27.7 C
Udupi
Saturday, April 25, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 502

ಭರತೇಶ ಶೆಟ್ಟಿ, ಎಕ್ಕಾರು

ಸಂಚಿಕೆ ೫೦೨ ಮಹಾಭಾರತ

ವ್ಯಾಸರು ಗತ ಕಥನವನ್ನು ವಿವರಿಸತೊಡಗಿದರು. “ಹಿಂದೆ ಎಷ್ಟೋ ರಾಜ ಮಹಾರಾಜರು ಸಾಕಷ್ಟು ವಿಶೇಷ ಯಾಗಗಳನ್ನು ಮಾಡಿ ಪೂರೈಸಿದ್ದಾರೆ. ಆದರೂ ರಾಜ ಮರುತ್ತ ಬದುಕಿ ಬಾಳಿದ್ದ ಆ ಕಾಲದಲ್ಲಿ ಯಜ್ಞ ಯಾಗಗಳನ್ನು ಮಾಡಿಸುವುದರಲ್ಲಿ ಸೂರ್ಯ ವಂಶಜ ರಾಜಾ ಮರುತ್ತನು ಅಗ್ರಸ್ಥಾನಿಯಾಗಿದ್ದನು. ಅವನಿಗೊಮ್ಮೆ ವಿಶೇಷವಾದ ಒಂದು ಯಾಗ ಮಾಡಿಸಬೇಕು ಎಂಬ ಪ್ರೇರಣೆಯಾಯಿತು. ಅದನ್ನು ಕೈಗೂಡಿಸಲು ಆಚಾರ್ಯ ಬ್ರಹಸ್ಪತಿಯವರ ಬಳಿ ಹೋಗಿ ತನ್ನ ವಾಂಛಿತ ಆಶಯವನ್ನು ಕೇಳಿಕೊಂಡನು. ಆಗ ಆಚಾರ್ಯ ಬ್ರಹಸ್ಪತಿಯವರು ಏನು ಯೋಚನೆ ಮಾಡಿದರೋ! ರಾಜ ಈ ಯಾಗ ಮಾಡಿಸುವಷ್ಟು ಆರ್ಥಿಕ ಪ್ರಾಬಲ್ಯ ಅಥವಾ ಧನಬಲ ಹೊಂದಿಲ್ಲವೆಂದೋ, ತಾನು ಒಪ್ಪದಿದ್ದರೆ ಆತನ ಸಂಕಲ್ಪ ಹೇಗೆ ಪೂರೈಸುತ್ತಾನೆ ಎಂಬುವುದನ್ನು ಪರೀಕ್ಷಿಸಬೇಕೆಂದೋ ಹೀಗೆ ಏನೋ ಕಾರಣ ಅವರ ಮನ ಮಾಡಿರಬಹುದು. ಅಂತೂ ರಾಜಾ ಮರುತ್ತನ ಯಾಗ ಮಾಡಿಸುವ ಆಶಯವನ್ನು ತಿರಸ್ಕರಿಸಿಬಿಟ್ಟರು.

ಆದರೆ ರಾಜಾ ಮರುತ್ತನಿಗೆ ನಿರ್ಧರಿಸಿರುವ ಯಾಗ ಮಾಡಿಸಲೇ ಬೇಕೆಂಬ ಆಸೆ ಬಲಗೊಳ್ಳುತ್ತಾ ಹೋದ ಕಾರಣ, ಬ್ರಹಸ್ಪತಿ ಆಚಾರ್ಯರು ಮಾಡದಿದ್ದರೆ ಈ ಯಾಗ ಯಾರು ಮಾಡಿಯಾರು? ಎಂಬ ಬದಲಿ ವ್ಯವಸ್ಥೆಯ ಚಿಂತೆ ಪರ್ಯಾಯ ದಾರಿಯನ್ನು ಹುಡುಕುವಂತೆ ಮಾಡಿತು. ಹೀಗಿರುವಾಗ ಮಹರ್ಷಿ ನಾರದರು ಮರುತ್ತನ ಬಳಿ ಬಂದು “ಅಯ್ಯಾ ರಾಜನೇ! ನೀನು ಮನಮಾಡಿರುವುದು ಲೋಕ ಕಲ್ಯಾಣಾರ್ಥವಾದ ಯಾಗ ವಿರಚಿಸಲು, ಆ ಕಾರ್ಯವನ್ನು ಬ್ರಹಸ್ಪತಿ ಆಚಾರ್ಯರ ತಮ್ಮನಾದ ‘ಸಂವರ್ತ’ ನಿಂದ ಮಾಡಿಸಬಹುದು ಎಂಬ ಮಾರ್ಗದರ್ಶನ ಮಾಡಿದರು.

ತಮ್ಮನಾದರೂ ಸಂವರ್ತ ಮತ್ತು ಅಣ್ಣ ಆಚಾರ್ಯ ಬ್ರಹಸ್ಪತಿಯ ಮಧ್ಯೆ ಸಂಬಂಧ ಅಷ್ಟಕಷ್ಟೆ ಇತ್ತು. ಸಂವರ್ತ ಆ ಕಾಲದಲ್ಲಿ ಅವಧೂತರಾಗಿದ್ದರು. ಅವಧೂತ ಎಂದರೆ ಯಾವುದೇ ಆಸೆ ಆಕಾಂಕ್ಷೆಗಳನ್ನು ಹೊಂದಿರದೆ ಜನರಿಗೆ ತತ್ವಶಾಸ್ತ್ರ ಬೋಧನೆ ಮಾಡುತ್ತಾ ಲೋಕಕಲ್ಯಾಣಕ್ಕಾಗಿ ದುಡಿಯುವವರು ಎಂದು ಹೇಳಬಹುದು. ಈ ಪದದ ಅರ್ಥ ಅಂತಹ ವ್ಯಾಖ್ಯಾನವನ್ನು ವಿಂಗಡಿಸಿ ವಿವರಿಸುತ್ತದೆ. “ಅ” ಎಂದರೆ ಆಶಾಪಾಶಗಳಿಂದ ಮುಕ್ತನಾಗಿದ್ದು ಆದಿ ಅಂತ್ಯದವರೆಗೂ ನಿರ್ಮಲನಾಗಿ ಇರುವವನು.
“ವ” ಎಂದರೆ ವರ್ತಮಾನ ಕಾಲದಲ್ಲಿದ್ದು, ಅದಕ್ಕನುಕೂಲಕರ ವಿಚಾರವಾದಿ ಎನ್ನಬಹುದು. ವಾಸನೆಯಿಂದ ಪಾರಾದವನಾಗಿದ್ದು, ನಿರಾಮಯನಾಗಿದ್ದು, ಪ್ರಸಕ್ತ ಬದುಕು ಹೇಗಿದೆ, ಏನು ಮಾಡಿದರೆ ಸರಿ? ಎಂದು ತರ್ಕಿಸಿ ಬೋಧಿಸಬಲ್ಲ ಸಮರ್ಥನು.
“ಧೂ” ಶರೀರ ಧೂಳಿನಿಂದ ಮುಳುಗಿದ್ದರೂ, ಮನಸ್ಸು ಅಶುಚಿಯನ್ನು ಕಳಕೊಂಡಿರುವಂತಹ ಅಂದರೆ ನಿರ್ಮಲಾಂತಃಕರಣಿ ಎಂದು ಹೇಳಬಹುದು.
“ತ” ಎಂದರೆ ತತ್ವ ಚಿಂತನೆ ಮಾಡುವವನು, ಚಿಂತೆಯಿಂದ ಮುಕ್ತನಾದವನು, ಅಜ್ಞಾನದ ಅಹಂಕಾರದಿಂದ ಮುಕ್ತಿಯನ್ನು ಹೊಂದಿದರವನು ಎಂದು ಅರ್ಥ ಬರುತ್ತದೆ.

ಈ ಎಲ್ಲಾ ಗುಣಗಳು “ಸಂವರ್ತ” ನಲ್ಲಿದ್ದು ಅದರ ಪ್ರತಿಪಾದಿಯಾಗಿದ್ದನು‌. ರಾಜಾ ಮರುತ್ತನ ನಿವೇದನೆಯನ್ನು ಆಲಿಸಿದನು‌. ನಂತರ ವಿವೇಚಿಸಿ “ಆಚಾರ್ಯ ಬ್ರಹಸ್ಪತಿಯವರು ಆಸಕ್ತಿ ತೋರುವಲ್ಲಿ ನಿಧಾನಿಸಿದ ಅಥವಾ ಅವರು ಮಾಡದೆ ತೊರೆದ ಯಾಗವಿದು. ಒಬ್ಬನಲ್ಲಿ ಕೇಳಿ ಆತ ಮಾಡಲೊಪ್ಪದ ಯಾಗವನ್ನು ಬದಲಿಗನಾಗಿ ನಾನು, ಅವರ ತಮ್ಮನಾಗಿ ಮಾಡಲಾರೆ” ಎಂದು ನಿಷ್ಠುರವಾಗಿ ಸಂವರ್ತ ತಳ್ಳಿಹಾಕಿದನು‌.

ರಾಜ ಮರುತ್ತನು ಹೇಗೋ ಶತ ಪ್ರಯತ್ನದಿಂದ ಸಂವರ್ತನ ಮನವೊಲಿಸಿ ಒಪ್ಪಿಸಿದನು. ಕೊನೆಗೆ ಹೇಗೋ ಒಡಂಬಟ್ಟು ಲೋಕ ಕಲ್ಯಾಣಕರ ಸದಾಶಯದ ಕಾರ್ಯ ಎಂಬ ನೆಲೆಯಲ್ಲಿ ಆದೀತು ಎಂದು ಸಮ್ಮತಿ ಸೂಚಿಸಿದರು. “ಅಯ್ಯಾ ಮರುತ್ತ ರಾಜನೇ, ನೀನು ಬಯಸಿರುವ ಯಾಗ ಮಾಡಬೇಕಾದರೆ ಹೇರಳವಾದ ದ್ರವ್ಯ ಸಂಪತ್ತಿನ ಅಗತ್ಯವಿದೆ. ನೀನು ಪರಮೇಶ್ವರ ಶಿವ ಪರಮಾತ್ಮನ ತಪಸ್ಸು ಮಾಡಿ ಮೆಚ್ಚಿಸಿ ವರರೂಪದಲ್ಲಿ ಯಾಗ ಸಮಾಪ್ತಿಗೆ ಬೇಕಾಗುವಷ್ಟು ವಿಪುಲವಾದ ದ್ರವ್ಯವನ್ನು ಸಂಪಾದಿಸಿಕೋ” ಎಂದು ಸಲಹೆ ನೀಡಿದರು. ಅಂತೆಯೆ ನಡೆದುಕೊಳ್ಳಲು ಸಿದ್ಧನಾದ ರಾಜ ಮರುತ್ತ ಶಿವ ಪರಮಾತ್ಮನನ್ನು ತಪಸದಸಿನಲ್ಲಿ ಮೆಚ್ಚಿಸಿ ಯಾಗ ಸಂಬಂಧಿ ತನ್ನ ಆಸೆಯನ್ನು ವಿವರಿಸಿ ಬೇಕಾಗುವಷ್ಟು ಹೇರಳವಾದ ದ್ರವ್ಯ ಸಂಪತ್ತನ್ನು ಪಡಕೊಂಡನು. ಹಿಮಾಲಯದ ತಪ್ಪಲಲ್ಲಿ ಯಾಗ ಮಾಡಿಸುವುದೆಂದು ತೀರ್ಮಾನವಾಯಿತು. ಈ ವಿಚಾರ ತಿಳಿದ ಆಚಾರ್ಯ ಬ್ರಹಸ್ಪತಿ ಕೋಪಗೊಂಡು ತನ್ನನ್ನು ಬಿಟ್ಟು ಅನ್ಯರಿಂದ ಈ ಯಾಗ ಮಾಡಿಸಲು ಬಿಡಬಾರದು ಎಂಬ ನಿರ್ಧಾರಕ್ಕೆ ಬಂದರು. ನೇರವಾಗಿ ಇಂದ್ರನಲ್ಲಿಗೆ ಹೋಗಿ “ಹೇ ದೇವರಾಜನೇ ನಾನು ಮಾಡಲಾರೆ ಎಂದು ಕೈಬಿಟ್ಟ ಯಾಗವನ್ನು ಸಂವರ್ತ ಮಾಡಲೊಪ್ಪಿದ್ದಾನೆ. ಹಾಗಾಗಬಾರದು. ಈ ಯಾಗ ಸಾಗುವುದಾದರೆ ಅದನ್ನು ನಾನೇ ಮಾಡಿ ಪೂರೈಸುವಂತೆ ರಾಜ ಮರುತ್ತನಿಗೆ ನೀನು ತಿಳಿಸಬೇಕು ಎಂದು ಕೇಳಿಕೊಂಡರು.

ಆಗ ಇಂದ್ರದೇವ ಅಗ್ನಿಯನ್ನು ಕರೆದು ” ಹೇ ಅಗ್ನಿಯೇ! ನೀನು ಮರುತ್ತನಲ್ಲಿ ಇಂದ್ರನಿಂದ ಕಳುಹಿಸಲ್ಪಟ್ಟು ನಾನು ಬಂದಿದ್ದೇನೆ. ನೀನು ‘ಸಂವರ್ತ’ ನಿಂದ ಯಾಗ ಮಾಡಿಸಬಾರದು. ಬ್ರಹಸ್ಪತಿಯವರಿಂದಲೇ ಮಾಡಿಸಬೇಕು” ಎಂದು ಸುದ್ಧಿ ತಲುಪಿಸಿದನು.

ಆಗ ಅಗ್ನಿ ಹಾಗೆಯೇ ಆಗಲಿ ಎಂದು ಒಪ್ಪಿ ರಾಜಾ ಮರುತ್ತನಲ್ಲಿಗೆ ಬಂದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page