
ಬೆಂಗಳೂರು: ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡ್ ಬದಲಾಗಿ ಅಂಕ ನೀಡುವಂತೆ ಹೈಕೋರ್ಟ್ ನೀಡಿದ ಆದೇಶವನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದೆ.
ತುರ್ತು ವಿಚಾರಣೆಗೆ ಮನವಿ ಮಾಡುವ ಸಾಧ್ಯತೆಯಿದ್ದು ಪರೀಕ್ಷೆಯ ವೇಳೆ ತೃತೀಯ ಭಾಷೆ ಮತ್ತು ಎನ್‌ಎಸ್‌ಕ್ಯೂಎಫ್ ವಿಷಯಗಳಿಗೆ ಗ್ರೇಡ್ ನೀಡುವುದಾಗಿ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದರು. ಇದನ್ನು ಪ್ರಶ್ನಿಸಿ ಕೆಲ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ, ಹಿಂದಿನ ನಿಯಮದಂತೆ ಮೌಲ್ಯಮಾಪನ ಮಾಡಬೇಕು ಹಾಗೂ ಅಂಕಗಳನ್ನು ನೀಡಬೇಕು ಎಂದು ಸರ್ಕಾರಕ್ಕೆ ಸೂಚಿಸಿದ್ದು ಈ ಆದೇಶದ ವಿರುದ್ಧ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ.
ಕೆಎಸ್‌ಇಎಬಿ ನಿಯಮ ತಿದ್ದುಪಡಿ ಕುರಿತು ಕರಡು ಅಧಿಸೂಚನೆ ಈಗಾಗಲೇ ಪ್ರಕಟಿಸಿದ್ದರೂ, ಅದನ್ನು ಅರ್ಜಿದಾರರು ಗಮನಕ್ಕೆ ತಂದಿಲ್ಲ ಎಂದು ಸರ್ಕಾರ ಹೇಳಿದೆ. ಇದೇ ವಿಷಯದ ಪಿಐಎಲ್ ಈಗಾಗಲೇ ವಜಾಗೊಂಡಿದೆ ಎಂದು ಉಲ್ಲೇಖಿಸಿದೆ.
ಗ್ರೇಡ್ ಪದ್ಧತಿಯಲ್ಲಿ 80ಕ್ಕಿಂತ ಹೆಚ್ಚು ಅಂಕಕ್ಕೆ ‘ಎ’, 50-79ಕ್ಕೆ ‘ಬಿ’, 50ಕ್ಕಿಂತ ಕಡಿಮೆ ಅಂಕಕ್ಕೆ ‘ಸಿ’ ನೀಡಲಾಗುತ್ತದೆ. ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಗ್ರಾಮೀಣ-ನಗರ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ನೀಡಲು ಮತ್ತು ಒತ್ತಡ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ಹೈಕೋರ್ಟ್ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ.













