28.2 C
Udupi
Thursday, April 30, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 24

ಭರತೇಶ್ ಶೆಟ್ಟಿ, ಎಕ್ಕಾರ್

ಆಕಸ್ಮಿಕ ಕಿರುಚಾಟಕ್ಕೆ ಕತ್ತಲೆಯಲ್ಲಿ ಪುರೂರವ ಎದ್ದು ಓಡಿ ಬರುತ್ತಿದ್ದಂತೆ ದೇವದೂತರು ಬೆಳಕು ಚೆಲ್ಲಿದರು. ಪುರೂರವ ನಗ್ನನಾಗಿ ಎಲ್ಲರೆದುರು ಕಾಣಿಸಿಕೊಂಡನು. ಅದೃಶ್ಯರಾದ ದೇವದೂತರು “ಒಪ್ಪಂದ ಮುರಿಯಲ್ಪಟ್ಟಿದೆ ಊರ್ವಶಿ, ನೀನಿನ್ನು ಸ್ವರ್ಗವೇರಬಹುದು” ಎಂದು ಅಶರೀರವಾಣಿ ನುಡಿದರು. ಊರ್ವಶಿಯೂ ಜಾಗೃತಳಾಗಿ ಪುರೂರವನಿಗೆ ಅಶರೀರವಾಣಿ ಕೇಳಿದೆಯಲ್ಲ. ನಮ್ಮ ಒಪ್ಪಂದವಾದಂತೆ ನಾನಿನ್ನು ಇಲ್ಲಿ ಇರಲಾಗದು. ಎಂದು ಹೇಳಿ ಸ್ವರ್ಗವೇರಿದಳು.

ಊರ್ವಶಿ ಇಲ್ಲದೆ ಪುರೂರವ ಏಕಾಂಗಿಯಾಗಿ ವಿಲಪಿಸತೊಡಗಿದನು. ವಿರಹ ವೇದನೆ ತಾಳಲಾರದೆ ಸರ್ವ ವಿಚಾರಗಳಲ್ಲೂ ನಿರಾಸಕ್ತನಾದ. ರಾಜ್ಯ, ರಾಜಕೀಯ ಯಾವುದೂ ಬೇಡವಾಯಿತು. ಊರ್ವಶಿ ಸಿಕ್ಕಿದ್ದ ಕಾಡಿಗೆ ಓಡಿ ಹೋದನು. ಕಾನನದಲ್ಲಿ ಅಲೆದಾಡಿದನು. ನಿರಾಹಾರನಾಗಿ ಅವಳನ್ನೇ ಕೂಗುತ್ತಾ ಅತ್ತು, ಬಸವಳಿದು ಅರಣ್ಯವಾಸಿಯಾದನು. ಹೀಗೆ ಬಹುದಿನಗಳು ಸಾಗಲು ಊರ್ವಶಿ ತನ್ನ ಗೆಳತಿಯರೊಂದಿಗೆ ಅದೇ ಕಾಡಿನ ಮಧ್ಯದ ಸರೋವರಕ್ಕೆ ಬಂದಾಗ ಮತ್ತೆ ಕಾಣ ಸಿಗುತ್ತಾಳೆ. ಪುರೂರವನಿಗೆ ಬಹಳ ಸಂತೋಷವಾಗಿ ಅವಳ ಬಳಿ ಸಾರಿದನು. ಮತ್ತೆ ಸ್ವರ್ಗದಿಂದ ಮರಳಿ ಭೂಮಿಗೆ ಬಂದಿರುವ ಊರ್ವಶಿ ತನ್ನೊಂದಿಗಿರಬೇಕೆಂದು ಬೇಡಿ ಅತ್ತು ಗೋಗರೆದನು. ಕೃಶ ಶರೀರದ ಬಡಪಾಯಿಯಾಗಿದ್ದ. ಕ್ಷೌರ, ಸ್ನಾನದಿಗಳಿಲ್ಲದೆ ಭಿಕ್ಷುಕನಿಗಿಂತಲೂ ಕಡೆಯಾಗಿದ್ದ ಪುರೂರವನನ್ನು ನೋಡಿ ಅಪಹಾಸ್ಯ ಮಾಡಿ ಪರಿಪರಿಯಾಗಿ ನಿಂದಿಸಿದರೂ ಬೇಸರಿಸದೆ, ಕೋಪಗೊಳ್ಳದೆ ತನ್ನ ಪ್ರೇಮ ನಿವೇದನೆ ಪ್ರಕಟಿಸುತ್ತಲೇ ಇದ್ದನು. ಪುರೂರವನಿಗೆ ಸಮಾಧಾನ ಹೇಳಿ, ತಾನು ಸ್ವರ್ಗದ ದಿವ್ಯಾಂಗನೆ ಭೂಲೋಕದಲ್ಲಿ ಇರತಕ್ಕವಳಲ್ಲ ಎಂದು ವಿವರಿಸಿ ಹೇಳಿದಳು. ಆದರೂ ಕೇಳದ ಪುರೂರವ ಅನುಭವಿಸುತ್ತಿರುವ ತನ್ನ ವಿರಹದುರಿಯ ತಾಪದ ಬೇಗುದಿಯನ್ನೂ, ಆಕೆಯ ಮೇಲಿನ ಪವಿತ್ರ ಪ್ರೇಮವನ್ನೂ ನೋಡಿ ಊರ್ವಶಿಗೆ ಆತನ ನಿಜ ಸ್ಥಿತಿ ಅರ್ಥವಾಯಿತು. ಹೆಣ್ಣಲ್ಲವೇ ಊರ್ವಶಿ, ಮರುಗಿತು ಮನಸ್ಸು. ಕೆಲಕಾಲವಾದರೂ ದಾಂಪತ್ಯ ನಡೆಸಿದ ಸ್ಮರಣೆಯಾಗಿ ಪುರೂರವನಿಗೊಂದು ಉಪಾಯ ಹೇಳಿದಳು. ನಾಳೆ ಇದೇ ಸರೋವರಕ್ಕೆ ಕೆಲವು ದೇವತೆಗಳು ಬರುತ್ತಾರೆ. ಅವರನ್ನು ಪ್ರಾರ್ಥಿಸು. ಅವರ ನಿರ್ದೇಶನದಂತೆ ನಡೆದು ನೀನೇ ಸ್ವರ್ಗಕ್ಕೆ ಬಾ ಎಂದು ಹೇಳಿ ಹೊರಟು ಹೋದಳು.

ಮರುದಿನಕ್ಕಾಗಿ ಕಾಯುತ್ತಾ ಅಲ್ಲೇ ಕುಳಿತನು ಪುರೂರವ. ಊರ್ವಶಿ ಹೇಳಿದಂತೆಯೇ ದೇವತೆಗಳು ಬಂದರು. ಆಗ ಅವರನ್ನು ಬಹುವಿಧದಿಂದ ಸ್ತುತಿಸಿ, ಪ್ರಾರ್ಥಿಸಿ ತನ್ನ ಅಭೀಷ್ಟ ಪೂರೈಸಬೇಕೆಂದು ಬೇಡಿಕೊಂಡನು. ಅವರು ಮಹಾರಾಜ ನೀನು ಧರಿಸಿರುವ ಈ ನಶ್ವರ ಶರೀರ ಪಾರ್ಥಿವವಾದುದು. ದೇವಲೋಕ ಸೇರಲು ದಿವ್ಯ ಶರೀರ ಪ್ರಾಪ್ತಿಯಾಗಬೇಕು. ಇಗೋ ಈ ಅಗ್ನಿಯಿಂದ ಯಜ್ಞ ಮಾಡಿ ದಿವ್ಯ ಶರೀರ ಪಡೆದು ಸ್ವರ್ಗಕ್ಕೆ ಬರಬಹುದು ಎಂದು ಹೇಳಿ ದಿವ್ಯಾಗ್ನಿಯನ್ನು ನೀಡಿ ಹೊರಟು ಹೋದರು. ಅವರಿತ್ತ ಮಾರ್ಗದರ್ಶನದಂತೆ ಯಜ್ಞ ನೆರವೇರಿಸಲು ಕಾನನ ತೊರೆದು ರಾಜ್ಯ ಸೇರಿದನು. ರಾಜಾ ಪುರೂರವ ದೇವತೆಗಳು ತನಗಿತ್ತ ದಿವ್ಯ ಅಗ್ನಿಯಿಂದ ವಿದ್ಯುಕ್ತವಾಗಿ ಯಜ್ಞ ಮಾಡಿಸಿ, ದಿವ್ಯ ಶರೀರಧಾರಣೆ ಹೊಂದಿದವನಾಗಿ ಸ್ವರ್ಗವೇರಿದನು.

ಪುರೂರವ – ಊರ್ವಶಿಯರ ಪುತ್ರ ‘ಆಯು’ ಚಂದ್ರವಂಶದ ಉತ್ತರಾಧಿಕಾರಿಯಾಗಿ ಧರ್ಮಿಷ್ಟ ರಾಜನಾಗಿ ಪ್ರಜಾಪರಿಪಾಲನೆ ಮಾಡುತ್ತಿದ್ದನು. ‘ಸ್ವರ್ಭಾನವಿ’ ಎಂಬಾಕೆಯನ್ನು ವರಿಸಿದ. ದಾಂಪತ್ಯ ಫಲ ದ್ಯೋತಕವಾಗಿ ಹುಟ್ಟಿದ ಕುಮಾರನೆ ನಹುಷ.

ನಹುಷ ಸುಪ್ರಸಿದ್ದ ರಾಜನಾಗಿ ಮಹಾನ್ ಚರಿತ್ರೆಯನ್ನು ತನ್ನ ಬದುಕಿನ ಮುಖಾಂತರ ಸೃಷ್ಟಿಸಿದ ಮಹಾರಾಜ. ಈತ ವಿರಜೆಯನ್ನು ವರಿಸಿ ಯತಿ, ಯಯಾತಿ, ಆಯತಿ ಮತ್ತು ಅಯತಿ ಎಂಬ ನಾಲ್ವರು ಪುತ್ರರನ್ನು ಪಡೆದ. ಯತಿಯು ರಾಜ್ಯ ವೈಭೋಗದಿಂದ ವಿರಕ್ತನಾದುದರಿಂದ ಯಯಾತಿ ಅರಸನಾದನು.

ಮಹಾರಾಜನಾದ ಯಯಾತಿಯು ಒಮ್ಮೆ ಬೇಟೆಗೆ ಹೋದಾಗ ತನ್ನ ಅನುಚರರನ್ನೆಲ್ಲಾ ಹಿಂದೆ ಬಿಟ್ಟು ಬಹುದೂರ ಸಾಗಿದ್ದನು. ಮುಸ್ಸಂಜೆಯ ಹೊತ್ತು. ಕತ್ತಲೆ ಆವರಿಸಲಾರಂಭಿಸಿತ್ತು. ಅಷ್ಟರಲ್ಲಿ ಹೆಣ್ಣೊಬ್ಬಳ ಆರ್ತನಾದ ಕೇಳಿ ಬಂತು. ಸ್ವರ ಕೇಳಿದತ್ತ ಧಾವಿಸಿದರೆ ಕೊಳದಲ್ಲಿ ಕನ್ಯೆಯೊಬ್ಬಳು ಆರ್ತಳಾಗಿ ದುಃಖಿಸಿ ಸಹಾಯಕ್ಕಾಗಿ ರೋದಿಸುತ್ತಿದ್ದಳು. ಆಕೆಯನ್ನು ಕುರಿತು ಯಾಕೆ ನೀರಿನಲ್ಲಿ ಶರೀರ ಮುಳುಗಿಸಿ ನಿಂತಿರುವೆ? ಎಂದು ಕನ್ಯೆಯನ್ನುದ್ದೇಶಿಸಿ ಕೇಳಿದನು. ಆಕೆ ವಿವಸ್ತ್ರಳಾಗಿದ್ದು ನೀರಿನಿಂದ ಮೇಲೆ ಬರಲಾಗದ ಅಸಹಾಯಕ ಸಂಕಷ್ಟವನ್ನು ಹೇಳಿಕೊಂಡಳು. ರಾಜಾ ಯಯಾತಿ ತನ್ನ ಉತ್ತರೀಯವನ್ನು ಆಕೆಯತ್ತ ಎಸೆದು ತಿರುಗಿ ಆಕೆಗೆ ಬೆನ್ನು ಹಾಕಿ ನಿಂತನು. ರಾಜನ ಉತ್ತರೀಯವನ್ನು ತನ್ನ ಶರೀರಕ್ಕೆ ಸುತ್ತಿಕೊಂಡು ಮೇಲೆ ಬರುತ್ತಿರುವ ಹೆಜ್ಜೆಯ ಸದ್ದು ಕೇಳಿ ತಿರುಗಿ ಆಕೆಯ ಮುಖ ನೋಡುತ್ತಾನೆ. ಆಕೆಗೆ ಇತ್ತ ಸಹಾಯಕ್ಕಾಗಿ ಕೃತಜ್ಞತೆಗಳನ್ನು ಮುಖಭಾವದಲ್ಲೇ ಕನ್ಯೆ ಅರ್ಪಿಸಿದಳು. ಕಣ್ಣೋಟದಲ್ಲೇ ಹೃದಯದ ಭಾವವನ್ನು ಇಬ್ಬರೂ ಪರಸ್ಪರ ಅರ್ಥೈಸಿಕೊಂಡರು. ಅರೆ ಕ್ಷಣ ಮೈಮರೆತರೂ ರಾಜ ಯಯಾತಿ ಎಚ್ಚೆತ್ತುಕೊಂಡನು. ತನ್ನ ಪರಿಚಯವನ್ನು ಆಕೆಗೆ ಸವಿವರವಾಗಿ ತಿಳಿಸುತ್ತಾನೆ. ಬಳಿಕ ಈ ರೀತಿ ವಿವಸ್ತ್ರಳಾಗಿ ಆಕೆ ಅಲ್ಲಿರಲು ಕಾರಣ ಮತ್ತು ಆಕೆ ಯಾರು ಎಂಬಂತೆ ಪರಿಚಯವನ್ನು ಕೇಳುತ್ತಾನೆ. ತಾನು ಗುರು ಶುಕ್ರಾಚಾರ್ಯರ ಮಗಳು ದೇವಯಾನಿ. ಇಲ್ಲೇ ಪಕ್ಕದಲ್ಲಿ ಕಾಡಿನೊಳಗೆ ವೃಷಪರ್ವನೆಂಬ ರಾಕ್ಷಸನೊಬ್ಬನಿದ್ದಾನೆ.

ಮುಂದುವರಿಯುವುದು….

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page