
ಬೆಂಗಳೂರು: ಇಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಬೌರಿಂಗ್ ಆಸ್ಪತ್ರೆಯ ತುರ್ತು ವಿಭಾಗದ ಸಮೀಪ ಕಾಂಪೌಂಡ್ ಗೋಡೆ ಕುಸಿದು ಭೀಕರ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಏಳು ಮಂದಿ ಬಲಿಯಾಗಿದ್ದಾರೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಆರ್ ಅಶೋಕ್ ಈ ಘಟನೆಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ಮಳೆಗಾಲಕ್ಕೂ ಮುನ್ನ ಹಾಳಾಗಿರುವ ಗೋಡೆಗಳು, ಹಳೆಯ ಕಟ್ಟಡಗಳು ಹಾಗೂ ಅಪಾಯಕಾರಿಯಾದ ಮರಗಳ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕಿತ್ತು. ಮೊದಲ ಮಳೆಯಲ್ಲೇ ಇಂತಹ ದುರಂತ ಸಂಭವಿಸಿರುವುದು ಆಡಳಿತದ ವೈಫಲ್ಯವನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದರು.
ಈ ವೇಳೆ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ದೆಹಲಿಯಲ್ಲಿ ಇರುವುದನ್ನೂ ಪ್ರಶ್ನಿಸಿದ ಅವರು ಸರ್ಕಾರವು ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಮತ್ತು ಗಾಯಾಳುಗಳಿಗೆ 1 ಲಕ್ಷ ರೂ. ಪರಿಹಾರ ನೀಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಅವರು ಒತ್ತಾಯಿಸಿದರು.



















