ಭಾಗ – 292
ಭರತೇಶ ಶೆಟ್ಟಿ , ಎಕ್ಕರ್

ಕುಂತಿ ಕಥೆ ಹೇಳಲು ಆರಂಭಿಸಿದಳು “ಹಿಂದೆ ವಿದುಲೆ ಎಂಬ ರಾಜಮಾತೆಯೊಬ್ಬಳಿದ್ದಳು. ಅವಳ ಮಗ ಸಂಜಯ ರಾಜನಾಗಿದ್ದನು. ಸಿಂಧೂ ದೇಶದ ಅರಸನ ಜೊತೆ ಯಾವುದೊ ಒಂದು ಕಾರಣದಿಂದ ಸಂಜಯನಿಗೆ ಯುದ್ದವಾಯಿತು. ಪರಿಣಾಮದಲ್ಲಿ ಸೋತು ರಣರಂಗಕ್ಕೆ ಬೆನ್ನು ಹಾಕಿ ಓಡಿಬಂದು ಅಂತಃಪುರ ಸೇರಿದನು. ನಾಚಿಕೆಯೂ ಸಂಕಟವೂ ಆಗಿ ಹಾಸುಗೆಯ ಮೇಲೆ ಕವುಚಿ ಬಿದ್ದುಕೊಂಡನು. ಸಂಗತಿ ತಿಳಿದ ರಾಜಮಾತೆ ಕ್ರುದ್ಧಳಾದಳು. ” ಛೀ ಅಲ್ಪನೆ! ಮೇಲೇಳು – ನನ್ನ ಗರ್ಭದಲ್ಲಿ ನಿನ್ನಂತಹ ರಣಹೇಡಿ ಯಾಕೆ ಹುಟ್ಟಿದೆ? ನಮ್ಮ ಶತ್ರುಗಳು ನಕ್ಕು ಕೇಕೆ ಹಾಕುವ ಕಾರಣ ನೀನಾಗಿರುವುದು ಘೋರ ಅಪಮಾನ. ಸೋಲು ಅಥವಾ ಗೆಲುವು ಇವೆರಡರಲ್ಲಿ ಒಂದು ಸಮರದ ಫಲಿತಾಂಶವಾಗ ಬೇಕು. ಸಮರಕ್ಕೆ ಮರಣ ಸಹಿತ ಎಂಬ ಅರ್ಥ ಇದೆ. ನಮ್ಮ ವಂಶ ಮಾತ್ರವಲ್ಲ ಇಡಿ ಕ್ಷತ್ರಿಯ ಕುಲದ ಮರ್ಯಾದೆಯನ್ನು ಮುರಿದು ಮುಕ್ಕಿದ ನೀನು ಮಾನವಿಲ್ಲದ ಶರೀರದಲ್ಲಿ ಪ್ರಾಣ ಉಳಿಸಿ ಯಾಕಾದರೂ ಮರಳಿ ಬಂದಿರುವೆ? ನಿನ್ನ ಈ ಕೃತ್ಯದ ಫಲವಾಗಿ ನಿನಗೆ ನರಕ ಪ್ರಾಪ್ತವಾಗಲಿದೆ. ಇನ್ನು ಬದುಕಿರಬೇಡ, ಹೋಗು ವಿಷ ಸರ್ಪದ ಹಲ್ಲು ಕೀಳುವ ಪ್ರಯತ್ನ ಮಾಡಿ ಕಚ್ಚಿಸಿಕೊಂಡಾದರು ಸಾಯುವುದು ಮೇಲು. ಯಾಕೆಂದರೆ ಆ ಸಾವಿಗೆ ಕಾರಣವಾಗುವುದು ಧೈರ್ಯ ಮತ್ತು ಸಾಹಸ. ಕನಿಷ್ಟ ಪಕ್ಷ ಪರಾಕ್ರಮ ತೋರಿ ಶೌರ್ಯದ ಸಾವಾದರೂ ಬರುತ್ತಿದ್ದರೆ ವೀರಸ್ವರ್ಗ ಪ್ರಾಪ್ತಿಯಾಗುತ್ತಿತ್ತು. ಜೀವವಿದ್ದೂ ಅಪಮಾನಿತನಾಗಿ ಬದುಕುವ ನೀಚ ಮನಸ್ಸು ನಿನಗೆ ಯಾರ ರಕ್ತದಿಂದ ಬಂತು? ನೀನು ಕುಲಗೇಡಿಯಾಗಿ ವಂಶದ ಪಿತೃಗಳಿಗೂ ಅವಮರ್ಯಾದೆ ಆರೋಪಿತವಾಗುವಂತೆ ಮಾಡಿದ ಅಯೋಗ್ಯ ನೀನಾಗಿ ಹೋಗಿರುವೆ. ದುರಾತ್ಮನಾಗಿ, ಪಾಪಿಯಾಗಿದ್ದುಕೊಂಡು ಈ ನಮ್ಮ ಶ್ರೇಷ್ಠ ವಂಶದ ಪೀಳಿಗೆಯಾದ ನಿನಗೆ ಉಸಿರೆಳೆದು ಬಿಡುವ ಅಧಿಕಾರವೂ ಇಲ್ಲ. ಓಡಿಬಂದು ರಣಹೇಡಿಯಾಗಿ ಬದುಕುವ ಕುತ್ಸಿತನಾದ ನಿನಗಿಂತ ಕಡೆಯಾದವನು ಯಾರೂ ಇಲ್ಲ. ಇಷ್ಟು ಕೆಳಗೆ ಬಿದ್ದು ಬದುಕುವುದಕ್ಕಿಂತ ವೈರಿಯ ಆಯುಧಕ್ಕೆ ಪ್ರಾಣವರ್ಪಿಸಿದ್ದರೆ ಜೀವವಿಲ್ಲದ ನಿನ್ನ ದೇಹಕ್ಕಾದರೂ ಮರ್ಯಾದೆ ಇರುತ್ತಿತ್ತು. ವಿಧಿಲಿಖಿತವೊ ಏನೋ ನೀನಿನ್ನೂ ಉಸಿರಾಡುತ್ತಿರುವೆ. ಇನ್ನು ನೀನು ಬದುಕಬೇಕಾದರೆ ಮೊದಲು ಕ್ಷಾತ್ರ ಕುಲಕ್ಕೆ ನಿನ್ನಿಂದಾದ ಕಳಂಕ ತೊಳೆದು ಶುಚಿಗೊಳಿಸಿ ಬದುಕಬೇಕು. ನಿನ್ನ ಶತ್ರು ನಿನಗಿಂತ ಬಲಿಷ್ಠನೇ? ನಿನ್ನ ಶಕ್ತಿ ಸಾಲದಾದರೆ ಆಗ ಯುಕ್ತಿಯೂ ನಿನ್ನ ಬಲವಾಗುತ್ತದೆ. ಉಪಯಾಂತರದಿಂದ ಜಯವನ್ನು ಒಲಿಸಿಕೊಳ್ಳುವ ಮಾರ್ಗ ಅನುಸರಿಸಬೇಕು.ರಾಜನು ಭೀತನಾದರೆ, ಅದು ಪ್ರಜೆಗಳಿಗೆ ತಿಳಿದರೆ ರಾಜ್ಯದಲ್ಲಿ ಅರಾಜಕತೆಯಾಗುತ್ತದೆ. ಆದುದರಿಂದ ನೀನು ಭಯಪಡಬೇಡ. ಏಳು ನಿಜವಾಗಿಯೂ ನಿನಗೆ ಜಯ ಪ್ರಾಪ್ತಿಯಾಗುತ್ತದೆ. ಮಾತೆಯ ಮಾತಿನಲ್ಲಿ ವಿಶ್ವಾಸ ತಾಳು. ನಿನ್ನ ದೌರ್ಬಲ್ಯವೇನಿದೆಯೊ ಅದನ್ನು ನಿವಾರಿಸಲು ಅನ್ಯರಿಂದ ಸಹಾಯ ಪಡೆದು ಸಂಗ್ರಹಿಸಿಕೋ. ಆಪತ್ಕಾಲದಲ್ಲಿ ಒದಗುವವನು ಮಿತ್ರ. ಮೈತ್ರಿಯ ಬಲ ಏನನ್ನೂ ಮಾಡಬಲ್ಲದು. ಮಿತ್ರರಾಜರ ಒಲವಿನಿಂದ ಗೆಲುವನ್ನು ಪಡೆದುಕೊಳ್ಳಬಹುದು. ಉಪಕಾರದ ನೆನಪು ನಿನ್ನಲ್ಲಿ ಜಾಗೃತವಾಗಿದ್ದು, ಪ್ರತ್ಯುಪಕಾರ ಮಾಡುವ ಹೊಣೆಗಾರನಾಗಿ ಬದುಕು. ಏದ್ದೇಳು, ಎದ್ದು ಹೊರಡು, ಹೊರಟು ಹೋರಾಡು, ಹೋರಾಡಿ ಸಾಧಿಸು” ಎಂದು ಮಗನನ್ನು ಉತ್ತೇಜಿಸಿದಳು. ಹೀಗೆ ಮಾತೆಯ ಪ್ರೇರಣೆ ಪಡೆದ ಮಗ ಸಂಜಯ ಸಾಕಷ್ಟು ಮಿತ್ರ ರಾಜರಲ್ಲಿ ಮೈತ್ರಿ ಸಾಧಿಸಿ ಬಲಾಢ್ಯನಾಗಿ ಜಯ ಸಾಧಿಸಿದನು. ಚರಿತ್ರೆಯ ಈ ಕಥಾನಕದ ಹೆಸರು “ಜಯ” ಎಂದು. ವೀರಾವೇಶ – ಶಕ್ತಿ – ಯುಕ್ತಿಯ ಸಮ್ಮಿಲನದ ಈ ಕಥಾಶ್ರವಣ ಮಾಡುವುದರಿಂದ ಕ್ಷತ್ರಿಯರಿಗೆ ವೀರೋಚಿತ ಗುಣಧರ್ಮ ಜಾಗೃತಿಯಾಗಿ ಜಯ ಪ್ರಾಪ್ತಿಯಾಗುತ್ತದೆ. ಕೃಷ್ಣಾ! ಈ ಕಥೆಯನ್ನು ನನ್ನ ಮಕ್ಕಳಿಗೆ ಹೇಳು – ನಾನು ಹೇಳಿದೆನೆಂದು ಪ್ರತ್ಯೇಕವಾಗಿ ಹೇಳಲು ಮರೆಯಬೇಡ. ” ಎಂದು ಕುಂತಿ ನುಡಿದಳು.
ಶ್ರೀ ಕೃಷ್ಣನು “ಅಮ್ಮಾ! ಖಂಡಿತವಾಗಿಯೂ ಹೇಳುತ್ತೇನೆ. ಸಮಯೋಚಿತವೂ, ಕ್ಷತ್ರಿಯರಿಗೆ ಸ್ಪೂರ್ತಿದಾಯಕವೂ ಆಗಿರುವ “ಜಯ”ವನ್ನು ನಿನ್ನ ಮುಖದಿಂದ ಕೇಳಿ ನಾನೂ ಕೃತಾರ್ಥನಾದೆನು. ಧರ್ಮರಾಜಾದಿಗಳಿಗೆ ಅಗತ್ಯವಾಗಿ ಇದನ್ನು ಹೇಳುತ್ತೇನೆ. ಅವರೂ ಈ ಕಥಾನಕವನ್ನು ತಿಳಿದು ಕರ್ತವ್ಯಶೀಲರಾಗಲಿ ಎಂದು ಹಾರೈಸುತ್ತೇನೆ” ಎಂದು ಕೃಷ್ಣ ವಚನವಿತ್ತು ಕುಂತಿದೇವಿಯ ಅಪ್ಪಣೆ ಪಡೆದು ನಮಸ್ಕರಿಸಿ ಹೊರಬಂದನು.
ಕೃಷ್ಣ ಹೊರ ಬಂದಾಗ ವಿದುರ ಕೃಷ್ಣನಿಗಾಗಿ ಕಾದು ಕುಳಿತಿದ್ದನು. ಮತ್ತೆ ಕೃಷ್ಣ ಮತ್ತು ವಿದುರ ಮಾತುಕತೆಯಲ್ಲಿ ನಿರತರಾದರು. ವಿದುರ ಕೃಷ್ಣನಲ್ಲಿ ತನ್ನ ಮನದ ಸಂದೇಹ ಕೇಳತೊಡಗಿದನು. “ದೇವಾ! ನೀನು ಸಂಧಿಕಾರ್ಯಕ್ಕಾಗಿ ಬಂದಿರುವೆ. ಆದರೆ ಆ ದುರ್ಯೋಧನಾದಿಗಳು ನಿನ್ನ ಹಿತೋಪದೇಶ ಕೇಳಿ ಒಪ್ಪುವರೆಂಬ ವಿಶ್ವಾಸ ನಿನಗಿದೆಯೆ? ಹಾಗೊಮ್ಮೆ ಒಪ್ಪದೆ ತಿರಸ್ಕರಿಸಿದರೆ ನಾಳಿನ ದಿನ ಲೋಕದಲ್ಲಿ ಶ್ರೀಕೃಷ್ಣ ಸ್ವಯಂ ದೇವರೇ ಆಗಿದ್ದರೂ, ಸಂಧಾನ ಮಾಡಿಸುವಲ್ಲಿ ವಿಫಲನಾದ ಎಂಬ ಅಪವಾದ ಉಳಿದು ಹೋಗಲು ಅವಕಾಶ ನೀಡಿದಂತಾಗುತ್ತದೆ” ಎಂದು ತರ್ಕಬದ್ದವಾಗಿ ಹೇಳಿದನು.
ಕೃಷ್ಣ ನಸುನಗುತ್ತಾ “ವಿದುರಾ, ನೀನು ಧರ್ಮಾತ್ಮನಾಗಿರುವೆ. ಧರ್ಮ ಸಮ್ಮತವಾದ ತರ್ಕವನ್ನು ಮಾಡುತ್ತಿರುವೆ. ದುರ್ಯೋಧನ ಹಾಗೂ ಅವನ ಬಳಗದ ದೌರ್ಜನ್ಯ ಮತ್ತು ಛಲವನ್ನು ನಾವು ಚೆನ್ನಾಗಿ ಬಲ್ಲವರು. ಶಾಂತಿಯ ಸಂಧಾನ ಪ್ರಕ್ರಿಯೆಗೆ ದುರ್ಯೋಧನ ಸಹಮತ ನೀಡಲಾರನೆಂಬುದೂ ತಿಳಿದಿದೆ. ಆದರೂ ಈ ಸಂಗ್ರಾಮಕ್ಕೆ ಪ್ರೇರಕರಾದರೆ ಪಾಂಡವ ಕೌರವರ ಕಲಹದಿಂದ ಆರ್ಯಾವರ್ತದ ಚತುರಂಗ ಸೇನೆಯೂ ಅನಗತ್ಯವಾಗಿ ಮೃತ್ಯುಪಾಶದಲ್ಲಿ ಬೀಳಲಿದೆ. ಅಕಾರಣವಾಗಿ ತಾಯಿಗೆ ಪುತ್ರ, ಸತಿಗೆ ಪತಿ, ಸುತಗೆ ಪಿತನಾಗಿರುವ ಅದೆಷ್ಟು ಯೋಧರ ಮಾರಣ ಹೋಮವಾಗಿ ಲೋಕದೆಲ್ಲೆಡೆ ಅನಾಥರಾಗುವವರೆಷ್ಟು? ಆ ವೇದನೆಯ ನೋವು ಉಣ್ಣಬೇಕಾದ ಅಮಾಯಕರೆಷ್ಟು? ಅವರ ದೋಷವಾದರೂ ಏನಿದೆ ಹೇಳು? ಹಾಗಾಗಿ ಈ ದುಷ್ಕೃತ್ಯವನ್ನು ತಡೆಯುವಲ್ಲಿ ನಿಷ್ಪಕ್ಷಪಾತನಾಗಿ ಲೋಕಕ್ಷೇಮದ ದೃಷ್ಟಿಯಿಂದ ಪ್ರಯತ್ನ ಮಾಡಬೇಕಾಗಿದೆ. ಯಶಸ್ಸು ಪ್ರಾಪ್ತವಾಗದೆ ಹೋದರೂ ಸತ್ಕಾರ್ಯಕ್ಕೆ ಶ್ರಮಿಸುವುದರಿಂದಲೂ ಪುಣ್ಯ ಪ್ರಾಪ್ತವಾಗುತ್ತದೆ. ಮಾತ್ರವಲ್ಲ ದುರ್ಯೋಧನ ಒಪ್ಪದೆ ಹೋದರೆ ಆತನೇ ಈ ದೋಷಕ್ಕೆ ಬಾಧ್ಯನಾಗಿ ಅಪವಾದಕ್ಕೆ ಗುರಿಯಾಗಿ, ಅಪರಾಧಕ್ಕೆ ಶಿಕ್ಷೆ ಅನುಭವಿಸುವಂತಾಗುತ್ತದೆ. ಮಾತ್ರವಲ್ಲ ಯಾರಿಂದಾಗಿ ಈ ಅನರ್ಥ ಸಂಭವಿಸಿತು ಎಂಬ ಸ್ಪಷ್ಟತೆಯೂ ಅನಾವರಣಗೊಳ್ಳುತ್ತದೆ. ಪರಿಣಾಮದಲ್ಲಿ ನಾನು ಜೊತೆಗೆ ಪಾಂಡವರು ನಿರ್ದೋಷಿಗಳಾಗಿ ಲೋಕಾಪವಾದದಿಂದ ಮುಕ್ತಿಯನ್ನು ಹೊಂದುತ್ತೇವೆ. ಒಂದೊಮ್ಮೆ ನಾನೇನಾದರೂ ಯಶಸ್ಸನ್ನು ಸಾಧಿಸಿ ಕೌರವ ಶಾಂತಿ ಸಂಧಿಗೆ ಒಪ್ಪಿದರೆ ಅದ್ಬುತವಾದ ಒಂದು ಪವಿತ್ರ ಚರಿತ್ರೆಯ ಸೃಷ್ಟಿಯಾಗುತ್ತದೆ. ಕೌರವನಿಗೂ ಸತ್ಕೀರ್ತಿ ಪ್ರಾಪ್ತವಾಗುತ್ತದೆ. ಹಾಗಾಗಿ ಪರಿಣಾಮ ಏನೇ ಆಗುವುದಿದ್ದರೂ ಇದು ನಾನು ಮಾಡಲೇಬೇಕಾದ ಧರ್ಮಕಾರ್ಯ. ನನಗೆ ಇಲ್ಲಿ ಜಯ ಅಪಜಯ ಎಂಬ ಪರಿಣಾಮ ಒದಗದು. ಕಾರಣ ಇದು ಅನರ್ಥ ತಡೆಯುವ ಪ್ರಾಮಾಣಿಕ ಪ್ರಯತ್ನ” ಎಂದು ನುಡಿದನು. ಆಲಿಸುತ್ತಿದ್ದ ವಿದುರನಿಗೂ ತೃಪ್ತಿಯಾಯಿತು. ನಂತರ ಬೇರೆ ಬೇರೆ ವಿಚಾರದಲ್ಲಿ ಮಾತನಾಡುತ್ತಾ ರಾತ್ರಿಯ ಕಾಲ ಕಳೆಯತೊಡಗಿದರು. ಸಂಧಾನ ಕಾರ್ಯ ನಡೆಸುವ ಯೋಜನೆಯ ಸಿದ್ಧತೆಯಲ್ಲಿ ನಿರತರಾಗಿದ್ದಾರೆ.
ಮುಂದುವರಿಯುವುದು…













