಆಡುತ್ತಿದ್ದನು. ಗೆದ್ದವರನ್ನು ಸೋತವರು ಬೆನ್ನಮೇಲೆ ಮೂಟೆ ಹೊತ್ತು ಮೈದಾನದ ಮೂಲೆಯವರೆಗೆ ಹೊತ್ತು ಓಡಿ ಹಿಂದಿರುಗಿ ಬರಬೇಕಾಗಿತ್ತು. ಹಾಗೆ ಗೆದ್ದ ಕೃಷ್ಣ ರಾಮರ ತಂಡವನ್ನು ಸೋತವರು ಹೊತ್ತೊಯ್ಯಬೇಕಾಯಿತು. ಬಲರಾಮನನ್ನು ಈ ಅಪರಿಚಿತ ಗೊಲ್ಲ ಹುಡುಗ ಹೊರೆಯಾಗಿ ಬೆನ್ನ ಮೇಲೆ ಹೊತ್ತುಕೊಂಡು ಓಡುತ್ತಿದ್ದ. ತುಸು ದೂರ ಸಾಗಿ ಗಾಳಿಯಲ್ಲಿ ಹಾರಿ ಏರಿ ಮೇಲೇರತೊಡಗಿದ. ಬಲರಾಮ ಆತಂಕಗೊಂಡು ಇದು ಮಾಯಾವಿ ಕೃತ್ಯವಿರಬೇಕೆಂದು ಅರಿತನು. ಮುಷ್ಟಿಯಿಂದ ಬಲವಾಗಿ ಗುದ್ದಿದಾಗ ರಾಕ್ಷಸ ದೊಪ್ಪನೆ ಕೆಳಗೆ ಬಿದ್ದ. ಗುದ್ದಾಟ ಹೊಡೆದಾಟವಾಗಿ ಗೊಲ್ಲ ಬಾಲಕನ ರೂಪದಲ್ಲಿದ್ದ ಪ್ರಲಂಬಾಸುರನೆಂಬ ರಾಕ್ಷಸ ನಿಜರೂಪ ತಳೆದು ಕಾದಾಟದಲ್ಲಿ ಬಲರಾಮನಿಂದ ಹತನಾದ. ಬಲರಾಮನ ವಿಜಯದ ಸಂಭ್ರಮದಲ್ಲಿರಬೇಕಾದರೆ ನಾಲ್ಕೂ ದಿಕ್ಕುಗಳಿಂದ ಬೆಂಕಿಯ ಜ್ವಾಲೆ ಆಕಾಶದೆತ್ತರಕ್ಕೆ ಪ್ರಜ್ವಲಿಸುತ್ತಾ ಹಬ್ಬತೊಡಗಿತು. ದನಕರುಗಳು ಬಾಲವನ್ನೆತ್ತಿ ಅರಚುತ್ತಾ ಕಂಗೆಟ್ಟು ಓಡ ತೊಡಗಿದವು. ಅರೆಕ್ಷಣದಲ್ಲಿ ರಹಸ್ಯ ಭೇದಿಸಿದ ಕೃಷ್ಣ ತನ್ನ ಸಂಗಡಿಗರೆಲ್ಲರಿಗೂ ಕಣ್ಣು ಮುಚ್ಚಿ ನಿಲ್ಲಲು ಹೇಳಿ, ಉರಿಜ್ವಾಲೆಗಳ ಮಧ್ಯೆ ಜಿಗಿದ. ವಿಸ್ತಾರವಾಗಿ ತನ್ನ ನಾಲಗೆಯನ್ನು ಬೆಳೆಸಿ ಉರಿ ಬೆಂಕಿ ಜ್ವಾಲೆಗಳನ್ನು ಹೀರಿ ನುಂಗಿದ. ಮಾಯಾವಿ ಜ್ವಾಲಾಸುರನ ಆಟ ಕೃಷ್ಣನ ಮುಂದೆ ಸಾಗಲಿಲ್ಲ. ಗೋಪಾಲಕರಲ್ಲಿ ಕಣ್ಣು ತೆರೆಯಲು ಹೇಳಿದಾಗ ಯಥಾ ಸಹಜ ಸ್ಥಿತಿಯಾಗಿತ್ತು. ಗೋವುಗಳನ್ನು ಬೃಂದಾವನಕ್ಕೆ ಅಟ್ಟಿಕೊಂಡು ಬಂದು ವಿಶ್ರಾಂತರಾದರು.
ಹೀಗಿರಲು ಗೋಕುಲದ ಗೋಪಾಲಕರನ್ನೆಲ್ಲಾ ಸೇರಿಸಿ ಉಪನಂದನ ಯಜಮಾನಿಕೆಯಲ್ಲಿ ನಂದಗೋಪಾದಿಗಳೂ ಉಪಸ್ಥಿತರಿದ್ದು ಪರಂಪರೆಯ ಉತ್ಸವ “ಇಂದ್ರಪೂಜೆ” ಮಾಡಲು ಪೂರ್ವ ತಯಾರಿಗಾಗಿ ಸಭೆ ಸೇರಿ ಚರ್ಚಿಸ ತೊಡಗಿದ್ದರು. ಸಭೆಯಲ್ಲಿದ್ದ ಕೃಷ್ಣನೂ ವಿಚಾರಗಳೆಲ್ಲವನ್ನು ಆಲಿಸಿ ತನ್ನ ಅಭಿಪ್ರಾಯ ಮಂಡಿಸಲು ಅನುಮತಿ ಕೇಳಿದ. ಮಾತು ಆರಂಭಿಸಿದ ಕೃಷ್ಣ ಇಂದ್ರ ಪೂಜೆ ಮಾಡುವುದು ಬೇಡ ಎಂದು ಹೇಳಿ ಕಾರಣವನ್ನೂ ಪರ್ಯಾಯ ವಿಚಾರವನ್ನೂ ಮಂಡಿಸಲು ಆರಂಭಿಸಿದನು.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರ್



















