ಭಾಗ – 493
ಭರತೇಶ ಶೆಟ್ಟಿ, ಎಕ್ಕಾರು

ಸಂಚಿಕೆ ೪೯೩ ಮಹಾಭಾರತ
ಪಿತಾಮಹ ಭೀಷ್ಮಾಚಾರ್ಯರ ಅನರ್ಘ್ಯ ಜ್ಞಾನ ಸುಧೆಯನ್ನು ಸೇವಿಸುತ್ತಾ ಇರುವಾಗ ಮತ್ತೆ ಧರ್ಮರಾಯನ ಮನದಲ್ಲಿ ಮೂಡಿದ ಜಿಜ್ಞಾಸೆ ಮೂಡಿತು. ಪರಿಹರಿಸಲು “ಅಜ್ಜಾ! ನಾನು ಈಗ ಹಸ್ತಿನಾವತಿಯ ಮಹಾರಾಜನಾಗಿ ಪ್ರಜಾಪರಿಪಾಲನೆಯ ಹೊಣೆಹೊತ್ತಿರುವೆ. ರಾಜಧರ್ಮ ಪಾಲನೆ ನನಗೆ ಕರ್ತವ್ಯವೂ ಜವಾಬ್ದಾರಿಯೂ ಆಗಿದೆ. ಹೀಗಿರಲು ಗ್ರಹಸ್ಥಾಶ್ರಮ ಧರ್ಮವನ್ನು ಪಾಲಿಸುತ್ತಾ ಬದುಕಬೇಕಾದುದು ನನಗೆ ಅನಿವಾರ್ಯ. ಹೀಗಿರಲು ತಪೋನಿಧಿಗಳಾದ ಋಷಿಗಳಂತೆ ತಪಸ್ಸನ್ನು ಮಾಡದೆ ಸಿದ್ಧಿಯನ್ನು ಪಡೆಯಲು ಸಾಧ್ಯವಿದೆಯೆ?” ಎಂದು ಕೇಳಿದನು.
ಆಗ ಪಿತಾಮಹ ಭೀಷ್ಮಾಚಾರ್ಯರು ತನ್ನ ಮೊಮ್ಮಗನ ಆಕಾಂಕ್ಷೆ ಏನಿದೆ ಎಂದು ಅರಿತುಕೊಂಡು ಸಂತಸ ಪಟ್ಟರು. “ಧರ್ಮಕುಮಾರಾ! ನಿನ್ನ ಜಿಜ್ಞಾಸೆಗೆ ಪೂರಕವಾದ ಕಥೆಯೊಂದನ್ನು ಹೇಳುತ್ತೇನೆ ಕೇಳು. ಹಿಂದೆ ಧರ್ಮಧ್ವಜನೆಂದು ಖ್ಯಾತನಾಮನಾಗಿದ್ದ ಮಹಾರಾಜನೊಬ್ಬನಿದ್ದನು. ಮಿಥಿಲೆಯ ಅರಸನಾದ ಜನಕರಾಜ ಆ ಧರ್ಮಾತ್ಮ. ಅವನು ವೇದವನ್ನು, ಮೋಕ್ಷ ಸಾಧನವನ್ನು, ರಾಜಧರ್ಮವನ್ನು ಚೆನ್ನಾಗಿ ಬಲ್ಲವನಾಗಿದ್ದನು. ರಾಜಧರ್ಮವನ್ನು ಪಾಲಿಸುತ್ತಾ, ಜಿತೇಂದ್ರಿಯನಾಗಿ ರಾಜ್ಯಪಾಲನೆ ಮಾಡುತ್ತಿದ್ದನು.
ಒಮ್ಮೆ ‘ಸುಲಭೆ’ ಎಂಬ ಸಂನ್ಯಾಸಿನಿಯೊಬ್ಬಳಿಗೆ ಜನಕರಾಜನನ್ನು ಪರೀಕ್ಷಿಸಬೇಕೆಂಬ ಬಯಕೆಯಾಯಿತು. ಮಗಾ ಧರ್ಮಜಾ, ಇವತ್ತು ನನ್ನ ಬಳಿ ಬಂದು ನೀನು ಕೇಳಿದಂತೆ ಅವಳು ಜನಕರಾಜನ ಬಳಿ ಬಂದು “ಗ್ರಹಸ್ಥಾಶ್ರಮ ಧರ್ಮವನ್ನು ಬಿಡದೆ ಸಿದ್ಧಿಯನ್ನು ಸಾಧಿಸಲು ಸಾಧ್ಯವೆ?” ಎಂದು ಕೇಳಿದ್ದಳಂತೆ.
ಆಕೆಯ ಪ್ರಶ್ನೆಗೆ ಉತ್ತರಿಸುತ್ತಾ ಜನಕರಾಜನು “ಹೇ ಸುಲಭೆಯೇ! ಮೊದಲು ನಿನ್ನನ್ನು ನೀನು ತಿಳಿದುಕೊಳ್ಳಬೇಕು. ನೀನೇನೆಂದು ಪೂರ್ಣವಾಗಿ ಅರಿತುಕೊಳ್ಳದಿದ್ದರೆ ಗ್ರಹಸ್ಥನಾಗಿದ್ದರೂ ಅಥವಾ ಸಂನ್ಯಾಸಿಯಾದರೂ ವ್ಯತ್ಯಾಸವಾಗದು. ಯಾವಾಗ ಈ ಮೂಲ ಜ್ಞಾನ ಪ್ರಾಪ್ತವಾಗುವುದೋ ಆಗ ಮಾತ್ರ ಸತ್ಯ ವೈರಾಗ್ಯ ಉಂಟಾಗುತ್ತದೆ. ಅಜ್ಞಾನವನ್ನು ಕಳೆದು ಸಂಗರಹಿತನಾಗಿ ದ್ವಂದ್ವಗಳನ್ನು ಮೀರಿ ನಿಂತಾಗಲೆ ಸಿದ್ಧಿ ಪ್ರಾಪ್ತವಾಗುವುದು. ಯಾವ ವಸ್ತುವೂ ಕತ್ತಲೆಯಲ್ಲಿದ್ದರೆ ಕಾಣದು, ಅದರ ಬಳಿ ಸಾಗಿ ಬೆಳಕು ಚೆಲ್ಲಿದರೆ ಮಾತ್ರ ದೃಶ್ಯವಾಗುವುದು.
ಹೇಗೆ ಮಣ್ಣಿಗೆ ನೀರು ಬಿದ್ದು ನೆನೆದು ಹದವಾದಾಗ ತನ್ನಲ್ಲಿ ಬಿದ್ದುಕೊಂಡಿರುವ ಬೀಜ ಮೊಳಕೆಯೊಡೆದು ಚಿಗುರಲು ಪೂರಕವಾಗುತ್ತದೋ? ಅದೇ ರೀತಿ ಕೃತ ಕರ್ಮಗಳು ಮಣ್ಣಿನಲ್ಲಿ ಬಿದ್ದ ಬೀಜಗಳಂತೆ ಉಳಿದಿರುತ್ತವೆ. ಯಾವಾಗ ನೀರು ಬಿದ್ದು ಮಣ್ಣು ಹದಗೊಂಡಾಗ ಬೀಜ ಮೊಳಕೆಯೊಡೆಯುತ್ತದೊ ಅದೇ ರೀತಿ ಕರ್ಮವೂ ಮತ್ತೊಂದು ಜನ್ಮಕ್ಕೆ ಸಿದ್ಧಗೊಂಡು ತಯಾರಾಗುತ್ತದೆ. ಈ ಸತ್ಯವನ್ನು ಜ್ಞಾನದಿಂದ ಅರಿತು ಪಾಪ ಕರ್ಮಗಳನ್ನು ಮಾಡದೆ ಅಥವಾ ಉಳಿಸದೆ ಹೋದರೆ ಬೀಜಗಳನ್ನು ಹುರಿದು ಸುಟ್ಟು ಮಣ್ಣು ಸೇರಿದಕ್ಕೆ ಸಮನಾಗುತ್ತದೆ. ಆಗ ನೀರು ಬಿದ್ದರೂ ಚಿಗುರದು. ಅಂದರೆ ಪಾಪಾತೀತನಾದರೆ ಜನ್ಮರಾಹಿತ್ಯ ಔನ್ನತ್ಯ ಪ್ರಾಪ್ತವಾಗುತ್ತದೆ. ಇದೂ ಕೂಡ ಪರಮೋಚ್ಚ ಸಿದ್ಧಿಯಾಗಿದೆ.
ಗ್ರಹಸ್ಥಾಶ್ರಮ ಮತ್ತು ಸನ್ಯಾಸ ಇಲ್ಲಿ ವ್ಯತ್ಯಾಸವಿರುವುದು ತಮ್ಮೊಂದಿಗಿರುವವರು ಮತ್ತು ವಾಸದ ರೀತಿ. ಎಲ್ಲಿ ಇದ್ದರೂ ಹೇಗೆ ಇದ್ದರೂ ತಾನು ಏನು ಮಾಡಲಿರುವವನು? ಏನು ಮಾಡುತ್ತಿದ್ದೇನೆ? ಏನು ಮಾಡಬಾರದು? ಏನು ಮಾಡಬೇಕು? ಇಷ್ಟರ ಸ್ಪಷ್ಟತೆ ಗೊತ್ತಿದ್ದು ಬದುಕುವವನಾದರೆ ಎಲ್ಲಿದ್ದರೂ ಏನೂ ಅಂತರ ಬಾರದು. ಅದಿಲ್ಲದೆ ಹೋದರೆ ಕೇವಲ ಋಷಿ ಆಶ್ರಮದಲ್ಲಿದ್ದೇನೆ ಎಂಬ ಏಕೈಕ ಕಾರಣಕ್ಕೆ ಸಿದ್ದಿಸಬೇಕಾದದ್ದು ದೊರಕದು. ಯಾಕೆಂದರೆ ಆಗ ಅದು ಆಶ್ರಮದಲ್ಲಿ ವಾಸವಾಗಿದ್ದರೂ ಆ ಸಂನ್ಯಾಸಿ ಕಂಡದ್ದನ್ನು ಬಯಸುವ, ರಾಗದ್ವೇಷಾದಿ ವಿಕಾರಗಳಿಂದ ಆವೃತನಾದವನಾಗಿದ್ದರೆ ನಿಷ್ಫಲವಾಗುತ್ತದೆ. ಹಾಗೆಂದು ಸನ್ಮಾರ್ಗಿಯಾಗಿ, ಧರ್ಮ ಅರಿತು ಬದುಕಿದರೆ ಸಿದ್ಧಿ ಸಾಧನೆ ನಿಶ್ಚಿತ. ಯಾಕೆಂದರೆ ಆಚಾರ ಧರ್ಮದ ಜೊತೆಗೆ ಕರ್ತವ್ಯ ಪಾಲನೆಯೂ ಮಾನ್ಯವಾಗುತ್ತದೆ.
ಈಗ ಸ್ವತಃ ನಾನು ತ್ರಿದಂಡ ಹಿಡಿದ ಋಷಿಯಂತಹ ಬದುಕನ್ನು ರಾಜ ದಂಡಧರನಾಗಿ ಪಾಲಿಸುತ್ತಿರುವೆ. ನನ್ನ ಮೈಯನ್ನು ಶ್ರೀಗಂಧ ಹಚ್ಚಿ ಪೂಸಿದರೂ, ಕತ್ತಿ ಹಿಡಿದು ಕೆತ್ತಿದರೂ ಒಂದೇ. ನನಗೆ ಸಂತೋಷವಾಗಲಿ ದುಃಖವಾಗಲಿ ಆಗದು. ನಾನು ರಾಜ್ಯ ಆಳುತ್ತಿದ್ದೇನೆ, ಪ್ರಜಾಪರಿಪಾಲನೆ ಮಾಡುತ್ತಿದ್ದೇನೆ ಎಂಬುವುದಷ್ಟೇ ನನಗೂ ಋಷಿಗಳಿಗೂ ಇರುವ ವ್ಯತ್ಯಾಸ. ಹೇಗೆ ಓರ್ವ ಋಷಿಗೆ ಯಾವುದರ ಮೇಲೆ ಆಸೆ ಇರುವುದಿಲ್ಲವೊ, ಹಾಗೆಯೇ ನಾನೂ ಬಂಧನಕ್ಕೆ ಕಾರಣವಾಗುವ ಗ್ರಹಸ್ಥಾಶ್ರಮದ ದೋಷಗಳನ್ನು ಪರಿತ್ಯಜಿಸಿ, ಧರ್ಮಾರ್ಥ ಕಾಮಗಳಲ್ಲಿ ವ್ಯಸ್ಥನಾಗಿ ಪ್ರಜಾಪರಿಪಾಲನೆ ಮಾಡಬೇಕಾದ ನನ್ನ ಕರ್ತವ್ಯವನ್ನಷ್ಟೆ ನಿಭಾಯಿಸುತ್ತಿದ್ದೇನೆ.
ಕೇವಲ ಋಷಿ ವೇಷ ಧರಿಸಿ, ಆಶ್ರಮವಾಸ ಮಾಡಿದ ಮಾತ್ರಕ್ಕೆ ಸಾಕಾಗುವುದಿಲ್ಲ. ಮನೋಧರ್ಮವನ್ನು ಉದ್ದೇಶಕ್ಕೆ ಪೂರಕವಾಗಿ ಸಿದ್ಧಗೊಳಿಸದ ಹೊರತು ಸಿದ್ಧಿಯ ಸಾಧನೆಯಾಗದು. ಹಾಗಿರುವಾಗ ಹೇಗೆ ಇದ್ದರೂ, ಎಲ್ಲಿ ಇದ್ದರೂ ಭಾವಗಳು ಶುದ್ದಿಯಾಗಿದ್ದರೆ ಸಾಧನೆ ಸಾಧ್ಯ ಎಂಬುವುದು ನನ್ನ ಅಭಿಪ್ರಾಯ. ಇಲ್ಲಿ ಗ್ರಹಸ್ಥಾಶ್ರಮ ಅಥವಾ ಸನ್ಯಾಸ ಜೀವನ ಎಂಬ ಅಂತರ ತೊಡಕಾಗಿ ಭವ ಬಂಧನವನ್ನು ಕಳಚಿಕೊಳ್ಳುವುದಕ್ಕೆ ತೊಂದರೆಯಾಗದು ಎಂದು ಹೇಳಬಲ್ಲೆ ಎಂದು ಜನಕರಾಜ ವಿಸ್ತಾರವಾಗಿ ಉತ್ತರ ನೀಡಿದನು.
ಮಗೂ ಧರ್ಮರಾಯ ಎಲ್ಲಿ ಹೇಗಿರಬೇಕೆಂಬ ಜ್ಞಾನವಿದ್ದು, ಬಾಹ್ಯ ಪರಿಕರಗಳನ್ನು ವ್ಯವಹಾರಕ್ಕೆ ಪೂರಕ ಎಂದಷ್ಟೇ ಬಗೆದು, ತತ್ವಜ್ಞಾನ ಮಾತ್ರ ಮೋಕ್ಷದಾಯಕ ಎಂದು ತಿಳಿದು, ಅದಕ್ಕೆ ತಕ್ಕಂತೆ ನಡೆದರೆ ಯಾವ ತೊಡಕೂ ಎದುರಾಗದು ಎಂದು ಸೂಚ್ಯವಾಗಿ ತಿಳಿಸಿದರು.
ಮುಂದುವರಿಯುವುದು…













