ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಗೆಲುವು: ಬಿಜೆಪಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆ, ರಾಜ್ಯದಲ್ಲಿ ‘ಪರಿವರ್ತನೆ’ ಖಚಿತ ಎಂದು ಪಕ್ಷದ ನಾಯಕರು ಹೇಳಿದ್ದಾರೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಗೆಲುವು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಿಂದು ಮತಗಳ ಧ್ರುವೀಕರಣದ ಕುರಿತು ಮಾತನಾಡಿದ ಸುವೇಂದು ಅಧಿಕಾರಿ, ನಂದಿಗ್ರಾಮ ಮತ್ತು ಭವಾನಿಪುರ ಕ್ಷೇತ್ರಗಳಲ್ಲಿ ಪೈಪೋಟಿ ನಡೆಯುತ್ತಿದೆ. ಮತದಾರರು ಜಾತಿ-ಧರ್ಮ ಮೀರಿ ಒಗ್ಗಟ್ಟಾಗಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಮುಸ್ಲಿಂ ಮತಗಳು ಸಂಪೂರ್ಣವಾಗಿ ಟಿಎಂಸಿಗೆ ಸೇರ್ಪಡೆಯಾಗಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಪ್ರತಿಕ್ರಿಯಿಸಿ, ಜನರು ಮಮತಾ ಬ್ಯಾನರ್ಜಿ ಅವರನ್ನು ತಿರಸ್ಕರಿಸಿದ್ದಾರೆ. ಇನ್ನೂ ಕೆಲವೇ ಗಂಟೆಗಳಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ನಾಯಕ ದಿಲೀಪ್ ಘೋಷ್, ಮತದಾನದ ರೀತಿಯಲ್ಲೇ ಎಣಿಕೆಯೂ ನಡೆಯುತ್ತಿದೆ. ಜನರು ಹೊಸ ಸರ್ಕಾರಕ್ಕೆ ಮತ ನೀಡಿದ್ದಾರೆ ಎಂದು ಹೇಳಿದರು. ಸುಭ್ರತ ಠಾಕೂರ್ ‘ಡಬಲ್ ಇಂಜಿನ್’ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದ್ದು ರಾಜು ಬಿಸ್ತಾ ಭ್ರಷ್ಟಾಚಾರ ಮತ್ತು ಅಕ್ರಮಗಳಿಗೆ ವಿರೋಧವಾಗಿ ಜನ ತೀರ್ಪು ನೀಡಿದ್ದಾರೆ ಎಂದು ಹೇಳಿದರು.
ಒಟ್ಟು 293 ಕ್ಷೇತ್ರಗಳಲ್ಲಿ ಬಿಜೆಪಿ ಬಹುಮತ ಗಡಿ ದಾಟುವತ್ತ ಸಾಗುತ್ತಿದ್ದು, ಪಕ್ಷದಲ್ಲಿ ವಿಜಯೋತ್ಸವದ ಸಂಭ್ರಮ ಮನೆಮಾಡಿದೆ. ಇತ್ತ ಟಿಎಂಸಿ ಕಚೇರಿಗಳಲ್ಲಿ ಮೌನ ವಾತಾವರಣ ಕಾಣುತ್ತಿದೆ.



















